ಬಾಳ ಸಂಜೆ Poem by Praveen Kumar in Divya Belaku

ಬಾಳ ಸಂಜೆ

ನಾ ಹೀಗಿರುವಾಗ ಇಲ್ಲಿ,
ಮಲ್ಲಿ, ನೀ ಹೇಗಿರುವೆಯೋ ಅಲ್ಲಿ?
ಕಾಲಚಿಪ್ಪನ್ನು ಕಳಚಿ ಕಳಚಿ,
ನಿನ್ನ ಹಂಬಲಿಸುವಾಗ ನಾನು,
ನೀ ಹೇಗೆ ಕಾಲ ಸಂಬಾಳಿಸುವೆಯೋ ಏನೋ?

ನಮ್ಮ ಕೇಳದೆ ಕಾಲ ಹೀಗೆ ಓಡುತ್ತಿರುವಾಗ,
ನಾವು ದೂರದೂರದಲ್ಲೆ ಹಂಬಲಿಸುವಾಗ,
ಕರುಣೆಕಾಣದ ಕಾಲ ಕಣ್ಮುಚ್ಚಿಕೊಂಡು
ನಮ್ಮ ನೋವನ್ನು ಹೀಗೆ ಹೀಗಳೆಯುವಾಗ
ನಾನಾದರೋ ದಿನದಿನ ನಿನ್ನ ನೆನಪಿಸಿಕೊಂಡು,
ಕಾಣದ ಕತ್ತಲಕೋಣೆಯಲ್ಲಿ ನಿನ್ನ ಉಳಿಸಿಕೊಂಡು,
ನಿನ್ನ ನೆನಪಿನ ನಂದಾದೀಪ ಒಳಗೆ ಉರಿಸಿಬಿಟ್ಟೆ;
ನಿನ್ನ ಕತೆಯೇನು ಚಿನ್ನ, ಹೇಗಿರುವೆ ಇನ್ನೂ,
ಯಾವ ದಿನ್ನೆಯನೇರಿ, ನನ್ನ ನೆನಪನ್ನೂರಿ,
ಯಾವ ತಪಸ್ಸಲ್ಲಿ ನನ್ನ ನಿನ್ನಲ್ಲಿಟ್ಟಿರುವೆಯೇನೋ?

ಗರಿಕೆದರಿ ಉರಿಯುತ್ತಿದ್ದ ಆ ಸೂರ್ಯ
ಕಮರಿ ಬೆಂಡಾಗಿ ಅಸ್ತನಾಗುತ್ತಿರುವಾಗ, ಈಗ,
ಮಧ್ಯಾಹ್ನದ ನಡುನೆತ್ತಿ ಸೂರ್ಯ ಮರೆಯಾಗುವಾಗ,
ಕೈಲಾಗದವರಂತೆ ನಾವು ಬರೆ ನೋಡಿ ನೋಡಿ,
ಹಿಂದುದನ್ನು ನೆನೆದು ನೆನೆದು ನೋವು ನುಂಗಬೇಕೆ?

ನಡೆಯುವ ದಾರಿ ಈಗ ಬಹಳ ದೂರವಿಲ್ಲ,
ನಡೆಯಬೇಕಾದಷ್ಟು ನಡೆದು ಆಗಿದೆ ಈಗ,
ಸಂಜೆಯ ಈ ಅರೆಕತ್ತಲಲ್ಲಿ ಅಡಗಿ ನಾವು
ನಮ್ಮ ಕನಸಿನ ಆ ಚಿತ್ರ ಹರಿಯುವುದು ಹೇಗೆ?
ಆ ದೊಡ್ಡರಮನೆ ಹೀಗೆ ಬೀಳುವುದು ಸರಿಯೆ?
ದಾರಿಯುದ್ದ ಸೇರುವ ಬಯಕೆಯಲ್ಲೆ ನಾವಿರುವಾಗ,
ನಡೆದು, ಅಳಿದು ಇಳಿದು ಈಗ ಬರೆ ಇಲ್ಲಿರುವಾಗ,
ಬರೆ ಕತ್ತಲೆ ನಮ್ಮೆದುರು ಮೈಮೀರಿ ದಟ್ಟವಾಗಿರುವಾಗ,
ನೆನಪುಬಿಟ್ಟರೆ ನಮಗೆ ಬೇರೆ ಆಶ್ರಯವೆಲ್ಲಿ?
ಆ ಕುಂಟುದೀಪದ ಬೆಳಕಲ್ಲಿ ನಾವು ಇರಬೇಕಿಲ್ಲಿ.

ನನ್ನ ಕತೆ ಹೀಗೆ, ನಿನ್ನ ಕತೆ ಏನು?
ನಾನಿನ್ನೂ ನಿನ್ನಲ್ಲಿರುವೆ ಏನು?
ನನ್ನ ಮಿತಿಗೆ ಮೀರಿದ ನಿನ್ನ ನೋವು ಗೊತ್ತು,
ಆ ಕಂತೆಯ ಹೊತ್ತು ಹೇಗೆ ನಡೆವೆಯೋ ನೀನು?
ವಿಧಿವಿದಿಸಿದನ್ನು, ಅಯ್ಯೋ, ಸಹಿಸಲೆಬೇಕು.

READ THIS POEM IN OTHER LANGUAGES
Close
Error Success