ಒಣ ಪ್ರೇತಗಳು Poem by Praveen Kumar in Bhavana

ಒಣ ಪ್ರೇತಗಳು

ಅದೊಂದು ದಡ್ಡಪ್ರೇತಗಳ ದೊಡ್ಡ ಕಾಡು,
ಕಪ್ಪು ಮುಖವಾಡದ ಒಳಗೆ ಸುಟ್ಟ ಮುಖಗಳನಿಟ್ಟು,
ನಿಶ್ಯಕ್ತಿಯ ಸ್ವರದಲ್ಲಿ ನಿಸ್ಸತ್ವ ಚಲನೆಯ ಹೇರಿ
ಸುತ್ತು ಸುತ್ತು ಸುತ್ತುತ್ತಿವೆ ಈ ಯಂತ್ರಪ್ರೇತದ ರಾಶಿ;
ನೆಲದ ಸಮತಲ ಬಿಟ್ಟು ಗಾಳಿಲೋಕಕೆ ಹಾರಿ,
ಕಟ್ಟಿಟ್ಟ ಕೈಕಾಲಲ್ಲಿ, ನಿಶ್ಯಕ್ತ ರೆಕ್ಕೆ ಪಟಪಟಿಸಿ,
ದೇಹಭಾರದ ಹೊರೆಗೆ ಹಾರಲಾಗದೆ ಪ್ರೇತ,
ಮುಖವಾಡದ ಹಿಂದೆ ನಿರ್ವರ್ಣ ಮುಖದಲ್ಲಿ
ಗುರಿ ಮರೆತು ಸುತ್ತುತ್ತಿವೆ ಸುತ್ತುಸುತ್ತು.

ಕುರುಡು ಹಾರಾಟದ ನಡುವೆ ದಾರಿ ತಪ್ಪುವುವು,
ಅಡ್ಡತಿಡ್ಡಿ ಚಲನೆಯಲ್ಲಿ ಅಡ್ಡಿ ವಿರಸಗಳೇಳುವುವು,
ಈ ಪ್ರೇತಕಾಡಿನಲಿ ದುಷ್ಟದ್ಠೃ ಕಾಟಗಳು,
ಮೈಸೇರದ ಆಹಾರ ನಂಜಾಗಿ, ಮೈಕಪ್ಪಾಗಿ
ಎದುರಾದ ಮೈಮೇಲೆ ತೀಟೆ ತೋರುವುವು,
ಕಾದಾಟ, ಹೋರಾಟ, ಒಡಕುಗಳು, ತೊಡಕುಗಳು,
ತಿಳಿಗೇಡಿ ಕಪಟಗಳು, ನಿರ್ದಾಕ್ಷಿಣ್ಯ ಒದೆತಗಳು,
ಹೊರಗೆ ವಿಧೇಯ ವಿಧೇಯಕಗಳ ವಂಚನೆಯ ಪಾತ್ರ,
ಸದಾ ಸೇವಕನೆಂಬ ಬದುಕುವ ಜರ್ಜರಿತ ತಂತ್ರ
ತುಂಬಿರುವ ಹೊಲಸು ಹೊಟ್ಟೆಗಳ ದಡ್ಡಪ್ರೇತಗಳು.
ನೆಲಬಿಟ್ಟು ಗಾಳಿಯಲಿ ಹಾರುವುದರ ಹುರುಪು,
ಮುಖವಾಡ ಬಿತ್ತಿ ಬಿಚ್ಚಿ ಯಾರೂ ನೋಡದ ಸ್ಥೈರ್ಯ
ದಡ್ಡಪ್ರೇತಕೂ ಕೊಟ್ಟಿದೆ ಮೊಂಡು ಧೈರ್ಯ, ಬಿರುಸು,
ಮನೆ ಜನ ಕಾಯುವ ಪ್ರೇತ ಜೀತ ಉದ್ಯೋಗದಲಿ
ರುಂಡ ಕಡಿದ ಮುಂಡ ಹೊತ್ತು, ಕಾಲು ಜಡಿದು,
ನಿರ್ಬಲ ಹೂಂಕಾರದಲಿ ಕಂಡವರ ಮೈಯೇರುವುದು;
ಸತ್ವನಿಸತ್ವಗಳ, ಪಾದಮಕುಟಗಳ ಬೇಧ ತಿಳಿದವು ಅವಲ್ಲ;
ಜ್ಞಾನಜ್ಞಾನದ ಪರಾಮರ್ಶೆ ಪ್ರೇತಜಾತಿಗಜ್ಞಾತ;
ಮೂಗುದಾರದಿ ವಿಧಿಯಂತ್ರ ತೋರಿಸದ ಹೊರತು
ಪ್ರೇತಕಾಟದ ಭೀತಿ ತಪ್ಪಿಹೋಗುವುದಿಲ್ಲ.

ಈ ಪ್ರೇತರಾಶಿಯ ಮಧ್ಯೆ ಕರಿಪ್ರೇತವಾಗಿರಬೇಕು;
ಗೂಡಿನೊಳಗಿನ ಬಣ್ಣ ಲಾವಣ್ಯಗಳ ಮರೆತು,
ಕೃತಕ ಮುಖವಾಡದ ಕೆಳಗೆ ನಿರ್ಜೀವ ನಗುವನುನಟಿಸಿ,
ವಿಧೇಯ ವಿಧಾಯಕಗಳ ವಂಚನೆಯ ಪಾತ್ರದಲಿ
ಯಂತ್ರಪ್ರೇತದ ತೀಟೆ ಕಾಟ ಕಪಟಗಳ ತಾಳಿ
ಹೊಲಸು ಹೊಟ್ಟೆಗೂ ಗೊಡ್ಡು ಸಲಾಮನ್ನಿಡಬೇಕು,
ದೇಹಭಾರದ, ಹೊರಗೆ ಕೈಮುಗಿಯಬೇಕು;
ಪ್ರೇತಗಳ ಕಾಡಿನಲಿ ಬಿದ್ದು, ಹಾದಿ ತಪ್ಪಿರುವ ನಾವು,
ಪ್ರೇತಗಳಲೊಂದಾಗಿ, ಒಣ ಪ್ರೇತಗಳ ಜೀತದಲಿ
ನಮ್ಮತನ ಕಟ್ಟಿಟ್ಟು ದಿನವೆಣಿಸಬೇಕು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success