ಹೊಸ ವರ್ಷ Poem by Praveen Kumar in Bhavana

ಹೊಸ ವರ್ಷ

ಸಾವಿರ ಕಹಿ ಸಹಿ ನೆನಪುಗಳ ರಸಗಂಟು,
ಹೂವು, ಎಸಳು, ಮೂಳ್ಳು, ಕಳ್ಳಿ, ದಂಟುಗಳ ನಂಟು
ಹಿತವಿಹಿತ ಸುವಾಸನೆ ಬಿಟ್ಟು ಜಾರುತ್ತಿದೆ ಮೆಲ್ಲ ಮೆಲ್ಲ,
ಚರಿತ್ರೆಯಾಗರದತ್ತ, ನೆನಪಿನಾಳದ ಭೂತಗರ್ಭದತ್ತ.

ಏರು ಪೇರು, ನೋವು ನಲಿವುಗಳ ಸಂಕೋಲೆಯನೆಳೆದು
ಓಡುತ್ತಿದೆ ವರ್ಷ, ದ್ಠೃಷ್ಠಿ ಪಟಲದಿಂದ ದೂರ ದೂರ,
ಕಾಲ ಹೊಸ್ತಿಲು ದಾಟಿ, ಹೆಜ್ಜೆ ಮುಂದಿಕ್ಕಿದ ಹಾಗೆ,
ಕಾಲ ಕಂದರ, ಪಾತಾಳ ಬಿಚ್ಚುತ್ತಿದೆ ಬಾುಯಗಲ.

ಹಳೇ ಬೀಜಗಳೊಡೆದು ಹೊಸ ಮೊಳಕೆಯೊಡೆಯುವುವು,
ಹೊಸ ಪೈರು, ಹೊಸ ಹಸಿರು, ಹೊಸ ಹೂವು ಎದುರು ಹಿಡಿದು;
ಸುತ್ತಿ ಸುತ್ತಿ ಚಕ್ರ, ಬರುತ್ತದೆ ಹೊಸ ವರ್ಷ,
ಹೊಸ ಹುರುಪು, ಚೈತನ್ಯ, ಹೊಸ ದೀಕ್ಷೆ ಹೊಸ ಹರ್ಷ.
ಹಳೆಯದನು ಹೀರಿ ಬರುತ್ತದೆ ಹೊಸಕಾಲ, ಹೊಸ ಭಾವ,
ನೆಲದಿಂದ ಜಿಗಿದು ದೂರದಸ್ವಷ್ಟ ಗಗನದತ್ತ,
ಸುಖ ಪುಳಕದ ಬೆನ್ನೇರಿ, ಹೊಸ ಆಶೆಗಳ ಹೇರಿ,
ನೆಲ ಬಿಟ್ಟು ಮೇಲೇರುತ್ತಿದೆ ಹೊಸ ವರ್ಷ.

ಹೊಸ ವರ್ಷದ ಚಿಪ್ಪಿನಲಿ, ಅಶೆ ಕನಸು ಮುತ್ತುಗಳು,
ಏನೇನೋ ಬೀಜಗಳು, ಸಾವಿರ ಹುಳು ಹುಪ್ಪಡಿಗಳು;
ಒಡೆದು ನೋಡುವ ಹಾಗಿಲ್ಲ, ಚಪ್ಪರಿಸಿ ಜೀರ್ಣಿಸುವ ಹಾಗಿಲ್ಲ,
ಚಿಪ್ಪು ತೆರೆದಾಗ ಒಂದೊಂದು ಹೊರ ತೆವಳುವುವು.

ಇದೊಂದು ಮುಗಿಯದ ಜೀವನ ನವೀಕರಣದಾಟ,
ಹೊಸ ಹೆಜ್ಜೆ, ಹೊಸ್ತಿಲು, ಹೊಸರಂಗ, ಹೊಸ ಆಟ;
ಹಳೆ ಲೆಕ್ಕ ಮುಗಿಸಿ ಮತ್ತೆ ಲಾಭ ನಷ್ಟ ಸಮೀಕರಿಸಿ,
ಮತ್ತೆ ಮತ್ತೆ ಫೀನಕ್ಸ್‍ನಂತೆ ಮೇಲೇಳುವ ಪರಪಾಟ.

Friday, April 29, 2016
Topic(s) of this poem: new year
COMMENTS OF THE POEM
READ THIS POEM IN OTHER LANGUAGES
Close
Error Success