ಸತ್ಯ Poem by Praveen Kumar in Bhavana

ಸತ್ಯ

ನಾನು ಸತ್ಯ, ನೀನು ಸತ್ಯ,
ಸುತ್ತಲಿನ ನಿಸರ್ಗ ಸತ್ಯ,
ನಿಸರ್ಗ ತರುವ ಭಾವಾವೇಗ
ಕಾಲಯಂತ್ರ ನಡೆವ ವೇಗ
ನನ್ನ ನಿನ್ನಂತೆ ಸತ್ಯ.

ಒಳಗೆ ಉರಿವ ಕುಲುಮೆ ಸತ್ಯ,
ಹೊರಗೆ ಹರಿವ ಸಂತಾಪ ಸತ್ಯ,
ಸಂತಾಪ ತರುವ ಆವೇಶ, ದುಗುಡ
ಒಳಗೆ ಕವಿವ ನಿರಾಶೆ, ಮೋಡ,
ಮನಸಿನಂತೆ ಅದೃಶ್ಯ ಸತ್ಯ.

ಮೈ ಮನಸು ತುಂಬಿ ತರುವ
ಅಭಿಮಾನ, ಪ್ರೀತಿ ಸ್ಫೂರ್ತಿ ಸತ್ಯ,
ಎಲ್ಲೆಂದಲ್ಲಿ ಮೂಡಿ ಬರುವ
ಅತಂತ್ರ ಸ್ಠೃ ಕ್ರಿಯೆ ಸತ್ಯ,
ಉಳಿದದೆಲ್ಲ ಬರಿದು ಮಿಥ್ಯ,
ಅವನು ಮಿಥ್ಯ, ಇವನು ಮಿಥ್ಯ,
ಮುಂದಿರುವ ವಾತಾವರಣ ಮಿಥ್ಯ,
ಕಾಲನೆಲದ ಬಂಧ ಅನಿತ್ಯ,
ಬದಲು ರೂಪ ತೊಟ್ಟು ಬರುವ
ಕ್ಷಣಿಕ ಸಂಬಂಧ ಬಂಧ ಮಿಥ್ಯ.

ಕಳ್ಳಿಗಿಡದ ಮುಳ್ಳಿನೊಳಗೆ
ಅಡಗಿನಿಂದ ತುಂಬೆಯನ್ನು
ಕಂಡು ಸಾಕಿ ಸಲಹುವವನೆ,
ಸಲಹಿ ಹೀರಿ ಬದುಕುವವನೆ
ಮಾಯೆ ಮೀರಿ ಬದುಕಬಲ್ಲ.

ಸತ್ಯ ಮಿಥ್ಯ ಗೊಡವೆ ಬೇಡ,
ಸತ್ಯಸತ್ಯ ಹುಡುಕಬಲ್ಲ,
ಅಂತರಂಗ ಕಿಡಿಕಿ ತೆರೆದು
ಎದೆ ಬಡಿತಕ್ಕೆ ಕಿವಿಯ ಹಿಡಿದು
ನಡೆವ ದಾರಿ ಸತ್ಯ ದಾರಿ.
ಬೆಳಕು ಸತ್ಯ, ನೆರಳು ಮಿಥ್ಯ,
ಬೆಳಕು ಸುತ್ತ ನೆರಳು ನಿತ್ಯ,
ಗೂಡು ಒಡೆದು ಜೇನು ಹಿಡಿವ
ಜೇನುಗಾರ ಒಳಗೆ ಇರುವ;
ಬೇಡಿ ಬಿಚ್ಚಿ ಹೊರಗೆ ನಡೆಸು.

ದಿಟ್ಟಿ ತೆರೆದು ಒಳಗೆ ನೋಡು,
ದಿಟ್ಟಿ ತೆರೆದು ಹೊರಗೆ ನೋಡು,
ಒಳಗೆ ಹೊರಗೆ ಸೇತು ಕಟ್ಟಿ,
ಧ್ರುವಗಳನ್ನೊತ್ತಟ್ಟಿಗಿಟ್ಟು
ಕಂಡಾಗ ಸತ್ಯ ಹೊಳೆವುದು.

ಆಶೆ ಸತ್ಯ, ಮೃಗತೃಷ್ಠೆ ಮಿಥ್ಯ,
ಸಾಧನೆ ಸತ್ಯ, ಪ್ರತಿಫಲ ಮಿಥ್ಯ,
ಬೇರು ಸತ್ಯ, ಹೂ ಫಲ ಮಿಥ್ಯ,
ಮಧ್ಯೆ ನಿಂತ ಕಾಂಡ, ಕೃತ್ಯ,
ಕೃತ್ಯದಿಂದ ಸತ್ಯ, ಮಿಥ್ಯ.

ಮಿಥ್ಯ ಚಕ್ರಬಂಧದೊಳಗೆ
ಸುತ್ತಿ ಸುತ್ತಿ ಕಂಡ ಸತ್ಯ
ಆತ್ಮಜ್ಞಾನವಾಗಿ ಮುಟ್ಟಿ
ಭ್ರಾಂತಿ ಮಾಯೆ ಮೋಹ ಸುಟ್ಟು
ನನ್ನ ನನ್ನಲ್ಲಿ ತರಲಿ ಬೇಗ.

Friday, April 29, 2016
Topic(s) of this poem: truth
COMMENTS OF THE POEM
READ THIS POEM IN OTHER LANGUAGES
Close
Error Success