ಜೀವನ ಉನ್ಮಾದ Poem by Praveen Kumar in Bhavana

ಜೀವನ ಉನ್ಮಾದ

ಇದು ನೀರಿನೊಳಗಿನ ಗುದ್ದಾಟ,
ಇದು ಗಾಳಿಯೊಡನೆ ಗುದ್ದಾಟ,
ಇದು ಬಾನಿನೊಡನೆ ಹೊಡೆದಾಟ,
ಮೋಡ ಹಿಡಿಯುವ ಸೆಣೆಸಾಟ.

ಸಾವಿರ ತಲೆಯ, ಲಕ್ಷ ತೋಳಿನ ನಮಗೆ
ಒಂದೊಂದು ನಿಮಿಷ ಬರೆ ಬೋರು,
ಆಹಾರಕೆ ಗೋಳಿಡುವ ಬಕಾಸುರನ ಹೊಟ್ಟೆಯಂತೆ,
ತಲೆ ತೋಳಿಗೂ ಬೇಕು ನಿಮಿಷ ನಿಮಿಷ ಆಹಾರ;
ತಾಳ ತಪ್ಪಿತೊ, ಘೀಳಿಡುವ ಗೋಳು ತಪ್ಪಿದ್ದಲ್ಲ,
ಕೆಲಸವಿಲ್ಲದ ಆಚಾರಿ ಮಗುವಿನ ಕುಂಡೆ ಕೆತ್ತಿದನಂತೆ,
ಹಾಗೆ ನಮ್ಮ ಕೆಲಸವಿಲ್ಲದ ತಲೆ ತೋಳಿನ ಗೀಳು;
ಹುಡುಕಿ, ಹುಡುಕಿ, ದಿಕ್ಕು ದಿಕ್ಕುಗಳ ಬಗೆದು,
ಇಲಿ ಬಿಲಗಳ ಹೊಕ್ಕು, ಎರೆಹುಳಗಳ ಕಿತ್ತು
ತುರಿಕೆಗಳ ತಣಿಸುವ ಮೊಂಡು ಉನ್ಮಾದ.

ನಮ್ಮ ಕಣ್ಣು ಹೊರಗಲ್ಲ, ಒಳಗೆ,
ನಮ್ಮೊದೆತ ಹೊರಗಲ್ಲ, ಒಳಗೆ,
ಒಳಗಿನೊತ್ತಡಕ್ಕೆ ಬಾಗಿಲು ತೆರೆದು
ಆಮ್ಲ, ಕ್ಷಾರ, ವಿಷಾನಿಲಗಳ ಹೊರದಬ್ಬಬೇಕು;
ಯಾವುದು ಎಲ್ಲಿ ಹೇಗೆ ಮುಟ್ಟಿತೆಂಬ
ಪರಿಶೀಲನೆಯ ಸಹನೆ, ಪರಿವೆ ಬೇಕಿಲ್ಲ,
ಒಳಗೆ ಹಚ್ಚಿರುವ ಬಿಸಿಗುಳ್ಳೆಗಳ ಹೊರಗೆ ದಬ್ಬಬೇಕು,
ಇದೊಂದೆ ನಮ್ಮ ಗುರಿ,
ಇದೊಂದೆ ನಮಗೆ ಸರಿ;
ಯಾಕೆಂದರೆ,
ಉಳಿದುದೆಲ್ಲ ಅವರವರ ವಿಧಿ,
ಇಲ್ಲಿ ಎಲ್ಲರಿಗೂ ಅವರವರ ಕಳಕಳಿ.

ಇಲ್ಲಿ ತಲೆ ತೋಳಿಗೂ ಏಕತಾನವಿಲ್ಲ,
ತಲೆ ತುಂಬಿದಾಗ ತೋಳುಗಳು ಮಲಗಿ
ಗೊರಕೆ ಹೊಡೆಯುವುದೆ ಜಾಸ್ತಿ;
ತೋಳು ತೋಳನ ಹಾಗೆ ತೊಳಸುವಾಗ
ತಲೆ ಮುಸುಕಿನಲಿ ಹುದುಗಿ
ಗಾಢ ನಿದ್ರೆಯಲ್ಲಿರುವುದು ನಿಯಮ;
ಒಂದು ದರಿಗೆಳೆದು, ಒಂದು ಪುಲಿಗೆಳೆವ
ದ್ವಂದ್ವಗಳು ಬಹಳ,
ಈ ಕಂದಕದಲ್ಲಿ
ನಿಂತ ಒಳ ಮನಸ್ಸು
ಮೇಲೇರಿ ಹೊಡೆದಾಡುವ ಹಾಗೆನೆ ಇಲ್ಲ;
ಯಾಕೆಂದರೆ,
ಒಳ ಮನಸ್ಸು ಎದೆಯಲ್ಲಿ
ತೋಳು ತಲೆಯ ಮಧ್ಯೆ ಹುದುಗಿದೆಯಲ್ಲ.

ನಮ್ಮದು ಗುರಿ ಮರೆತ ಮೊರೆತ,
ಭಾವಾವೇಗಗಳ ಬಿಸಿ ಒರೆತ,
ಒಳಗೊಳಗೆ ಛಿದ್ರಿಸುವ ಕೊರೆತ,
ಎದುರಲ್ಲಿ ಸಿಕ್ಕವರ ಮೇಲೆ ಹೊಡೆv.

ಇದು ಉನ್ಮಾದದ ಅತಿರೇಕದ ಕುರುಹು,
ತನ್ನೊಳಗೆ ಹುದುಗಿ,
ಒಳ ಸ್ಪೋಟಿಸುವ, ನೋವಿನ ದುರಂತ;
ಅನಿಯಂತ್ರಿತ ಸಿಡಿಮಿಡಿಯಲ್ಲಿ
ಎಲ್ಲೆಂದರಲ್ಲಿ ಹಾರಾಡುವ ಒಳತೋಟಿಯ ಕ್ಷಿಪಣಿಯ ಮಧ್ಯೆ
ಸ್ವಭದ್ರತೆಗಾಗಿ,
ಒರಟು ಚಿಪ್ಪಿನ ಪದರುಗಳ ತೊಟ್ಟು
ಎಡಬಲ ನೋಡಿ ಮುನ್ನಡೆಯುವ ಕಾಯಕ,
ನೋವಿನ ಪರಮಾವಧಿ;
ಎದೆಕೊಟ್ಟವ
ಸಿಡಿದು ಚೂರಾಗುವ
ಈ ಉನ್ಮಾದದ ಮಧ್ಯೆ.

ಈ ಗಡಿಬಿಡಿ, ವೇಗ, ಸಿಡಿಮಿಡಿ ಯಾಕೆ?
ಈ ತುರಿಕೆ, ಮೊಂಡು ಉನ್ಮಾದಗಳೇಕೆ?
ಒಳತೋಟಿಯ ದ್ವಂದ್ವ, ಕಂದರಗಳೇಕೆ?
ಆರಾಮದಿ ಒಳನುಡಿಗಳ ಶ್ರುತಿುಟ್ಟು,
ಕಣ್ಣನ್ನು ದೂರದ ಗುರಿಯ ಮೇಲಿಟ್ಟು
ನಿರ್ಧಾರದ, ನಡೆಯಲಿ ನಡೆಯೆವು ಯಾಕೆ?
ಜೀವ ಸಂಗೀತವ ನುಡಿಸೆವು ಯಾಕೆ?
ತೋಳನು ತಲೆಯ ಹಿಡಿತದಲ್ಲಿಟ್ಟು
ತಲೆಯನು ತೋಳಿನ ಬೆಂಬಲಕ್ಕಿಟ್ಟು
ದ್ವಂದ್ವದ ಮೀರಿ, ಸಹನೆಯ ತೋರಿ
ವಿನಯದ ನಡೆಯಲಿ ನಡೆಯೆವು ಯಾಕೆ?

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success