ಸೂರ್ಯ ಚಂದ್ರ Poem by Praveen Kumar in Bhavana

ಸೂರ್ಯ ಚಂದ್ರ

ಸೂರ್ಯನು ಮೂಡಲು ಚಂದಿರ ಮಸಕಾಗುವಳು,
ಹುಣ್ಣಿಮೆ ಮೂಡಲು ನೇಸರು ಕೆಳಗಿಳಿಯುವನು,
ಆಕಾಶದ ಮೇಲಿನ ಬೆಳ್ಳಿಯ ಬಿಡಿ ಗೆಜ್ಜೆ,
ನಿಸರ್ಗದಾಟದ ಈ ವಿಸ್ಮಯ ಕಂಡು
ಕಿಲಕಿಲ ನಕ್ಕಿತು ಗಗನದ ಉದ್ದಗಲ.

ಚಂದಿರ ಹುಣ್ಣಿಮೆ ಮೈಯಲಿ ಬಂದಳು,
ಎಲ್ಲೆಡೆ ಬೆಳಕಿನ ಹೊಳಪನು ತಂದಳು,
ಬೆಳಕಿನ ಹಬ್ಬವು ಆಕಾಶದ ತುಂಬ;
ಚಂದ್ರನ ಮುತ್ತಿದ ಪರಿವಾರವ ಕಂಡು
ಮುಖ ಕೆಂಪಗೆ ಮಾಡಿ, ನೇಸರ ರಾಜ
ಮೆಲ್ಲನೆ ಜಾರಿದ ಕಾಣದ ಹಾಗೆ.

ಮಲಗಿದ ನೇಸರು ತಲೆ ಎತ್ತಲು ಪೂರ್ವದಿ,
ಚಂದ್ರನು ಕಂಡನು ಸಖಿಯರ ಮಧ್ಯೆ;
ರಾಜನ ಕಂಡಾ ಸಖಿಯರ ಹಿಂಡು,
ಮೆಲ್ಲನೆ ಜಾರಿತು ಆಕಾಶದ ಹಿಂದೆ;
ಮೇಲೇರುವ ರಾಜನ ಒಳ ಕೋಣೆಗೆ ಕರೆಯುತ
ಚಂದಿರ ರಾಣಿಯು ಮರೆಯಾದಳು ಮೆಲ್ಲ.

ಚಂದಿರ ಸೂರ್ಯರ ಈ ಕೇಳಿಯ ಕಂಡು,
ಹೂಗಳು ನಕ್ಕವು ಸೌಗಂಧವ ತೀಡಿ,
ಈ ಆಟವ ನೋಡಲು ಆಕಾಶವ ತುಂಬಿ
ಖಗಗಳು ಕಿಲಕಿಲ ಸಂಗೀತ ಹಾಡಿದುವು,
ರಾಜರಾಣಿಯ ಸ್ವಂತ ಭೇಂಟದ ಆಟ
ಭೂಮಿಗೆ ತಂದಿತು ಕೆಂಪಿನ ರಾಗ.

ರಾಣಿಯ ಮಂದ ಬೆಳಕಿನ ವೈಭವ
ತಂದಿತು ಕನಸಿನ ಮಾನಸ ರಾಜ್ಯ,
ನೇಸರ ರಾಜನ ಬಿಸಿಲಿನ ಬೇಗೆ
ತಂದಿತು ನೆನಸಿನ ಸತ್ಯದ ಲೋಕ,
ಈ ಕನಸು ನೆನಸು ನಿಸರ್ಗದ ವಿಸ್ಮಯ.

ಮಿನುಗುವ ತಾರೆಗೆ ಚಂದಿರನಲ್ಲಿ ಪ್ರೀತಿ,
ಯಾಕೋ ಸೂರ್ಯನು ಎಂದರೆ ಭೀತಿ,
ಚಂದಿರನೆಂದರೆ ಮುತ್ತುವ ನಕ್ಷತ್ರ
ನೇಸರನೆದುರಲಿ ಬಿಳಿಚಿ ಓಡುವುವು,
ರಾಜನ ಕೈಗೆ ರಾಣಿಯ ಬಿಟ್ಟು,
ಬೆಳಕಿನಾವರಣದಿ ಕಾಣದ ಕಡೆಗೆ.

ಇದು ರಾಜರಾಣಿಯ ಪ್ರೇಮವೊ, ಕಲಹವೊ,
ಇನ್ನೆಷ್ಟು ಕಾಲ, ಈ ಬೆನ್ನಟ್ಟುವ ಆಟ?
ರಾಜರಾಣಿಯ ದೈನಂದಿನ ಆಟ?
ಇದು ಪ್ರೇಮದ ಕಲಹವೊ, ಕಲಹದ ಪ್ರೇಮವೊ,
ಅಂತೂ ಲೋಕಕೆ ತಂದಿತು ತಿಂಗಳ ಬೆಳಕು.

Friday, April 29, 2016
Topic(s) of this poem: sun
COMMENTS OF THE POEM
READ THIS POEM IN OTHER LANGUAGES
Close
Error Success