ಮಳೆ Poem by Praveen Kumar in Bhavana

ಮಳೆ

ನೋಡಾಕಾಶದಲ್ಲೆಲ್ಲ ಮೋಡಗಳಬ್ಬರ,
ಪ್ರವಾಹದಿ ಹರಿಯುವ ಕರಮೋಡದ ಸಂತೆ
ಅಲೆಗಳ ಹಾಗೆ ತೇಲುತ್ತಿವೆ ಮುಂದೆ;
ತಂಗಾಳಿಯು ತಂಪಿನ ಸೆಲೆಯನು ಬೀಸಿ
ನಾಡಗಲವ ನಡುಗಿಸಿ ಹಾರಿತು ದೂರ;
ಕಪ್ಪೇರಿದ ಗಗನವನದ್ದಿತು ಮರುಕ್ಷಣ
ಮಿಂಚಿನ ಬೆಳಕಿನ ವಿರಾಟ ಪರದೆ;
ನಿಮಿಷದನಂತರ ನೀರವಮಯ ಪ್ರಕೃತಿ
ಸಿಡಿಸಿತು ಗುಡುಗಿನ ಸಿಡುಕಿನ ಬುಗಿಲು.

ವಿಷಣ ಗಗನದ ಮುಖ ಕಪ್ಪೇರಿತು,
ನೀರಿನ ಹನಿಗಳು ಮೇಲಿಂದುದುರಿತು;
ದಟ್ಟನೆ ನೀರಿನ ಧಾರೆಯ ಓಘ
ಮರಗಿಡ ಕಟ್ಟಡ ನೀರಿನಲ್ಲಿದ್ದಿತು;
ದೂರದಿ ನುಗ್ಗಿದ ಗಾಳಿಯ ಒದೆತಕೆ
ಮರಗಿಡ ಎಡಬಲ ಹಾಕಿತು ತಾಳ;
ಭೂಮಿಯನಪ್ಪಿದ ನೀರಿನ ಧಾರೆ
ಆವರಿಸಿತು ನೆಲ, ಹೊಲ, ಮರಬುಡ, ಹಳ್ಳ,
ಉಕ್ಕೇರಿತು ಹರಿಯುವ ನೀರಿನ ರಾಶಿ.

ಚಿಲಿಪಿಲಿ ಹಕ್ಕಿ, ಹೊಡೆದಾಡುವ ಮಕ್ಕಳು
ಗುಡುಗಿಗೆ ನಡುಗೆ ಗೂಡಲ್ಲಡಗಿವೆ;
ರೌರವ ನೀರವತೆಯ ನಿರ್ಜನ ಸ್ಟೃ
ಮೋಡದಬ್ಬರಕೆ, ಗಗನದುಬ್ಬರಕೆ
ಬೆಚ್ಚುತ ನಿಡುಸುಯಿಯಿಡುವುದ ನೋಡಿ;
ಮಳೆ-ಗಾಳಿಯ ಸೆಳೆಯಲಿ ಬಳಲಿ ನಿಸರ್ಗ
ಚೆಂಗದಿರನ ಸ್ಪರ್ಷಕೆ ಚೆಲ್ಲಿದೆ ದೇಹ;
ದೂರ ದಿಗಂತದಿ ಧಾವಿಸಿ ಬಿಸಿಲು
ಬರುತ್ತಿದೆ, ತರುತಿದೆ ಹೊರಪುತ್ಸಾಹ.

Friday, April 29, 2016
Topic(s) of this poem: rain
COMMENTS OF THE POEM
READ THIS POEM IN OTHER LANGUAGES
Close
Error Success