ಮನಸ್ಸು Poem by Praveen Kumar in Bhavana

ಮನಸ್ಸು

ಹಕ್ಕಿಯಾಗಿ ಹಾರುವಾಸೆ,
ಜಿಂಕೆಯಾಗಿ ಜಿಗಿಯುವಾಸೆ,
ಮರವಾಗಿ ಮೇಲೇರುವಾಸೆ,
ಮೇಲೇರಿ, ಫಲವಾಗಿ ಒಣಗಿ,
ಬೀಜವಾಗಿ ನೆಲಸೇರುವಾಸೆ;
ಮದ ಹಿಡಿದ ಮರ್ಕಟನ ಹಾಗೆ
ಮರದಿ ಮರಕೆ ಹಾರುವಾಸೆ,
ಸಿಹಿ ನೀರಿನೊರತೆಯಂತೆ,
ಮುಂದೆ ಮುಂದೆ ಹರಿಯುವಾಸೆ;
ತಟದ ಮೇಲೆ ಬೆಳೆದು ನಿಂತ
ಫಲಭರಿತ ಮರಗಿಡಕೆ
ನೀರಿನಾಸರೆ ಆಗುವಾಸೆ;
ಆಕಾಶ ಪಟ್ಟದಲ್ಲಿ ಸುಡುವ
ಸೂರ್ಯ ದೇವನ ದರ್ಪದಲ್ಲಿ
ಕಳೆ, ಒಣ ಎಲೆಯ ಸುಟ್ಟು
ಎಳೆ ಜೀವಕೆ ದಾರಿ ಕೊಟ್ಟು
ಆಗಕೆ ದೀವಿಕೆಯಾಗುವಾಸೆ.

ಮನಸ್ಸೊಂದು ಸಿಹಿ ನೀರಿನೊರತೆ,
ಒಳಗೆ ಬೆಳಗುವ ಅಸ್ಪಷ್ಟ ಹಣತೆ,
ಕಾಲ ನೆಲದ ಕಟ್ಟು ಒಡೆದು
ಏರಿ ಇಳಿವ ಆಶೋತ್ತರದ ಕಡಲು.

ಇಲ್ಲಿ ಅಲ್ಲಿ ಎಲ್ಲೆಲ್ಲೂ ಇರುವ,
ನಿನ್ನೆ, ನಾಳೆ, ಇಂದು ಇರುವ,
ಇಲ್ಲಿದ್ದರಲ್ಲಿ, ಅಲ್ಲಿದ್ದರಿಲ್ಲಿ,
ಬೇರೆಲ್ಲೋ ಇರುವ ಆಸೆ, ಮನಸು;
ಬೆಳಗಿನ ತಂಬೆಲರಿನಂತೆ
ಸುತ್ತಾಡುವಾಸೆ ಮನಸಿನದು,
ಎಲ್ಲೂ ಇರದೆ ಎಲ್ಲೆಲ್ಲೂ ಇರುವ
ಮನಸು ವಿಕಟ ಚಲನವಲನ;
ಬೇಡಿದುದರ ಬೇಡವೆಂದು,
ಬಿಟ್ಟೋಡುವುದರ ಬೆನ್ನನ್ನೇರಿ
ಸದಾ ಬೇಟೆಯಾಡುವುದು.
ನಿಲ್ಲಿಸಿದರೆ ಹರಿದು ಓಡಿ,
ಓಡಿಸಿದರೆ ಬಳಲಿ ನಿಲ್ಲುವ
ಮಿಂಚಿನೆಳೆಗಳ ಬಲೆ ಮನಸ್ಸು;
ಬಲೆಗೆ ಬಿದ್ದ ಹಾತೆ, ಪತಂಗ
ಸುತ್ತಿ ಸುತ್ತಿ ಬತ್ತಿ ಬಿದ್ದು
ದಾರಿ ತಪ್ಪುವ ಗೂಡು ಮನಸ್ಸು.

ಮೊಟ್ಟೆಯೊಡೆದು ಮರಿಯ ಕೊಡುವ,
ಕಾವನಿಡುವ ಗೂಡು ಮನಸ್ಸು,
ತೂಗಿ ಹಾಡುವ ತೊಟ್ಟಿಲು;
ನೆಲದಿಂದೆದ್ದು ಆಕಾಶಕ್ಕೇರಿ,
ಮತಿಮಥನದ ಮೆಟ್ಟಲೇರಿ

ಅಂತ್ಯ ಅನಂತದ ಮಧ್ಯೆ ನಿಂತು
ಜೀವ ನಿರ್ಜೀವನದ ನಡುವೆ ಮಿಂಚುವ
ಋಣಧನದ ವಿದ್ಯುತ್ತು,
ಜೀವ ವಿಕಸನದ ಸಂಪತ್ತು.

ಮನಸು ಮನಸು ಕೂಡಿದಾಗ ಮಧುರ ಭಾವ ಜೀವದುಗಮ,
ಮನಸು ಬೆಸುಗೆ ಬಿಟ್ಟ ಚಣವೆ ಅಶಾಂತಿ, ದೊಂಬಿ, ವಿನಾಶ ಅಲ್ಲಿ,
ಮನಸಿನಿಂದ ಶಕ್ತಿ, ಚಲನೆ, ಸ್ಠೃ, ಶಿಸ್ತು, ನಿಷ್ಠೆ, ನಿಯಮ,
ಒಡೆದ ಮನಸು ಸಿಡಿಮದ್ದಿನಂತೆ, ಸಿಡಿತ, ಒಡೆತ, ಅಸ್ತವ್ಯಸ್ತ ಎಲ್ಲ.

Friday, April 29, 2016
Topic(s) of this poem: mind
COMMENTS OF THE POEM
READ THIS POEM IN OTHER LANGUAGES
Close
Error Success