ಅಸಹಾಯಕತೆ Poem by Praveen Kumar in Divya Belaku

ಅಸಹಾಯಕತೆ

ಅದೇನು ಹರುಷ, ಅದೇನು ಉಲ್ಲಾಸ
ನಿನ್ನ ನೆನೆಯುವಾಗ,
ಅದೇನು ಹುರುಪು, ಅದೇನು ಚೈತನ್ಯ
ನಿನ್ನೊಡನಿರುವಾಗ;
ಮಲ್ಲಿಗೆಯ ದಂಡೆ ಅರಳುತ್ತಿರುವಾಗ
ಅದೇ ಕಂಪು ಸೌಗಂಧ,
ಗುಲಾಬಿ ವನದಲ್ಲಿ ತಂಗಾಳಿ ಸುಳಿವಾಗ
ಅದೇ ಭಾವ, ಸುಸ್ವಾದ;
ನಿನ್ನ ನಡೆ ಚರ್ಯೆಯಲಿ ಲಜ್ಜೆ ಸೌಂಧರ್ಯ,
ಅದೇನೋ ಮೋಹಕತೆ,
ಮಾತುಕತೆ ಪರಿಚರ್ಯೆಯಲಿ ಇತಿಮಿತಿ ಗಾಂಭೀರ್ಯ;
ಇಲ್ಲಿ ಸಲ್ಲುವವಳಲ್ಲ ನೀನು,
ಪರಲೋಕದಿಂದಿಳಿದ ಸಾಕ್ಷಾತ್ ದೇವಿ,
ದೈವೀಕತೆಯ ಪ್ರತಿಬಿಂಬ.

ದಿನದಿನ ಜೊತೆಗೆ ಸಿಗುವವಳಲ್ಲ ನೀನು,
ನಿನ್ನದೇ ಇತಿಮಿತಿಯಲ್ಲಿ ಇರುವವಳು ನೀನು;
ಮನುಜ ಸಹಜದ ಸ್ವಾರ್ಥ ಲೋಭ ನಿನಗಿಲ್ಲ,
ಪರಾರ್ಥ ಮರೆತು ಎಲ್ಲೂ ನಡೆಯುವವಳಲ್ಲ;
ನಿನ್ನ ಸೌಹಾರ್ಧದಮೃತ ಸವಿದಿರುವ ನನಗೆ
ಬೇರೆಲ್ಲವೂ ಗೌಣ, ತೃಣ ಸಮಾನ, ಕಳಪೆ.

ಕಲ್ಲು ಮಣ್ಣು ಮುಳ್ಳು ತುಂಬಿರುವ ಇಲ್ಲಿ
ನಿನ್ನೊಡನಾಟ ಸಹಜವಲ್ಲ;
ನಿನ್ನದೇ ಭಾವಭಾವನೆಗಳ ತಕಲಾಟದಲ್ಲಿ
ಒಳಗೆನೆ ಹುದುಗಿದ ನೀನು
ದಿವ್ಯ ತಪಸ್ವಿನಿಯಂತೆ, ಹೊರಗೆ ಸುಳಿಯುವುದಿಲ್ಲ;
ನನ್ನಳತೆಗೆ ಮೀರಿ ನಿಂತು
ನನ್ನೊಡನಾಟಕ್ಕೆ ಹಂಬಲಿಸುವ ಕೌತುಕವು ನೀನು;
ನಾನೋ ಅಸಹಾಯಕ, ದುರ್ಬಲ,
ನಿನ್ನ ಹಲುಬಿನ ಹೊರತೂ ಕೈಲಾಗದವನಾಗಿ
ಹಳಹಳ ಹಂಬಲಿಸುವ ನಿಷ್ಕ್ರಿಯ;
ನನ್ನ ಚಾಚಿದ ಕೈ, ಅಲ್ಲಿ ನಿನ್ನ ಚಾಚಿದ ಕೈ
ಪರಸ್ಪರರ ಸೇರದ ಕೊರಗು;
ಏನೋ ಆಶೆ ನಮಗೆ, ಭವಿಷ್ಯ ಭರವಸೆಯಲ್ಲಿ
ಪುಣ್ಯ ಸಮಾಗಮಕೆ ಕಾದಿರುವೆವು.

Sunday, July 2, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success