ಹತ್ತಿದರೆ ಆರಲು ಗೊತ್ತಿರದ ಬೆಂಕಿ Poem by Praveen Kumar in Divya Belaku

ಹತ್ತಿದರೆ ಆರಲು ಗೊತ್ತಿರದ ಬೆಂಕಿ

ಎರಡನ್ನೊಂದುಗೊಳುವುದೆ ಪ್ರೀತಿ,
ಹತ್ತಿದರೆ ಆರಲು ಗೊತ್ತಿರದ ಬೆಂಕಿ,
ಮುಗಿಲೇರಿದರೆ ಕೆಳಗಿಳಿಯದ ಹಕ್ಕಿ,
ಏಕಮುಖ ಪ್ರವಾಹದಪ್ರತಿಮ ಶಕ್ತಿ.

ಪ್ರೀತಿ ರೀತಿನೀತಿಮಿತಿಯಿಲ್ಲದ ಹೊಳೆ,
ಕಾರ್ಯಕಾರಣವಿಲ್ಲದೆ ಸುರಿವ ಮಳೆ;
ಪ್ರೀತಿಸಾಗರಕ್ಕಡ್ಡ ಗೋಡೆ ಕಟ್ಟಿದವರಿಲ್ಲ,
ಪ್ರೀತಿಯಲಿ ಸ್ವಾರ್ಥದ ಲವಲೇಶವಿಲ್ಲ.

ನೈತಿಕತೆ ಧರ್ಮ ಗೋಗರೆಯುವವರೆ,
ನಿಮ್ಮ ಪಾಠಪರಿಪಾಟ ಬರೆ ಎಲ್ಲೆಯವರೆಗೆ;
ಪ್ರೀತಿಸಾರ್ವಭೌಮತ್ಯ ಮೆರೆದಾಡುವಲ್ಲಿ
ನಿಮ್ಮ ಶುಷ್ಕಕ್ರಮಕ್ಕೆ ಅರೆದುಡ್ಡು ಬೆಲೆಯಿಲ್ಲ.

ನೀರಲ್ಲಿ ಮುಳುಗದ, ಬೆಂಕಿಯಲ್ಲಿ ಸುಡದ,
ಕತ್ತಿಯ ಹರಿತಕ್ಕೆ ಎದೆಯೆತ್ತಿ ಸೆಟೆವ,
ಕಣ್ಣಿಗೆ ಕಾಣದ, ಮತ್ತೆ ಕಿವಿಗೂ ಕೇಳದ
ವೈಚಿತ್ರ್ಯ ಪ್ರೀತಿ, ಅಗ್ರಾಹ್ಯ ಮಹಾ ಶಕ್ತಿ.

ಪ್ರೀತಿಯೋ ಒಂದು ತ್ಸುನಾಮಿ ಪ್ರವಾಹ,
ಕುಡಿದಷ್ಟು ಮೊರೆಯುವ ಹುಚ್ಚು ದಾಹ;
ಎಲ್ಲಿಂದ ಬಂತು, ಯಾಕೆ ಹೇಗೆ ಎಂಬ
ಪ್ರಥಕ್ಕರಣ ವಿವೇಕದ ಮಿತಿಗೂ ಹೊರಗು.

ಹೊಳೆನದಿ ಕೂಡಿ ಹರಿವ ಸಮುದ್ರವಲ್ಲ,
ಪ್ರೀತಿ, ಕಾಲಕಾಲ ಕೂಡಿ ಮೊರೆವ ಸಾಗರ;
ಇಲ್ಲಿ ನಾನುನೀನು, ಮೇಲುಕೀಳುಗಳಿಲ್ಲ,
ನಾನೇ ನೀನು, ನೀನೇ ನಾನು, ದಿವ್ಯಮಂತ್ರ.

ಪ್ರೀತಿ ಅದ್ವೈತತೆಯ ಮನುಷ್ಯ ರೂಪ,
ವಿಶ್ವತೆಯ ಅಣುಪರಮಾಣು ರೂಪ;
ಇಲ್ಲಿ ಎರಡು ಒಂದು; ಒಂದು ಜಗತ್ತೆಲ್ಲ,
ನಾನೆಂಬುವುದು ವಿಶ್ವತೆಯ ಸತ್ಯ ರೂಪ.

ಆಟಮೇಲಾಟಗಳ ಬಾಳ ಸರ್ಕಸ್ಸಿನಲ್ಲಿ,
ಜೀವಜಂತು ಗಿಡಕಡ್ಡಿಗಳ ಕ್ರೂರ ಕಾಡಿನಲ್ಲಿ
ಪ್ರೀತಿಯೊಂದು ದೂರದ ಶಾಂತ ಓಯಾಸಿಸ್,
ಕತ್ತಲೆಯಲ್ಲಡಗಿದ ದಿವ್ಯ ಬೆಳಕಿನ ಹಣತೆ.

READ THIS POEM IN OTHER LANGUAGES
Close
Error Success