ಕಲಾವಿದ Poem by Praveen Kumar in Divya Belaku

ಕಲಾವಿದ

ಯಾರೋ ಒಬ್ಬ ದೂರ ನಿಂತು
ಏನೋ ಚಿತ್ರ ಬರೆಯುತ್ತಿರುವ,
ಚಿತ್ರವಿಚಿತ್ರ ನಕ್ಷೆ ಬರೆದು
ತನಗೆ ತಾನೆ ನಗುತ್ತಲಿರುವ.

ಅವನದೇನು ಹಂಚಿಕೆಯೊ,
ಕಲಾಕೌಶಲ್ಯ ಪ್ರದರ್ಶನವೊ,
ಊಹೆ ಮೀರಿದ ವಿನ್ಯಾಸಗಳು
ಕುಂಚದಿಂದ ಮೂಡುತ್ತಿವೆ.

ಒಂದರಂತೆ ಒಂದು ಇಲ್ಲ,
ಎಲ್ಲ ತರತರ ವಿಭಿನ್ನವೆ;
ಏನು ಇಲ್ಲಿ ನವನವೀನ್ಯತೆ,
ಕಲಾವಿದನ ಕಲಾಸೃಷ್ಟಿಯಲ್ಲಿ!

ಯಾವ ಗುರಿಯನ್ನಿಟ್ಟುಕೊಂಡು,
ಯಾವ ದಿವ್ಯ ಸಂಕಲ್ಪದಿಂದ
ವಿಶ್ವವ್ಯಾಪಿ ಕಲಾಚೌಕಟ್ಟಿನಲ್ಲಿ
ತನ್ನ ಕಲೆಯ ರೂಪಿಸುತ್ತಿರುವ?

ಕುಂಚ ಒಂದು, ಚಿತ್ರ ಹಲವು,
ಯಾವ ಸೂತ್ರ ಇದರ ಮಧ್ಯೆ
ಚಿತ್ರಚಿತ್ರಗಳಲಿ ಮೂಡಿ
ಹೊಸ ಸಂದೇಶ ನೀಡುತ್ತಿಹುದು -

ನಾನು ಒಂದು; ನೀನು ಹಲವು,
ನನ್ನ ಕಲ್ಪನ ತರಂಗವು;
ನನ್ನ ಹೊರತು ನೀನು ಇಲ್ಲ,
ನಿನಗೆ ಸ್ಥಾಯಿ ನೆಲೆಯೆಯಿಲ್ಲ?

ಕಲಾವಿದನ ಚಿತ್ರ ಹಲವು,
ಸುರೂಪ ಕುರೂಪಗಳೆಲ್ಲವು;
ಸುಗುಣ ನಿರ್ಗುಣ ಕೂಡಿಕೊಂಡ
ಕಲಾಕೃತಿಗಳ ಕರ್ತೃನು.

ಕೆಲವು ಮೇಲೆ, ಕೆಲವು ಕೆಳಗೆ,
ಓರೆಕೋರೆ ಸೀದ ಹಲವು,
ಕಲಾವಿದನ ಪ್ರಪಂಚವು,
ಕಲಾಕೃತಿಗಳ ವೈವಿಧ್ಯವು.

ಚಿತ್ರಗಳಿಗೆ ಚೌಕಟ್ಟುಕೊಟ್ಟು,
ರಂಗವೇರಿದ ಮಂಗವಾಗಿ,
ಕೈಕಾಲು ಕುಣಿವ ನಾವುನೀವು
ನಮ್ಮ ನಟನೆ ನಡೆಸಬೇಕು.

READ THIS POEM IN OTHER LANGUAGES
Close
Error Success