ಪ್ರೀತಿ Poem by Praveen Kumar in Bhavana

ಪ್ರೀತಿ

ಚಂದ್ರ ಸೂರ್ಯರಂತೆ ಸ್ತ್ರೀ ಪುರುಷ ಮಧ್ಯೆ ಪ್ರೀತಿ,
ಜೀವ ಜೀವನದ ದಿವ್ಯ ಬೆಳಕು ಚೇತನದ ಶಕ್ತಿ;
ಮುಖಾಮುಖಿಯಾಗಿ ಪ್ರೀತಿ ಪ್ರತಿಫಲಿಸಿದ ಸಮಯ,
ಅದುವೆ ಹುಣ್ಣಿಮೆ, ಪೂರ್ಣಚಂದ್ರ, ಬೆಳದಿಂಗಳು.

ಸ್ತ್ರೀ ಪ್ರೀತಿ ಮಧುಮಧುರ ಚಂದ್ರಮನ ಹಾಗೆ,
ಮಂದ ಬೆಳಕು, ಶುಭ್ರ, ಹಿತ, ಅನಂದಮಯತೆ;
ತಿಂಗಳಾವರ್ತದಲಿ ತುಂಬಿ ಮತ್ತೆ ಕಳೆಗುಂದಿ,
ನಿಧಾನ ನರ್ತನದಿ ಲೋಕ ಬೆಳಗುವ ಸೌಹಾರ್ದತೆ.

ಪುರುಷ ಪ್ರೀತಿಯೋ ಮಟಮಟ ಮಧ್ಯಾಹ್ನದ ಸೂರ್ಯ,
ನೇರ, ತೀವ್ರ, ಪ್ರಚಂಡ ಬಿಸಿಲಿನ ವಿಕೀರ್ಣತೆ;
ನೆತ್ತಿಗೇರಿದರೆ ಮಧ್ಯಾಹ್ನ, ಕೆಳಗಿಳಿದರೆ ನಟ್ಟನಡು ರಾತ್ರಿ,
ದಿನರಾತ್ರಿ ಅವರ್ತನೆ ಪುರುಷ ಪ್ರೀತಿಯ ನಿಬಂಧನೆ.

ಸ್ವಾರ್ಥದಂತರದಲ್ಲಿ ಪ್ರೀತಿ ಹೋರಾಡಿದಾಗ,
ಗೃಹಯುದ್ಧ, ಅಮಾವಾಸ್ಯೆ, ದಟ್ಟ ಕಡುಕತ್ತಲೆ;
ಹುಣ್ಣಿಮೆ ಅಮವಾಸ್ಯೆಯು ಜೀವನದ ನಿಯಮ,
ದಿನದಿನ ವೈವಿಧ್ಯ ತಂದಿಡುವ ದಿವ್ಯ ಮಂತ್ರವು.

ಪ್ರೀತಿ ಚಂದ್ರಸೂರ್ಯವಿದನು ಮೀರಿ ನಿಲ್ಲಬಲ್ಲುದು,
ಸ್ವಾರ್ಥದಂತರ ಮರೆತು, ಮುಖಾಮುಖಿಯಾಗಿ,
ಸದಾ ಹುಣ್ಣಿಮೆ, ಪೂರ್ಣಚಂದ್ರ ಪ್ರತಿಫಲನಗೊಂಡು,
ಶುಭ್ರ ಹಿತ ಆನಂದದ ಬೆಳಕಲ್ಲಿ ತೊಯ್ಯಬಲ್ಲುದು.

Sunday, May 8, 2016
Topic(s) of this poem: life,philosophy
COMMENTS OF THE POEM
READ THIS POEM IN OTHER LANGUAGES
Close
Error Success