ಇದು ಅಂತಹದ್ದೊಂದು ಕಾವ್ಯ Poem by Praveen Kumar in Bhavana

ಇದು ಅಂತಹದ್ದೊಂದು ಕಾವ್ಯ

ಬರೆಯಬೇಕೆಂದು ಕೂತರೆ ವಸ್ತುಗಳ ತಕಲಾಟ,
ಹಲವು ವಸ್ತುಗಳು, ಹಲವಾರು ಆವೃತ್ತಿಗಳು,
ಎಲ್ಲ ಒಮ್ಮೆಗೆ ದಾಳಿುಕ್ಕುವುವು;
ಸಮಾಧಾನ ಒಂದಕ್ಕೂ ಇಲ್ಲ,
ಸರದಿಯ ಜ್ಞಾನ ಮೊದಲೆ ಇಲ್ಲ,
ಒಂದೊಂದನು ಹೆಕ್ಕಿ ಪರಿಶೀಲಿಸುವ ಹಾಗೂ ಇಲ್ಲ,
ಒಂದರ ಕಾಲನ್ನೊಂದು ಏಳೆಯುವ ಪ್ರವೃತ್ತಿ;
ಎತ್ತರದವು ಒಂದೂ ಇಲ್ಲ,
ಎಲ್ಲ ಕುಳ್ಳ ಪಿಳ್ಳೆಗಳು,
ಎಲ್ಲದರ ಭುಜವೇರಿ ನಿಲ್ಲುವ ಭೇತಾಳ
ಒಚಿದೂ ಇಲ್ಲ;
ಕೈ ಚಾಚಿದರೆ ದೂರ ಓಡುವುವು,
ಬುದ್ಧಿಯಲಿ ಕರಗುವುವು,
ಭಾವದ ಓಘ ವೇಗಗಳಿಲ್ಲ,
ವಿದ್ಯುತ್ತಿನ ಮಿಂಚು ಬಳ್ಳಿಗಳಿಲ್ಲ;
ಹಿಂಜಿದರೆ ಟೊಳ್ಳು, ಒಳಗೆ ಗಂಜಿ,
ಊದಿದರೆ ಹಾರಿ ನಂದಿ ಹೋಗುವುವು;
ಹಗುರ, ಗಾಳಿ ಹಗುರ, ಹದರ, ಸದರ,
ಸತ್ವ ಭಾರ ಏನೆಂದೆ ತಿಳಿದಿಲ್ಲ.

ನಿರ್ಭಾರಕೆ ಆಸೆ ಬಹಳ,
ನಿರ್ಭಾರ ಹಾರುವುದು ಬಹಳ,
ತನ್ನನ್ನು ನಿವೇದಿಸುವ ಹಗುರತನ ಸಹಜ;
ಕಿಡಿಕಿ ಬಾಗಿಲು ತೆರೆದು ಒಳ ಬಿಟ್ಟಾಗ
ಮೂಲೆ ಮೂಲೆಯ ಆವರಿಸಿ ಕೂತು,
ಎದುರು ಬದುರಾಗಿ ಹೊಡೆದಾಡುವುವು;
ಇದು ಮತಿ ಮಥನವಲ್ಲ,
ದ್ವಂದ್ವ ಹೋರಾಟ, ದ್ವೇಶದ ಕಾದಾಟ,
ಬಿಸಿಯೇರುವುದರ ಹೊರತು,
ಬೇರೆ ಕಿಡಿ ಹಾರುವುದಿಲ್ಲ;
ಪ್ರತಿಭೆ ಜಪ್ಪೆಂದು ಕೂತು
ನಿದ್ರೆ ಮಾಡುತ್ತದೆ,
ಗೊರಕೆ ಹೊಡೆಯುತ್ತದೆ,
ಸಾಂದ್ರ ವಾತಾವರಣದ ಒಳಗೆ;
ಪಾದರಸ ಇಲ್ಲ,
ಚಿನ್ನದ ಹೊಳಪು ಇಲ್ಲ,
ಎಲ್ಲ ಅಲ್ಯುಮಿನಿಯಮಿನ ಹಾಗೆ,
ಹುಳಿಸಿದರೆ ತೂತು ಬೀಳುವುದು ಜಾಸ್ತಿ,
ಜಜ್ಜುತ್ತದೆ, ಒಡೆಯುವುದೆ ಇಲ್ಲ.

ಏನೆಂದರೂ ನಡೆಯುತ್ತದೆ,
ಇದು ವಿದ್ಯುತ್ತು ಪ್ರವಾಹಕ,
ಪ್ರತಿರೋಧವೆ ಇಲ್ಲ,
ಬೆಳಕೂ ಇಲ್ಲ,
ಬಿಸಿಯೇರುತ್ತದೆ ಬೇಗ,
ಈ ವಸ್ತುಗಳನೆತ್ತಿ ಜಜ್ಜಿ, ಬಡಿದು,
ಒಂದು ರೂಪಕ್ಕೆ ತರಬೇಕು,
ಕಾವ್ಯವಾಯಿತೆನಿಸಬೇಕು;
ಅದಕ್ಕೆ ರಸಗಳು ನಿದ್ಧ,
ತೂತುಗಳ ತಾಪತ್ರಯ,
ಅಲಂಕಾರ ಅಸಂಬದ್ಧ,
ಅಂಟದೆ ಸೋರಿ ಹೋಗುತ್ತವೆ;
ರಸ ಅಲಂಕಾರಗಳಿಲ್ಲದ ಗಂಜಿಯ ಗತಿ,
ಅದು ಮೆದು, ಹಗುರ, ಅನುಕೂಲ;
ಕಡೆದು ಭಾಷೆಯ ಮಸಾಲೆ,
ತರಬೇಕು ಕಾವ್ಯದ ಪಾಕ;
ರುಚಿಗೆ ಉಪ್ಪು ಕಲ್ಲನು ಬೆರೆಸಿ
ಕುಡಿದರೂ ಹಿಂಗಿಸುತ್ತದೆ ಕಾವ್ಯದಾಹ,
ನೀಗುತ್ತದೆ ಕಾವ್ಯದ ಹಸಿವು,
ಇದು ಅಂತಹದ್ದೊಂದು ಕಾವ್ಯ.

Friday, April 29, 2016
Topic(s) of this poem: poems
COMMENTS OF THE POEM
READ THIS POEM IN OTHER LANGUAGES
Close
Error Success