ಧರ್ಮದ ನಂದಾದೀಪ ನಂದುತ್ತಿದೆ ನೋಡಿ Poem by Praveen Kumar in Bhavana

ಧರ್ಮದ ನಂದಾದೀಪ ನಂದುತ್ತಿದೆ ನೋಡಿ

ಧರ್ಮದ ನಂದಾದೀಪ ನಂದುತ್ತಿದೆ ನೋಡಿ,
ಮತದ್ವೇಶದ ಕಾಡ್ಗಿಚ್ಚು ಹಬ್ಬುತ್ತಿದೆ ನೋಡಿ.

ಮಾನವ ಚೇತನದ ಪ್ರವಾದಿಗಳ ಅಂತರಾಳದನಾದ
ದಯೆ ಧರ್ಮ ಐಕ್ಯಮತ್ಯ ಪರಾರ್ಥದ ನುಡಿ ಸ್ವಾದ
ದ್ವೇಷ ಮತ್ಸರ ದಾನವತೆಯಾಗಿ ಹುಳಿಗೊಳ್ಳುತ್ತಿದೆ ನೋಡಿ,
ಸೌಹಾರ್ದದ ಹಾಲಿನಲ್ಲಾವ ಬಗೆಯ ಒಡಕು ಬಂದಿದೆ ನೋಡಿ,

ಜೀವನ ಜಂಜಾಟದ ಮಧ್ಯೆ ಸರಿದಾರಿ ಹುಡುಕಿದ ಹಿರಿಯ
ತಪೋನಿಧಿ ಚಿಂತಕರ ತಪಸ್ಸಿನ ಬೆಂಕಿ
ಸುಡುತ್ತಿದೆ ಮಾನವತೆ, ಗಬ್ಬು ಗಬ್ಬರಿಸುತ್ತಿದೆ,
ಭಯದ್ವೇಷ ಕ್ಲೇಷಗಳ ಮಬ್ಬು ರಕ್ತ ಹುಚ್ಚು ಹಿಡಿಸುತ್ತಿದೆ,

ವಿಶ್ವಪ್ರೇಮಾಮೃತ ಘಟದಲ್ಲೀ ದ್ವೇಷವಿಷ ತುಂಬಿತೇಕೆ?
ಪರಾರ್ಥದ ದಿವ್ಯ ಸಂಕೋಲೆ ಮಾನವ ಸಂಬಂಧ ಮುರಿಯುತ್ತಿದೆ ಏಕೆ?
ಮತದ್ವೇಷಕ್ಲೇಶದ ಮಧ್ಯೆ ಧರ್ಮ ಅಧರ್ಮವಾಗುತ್ತಿದೆ ನೋಡಿ,
ಮತಗ್ರಂಥ ಜ್ಞಾನೋಕ್ತಿಗಳು ಬಿಕ್ಕಟ್ಟಿನ ವಿಷವಾಗುತ್ತಿವೆ ನೋಡಿ.

ಸರ್ವೋದಯಕ್ಕೆಂದು ಜ್ಞಾನಿಗಳಿತ್ತ ಪರಾರ್ಥ ಫಲ ತುಂಬ
ಪರಜೀವಿ ಹುಳಹುಪ್ಪಡಿ ಹಬ್ಬಿ ಕೊಬ್ಬುತ್ತಿವೆ ುಂದು;
ಭೂತಾು ವಾತ್ಸಲ್ಯದಲಿ ಪೂಡಿಸಿದ ಪುಣ್ಯ ಹೃದಯ ಹಾಲು
ವಿಷವಾಗಿ ಮಕ್ಕಳಲಿಂದು ರಕ್ತವಿಳಿಸುತ್ತಿದೆ ಯಾಕಿಂದು?

ಭಾವೋದ್ರೇಕದ ವಿಷ ಸುತ್ತಸುತ್ತಿ ತುಂಬಿದೆ ಹೇಗೆ
ಧರ್ಮಯಜ್ಞದ ಧೂಮ ಮತದ್ವೇಷದ ಮಬ್ಬು ಮೋಡವಾಗಿದೆ ಹಾಗೆ;
ಭಯೋದ್ವೇಗ, ದ್ವೇಷ, ಸಂಶಯ ನಿಂತು ಬೆಳಗು ಬರುವುದು ಎಂದು?
ಜೀವ ಜೀವದ ಸೇತು ಮತ್ತೆದ್ದು ನಿಲ್ಲುವುದು ಎಂದು?

ಮತ ಸಾಮರಸ್ಯವು ಧರ್ಮ ಕಲ್ಯಾಣದ ಸಾರಸರ್ವಸ್ವ,
ಧರ್ಮ ಪ್ರವರ್ತನೆಗಿರುವುದು ಅದೊಂದೆ ಮಾರ್ಗ,
ಧರ್ಮಾಸ್ವಾದನೆ ಬಿಟ್ಟೀ ಮತ ಭಿತ್ತಿಯ ಮೋಹ ಬಂದಿತೇಕೆ?
ತೊಗಲಿನಾಶೆಗೆ ರಕ್ತ ಚೆಲ್ಲುವುದು ಸರಿಯೆ?

ನೀವು ನೀವಾಗಿರುವುದು ಪಾರಮಾರ್ಥಿಕ ಸತ್ಯ;
ನಿಮ್ಮ ಮತ ನೀವಾದುದು ಆಕಸ್ಮಿಕ ಸತ್ಯ;
ನಿಮ್ಮತನ ಬಚ್ಚಿಟ್ಟು, ಮಾನವತೆ ಮೆಟ್ಟಿಟ್ಟು,
ತೊಗಲಿಗಾಗಿ ಹೃದಯ ಕೊಯ್ಯುವುದು ಘೋರ ಅಕೃತ್ಯ.

ಮತದ ಹೆಸರಿನಲಿ ಮಚ್ಚು ಹಿಡಿವರು, ಕೊಳ್ಳಿುಡುವರು,
ತಾವಾರೆನ್ನುವುದು ಮರೆತು ಬಿಡುವರು;
ಧರ್ಮಧರ್ಮವ ಮರೆತು ಜೀವ ಕೊಡುವರು, ಜೀವ ತೆಗೆವರು,
ನೆರೆಹೊರೆ, ಸ್ನೇಹ, ಸ್ತ್ರೀ, ಹಸುಳೆ, ಬಂಧು ಬೇಧ ಕಾಣರು.

ಒಮ್ಮೆ ಸುತ್ತ ನೋಡಿರಿ, ಕಣ್ಣು ಬಿಟ್ಟು ನೋಡಿರಿ,
ನಿಮ್ಮ ಸ್ವಂತ ಅಣ್ಣ ತಂಗಿ ಎಲ್ಲ ಮತದಲ್ಲಿರುವರು,
ನಿಮ್ಮ ರೂಪು, ಹರ್ಷ, ದಿಗಿಲು ಹೊತ್ತು ಹಾದಿ ನಡೆವರು,
ರಕ್ತ ನೋವು ಇವರಿಗಿತ್ತು ಮತದ ಮತ್ತು ಮೆರೆಯಬೇಕೆ?

ದ್ವೇಷಬೇಡ, ಕ್ಲೇಷಬೇಡ, ಮತದ ಕೆಟ್ಟಗೋಡೆ ಬೇಡ,
ನನ್ನ ಹುಟ್ಟು, ನಿನ್ನ ಹುಟ್ಟು ಯಾವುದೆಂಬ ವರ್ಗ ಬೇಡ;
ಜೀವ ಜೀವ ಹೊಂದಿಕೊಂಡು ಸ್ನೇಹ ಭಾವ ತಾಳಿರಿ,
ಮತದ ಕೋಟೆ ಮೀರಿ ನಿಂತು, ಸಾಮರಸ್ಯ ತೋರಿರಿ.

ದು: ಖ, ಕಷ್ಟ, ಕೋಪ, ಇಷ್ಠ ಎಲ್ಲ ಮತಕೂ ಒಂದೆನೆ,
ಹಸಿವು ನೋವು ಜೀವ ಭಾರ ಎಲ್ಲ ಮತಕ್ಕೂ ಒಂದೆನೆ,
ಹೆಗಲು ಹೆಗಲು ನಾವು ಕೊಟ್ಟು ಜಾತಿ ಮತದ ಭೇಧ ಮರೆತು
ಬಾಳಿನುದ್ದ ಶಾಂತಿ, ಸಹನೆ, ಧರ್ಮ ಮಾರ್ಗ ಹಿಡಿಯುವ.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success