ಮರುಭೂಮಿ ಪಯಣ Poem by Praveen Kumar in Bhavana

ಮರುಭೂಮಿ ಪಯಣ

ನೀನೊಂಟಿಯಾಗಿ ಮರುಭೂಮಿಯಲ್ಲಿ
ಸುಡುವ ಮರಳಿನ ಮೇಲೆ ನಡೆಯುವೆ;
ಸುಡುವ ಬಿಸಿಲು ತಲೆಯ ಮೇಲೆ,
ರಾತ್ರಿ ಕೊರೆವ ಚಳಿಯ ಗಾಳಿ,
ದಿಕ್ಕು ಇಲ್ಲ, ಕೊನೆ ಆರಂಭವಿಲ್ಲ,
ಎಲ್ಲೆ ತಿರುಗಲಿ ನಡೆದಷ್ಟು ಉಂಟು;
ಮರಳು ರಾಶಿ, ನೀಲಾಕಾಶ,
ನಡುವೆ ಸುಡುವ, ಕೊರೆವ ಗಾಳಿ,
ಮಧ್ಯೆ ನೀನೊಂಟಿ ಜೀವಿ ನಡೆಯುವೆ,
ನಡೆದ ಹೆಜ್ಜೆಯ ಕುರುಹು ಬಿಟ್ಟು,
ಮುನ್ನಡೆಗೆ ಒಂದೆ ಗುರುತು ಇಟ್ಟು.

ಸ್ವಲ್ಪ ನಡೆದು, ಹಿಂದೆ ನೋಡಲು
ನಡೆದ ದಾರಿಯ ಹೆಜ್ಜೆ ಮಾಸಿದೆ,
ಎದ್ದು ಹಾರುವ ಮರಳು ತೆರೆಗಳು
ನಡೆ, ಹೆಜ್ಜೆಯ ಗುರುತು ಮರೆಸಿವೆ;
ಮುಂದೆ ಇಲ್ಲ, ಹಿಂದೆ ಇಲ್ಲ,
ಎಡಬಲದಲಿ ಮರಳು ಎಲ್ಲ.

ಒಂದೊಂದು ಹೆಜ್ಜೆ ಒಂದೊಂದು ನೋವು,
ಮರಳು ಬೆಂಕಿಯಾಗಿ ಸುಡುವುದು,
ರಾತ್ರಿ ಶೀತದಿಂದ ಕೊರೆವುದು;
ಕಾಲು ಹೂತು ಹೋದರಂತು
ಮೇಲೆಳೆದು ನಡೆವುದು ಸಾಹಸ,
ಉದ್ದೇಶ ರಹಿತ ನಿನ್ನ ನಡಿಗೆ
ಮುಂದೆ ಮುಂದೆ ನಡೆದಷ್ಟು ಉಂಟು;
ಬಳಲಿ ಕಾಲು ವಿರಾಮ ಬಯಸಲು,
ನಿಮಿಷ ನಿಂತು, ಹಿಂದೆ ನೋಡಿ,
ತಲೆಯ ಕೊಡವಿ ಮುಂದೆ ನೋಡಿ,
ತನ್ನಿರವು, ತನ್ನ ಹೊದೆದ ಲೋಕ
ಕಂಡೊಳಗೆ ಮಮ್ಮಲ ಮರುಗುವೆ.

ತಾುಗರ್ಭದಿಂದ ನಡಿಗೆ
ಯಂತ್ರದಂತೆ ಸಾಗಿದೆ,
ಒಂದೆ ತಾಳ, ಮಂತ್ರದಲ್ಲಿ
ವಿರಾಮ ಮರೆತು ನಡೆವುದು.

ಬಂಜೆ ಮೋಡ ಬಿಳಿ ಆಕಾರದಲ್ಲಿ
ದೂರ ದೂರ ಆಕಾಶದಲ್ಲಿ,
ಮರೀಚಿಕೆಯು ದೂರದಲ್ಲಿ
ನಿನಗೆ ಮೂಗುದಾರ ಕಟ್ಟಿ
ಅತ್ತ ಇತ್ತ ತೊನೆಯುವಾಗ
ಹರಿದ ಮನಸ್ಸು,
ಹರಿದ ದೇಹ ಕೂಡಿ
ಜೀರ್ಣಿಸಿದ ಜೀವವಾಗಿ
ದಿಗಂತದಲ್ಲಿ ಕಣ್ಣನಿಟ್ಟು
ಹೆಜ್ಜೆ ಬಿದ್ದಲ್ಲಿ ನಡೆಯುವೆ.

ತಲೆಗೆ ಒಂದು ನೆರಳಿನಾಸೆ,
ಹೃದಯಕ್ಕೊಂದು ಜೊತೆಯ ಆಸೆ,
ಜೀವಕ್ಕೊಂದು ಆಸರೆಯ ಆಸೆ
ಕನಸಿನೊಳಗಿನ ಗಂಟು ಇಲ್ಲಿ;
ತಿದ್ದಿ ದಾರಿ ತೋರುವವರು ಇಲ್ಲ,
ಸರಿ ಎಂದು ದೂಡುವವರು ಇಲ್ಲ,
ಆಕಾಶದಲ್ಲಿನ ಉಲ್ಕೆಯಂತೆ
ಸುಡುವ ಮರುಭೂಮಿ ತುಂಬ
ನಿನ್ನ ನೇರಕೆ ನಡೆಯಬೇಕು,
ಎಲ್ಲಿಂದ ಹೊರಟು, ಇನ್ನೆಲ್ಲಿಗೆಂದು
ನೀನು ನಾನು ಅರಿಯೆವು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success