ನೀನು ನೀನಾದಾಗ Poem by Praveen Kumar in Bhavana

ನೀನು ನೀನಾದಾಗ

ನೀನು ನೀನಾಗಿದ್ದರೆ ಲೋಕವೇ ನಿನಗುಂಟು,
ನಿನ್ನೊಳಗು ಬರಿದಾದರೆ ಎಲ್ಲವೂ ಬರಡು;
ನೀನೇ ನಿನ್ನಳವು, ನೀನೇ ನಿನ್ನಳಿವು,
ಉಳಿದುದೆಲ್ಲ ನಿನಗೆ ಉಡುಪು ಆಡಂಬರ.

ನಿನ್ನೊಳಗು ಹೊರಗು ಕೂಡಿ ನಡೆಯಬೇಕು,
ಅದುವೇ ನಿನ್ನ ಕಸುವು, ಗೌರವ, ತೇಜಸ್ಸು;
ಉತ್ತರ ದಕ್ಷಿಣವಾಗಿ ಒಡಕು ಮಧ್ಯೆ ನಿಂತರೆ
ನೀನು ನೀನಲ್ಲ, ನಿನಗೆ ಬೆಲೆ ಕಿಂಚಿತ್ತೂ ಇಲ್ಲ.

ದಾರಿ ನಡೆವಾಗ ಬರುವ ಕವಲು ಸಾವಿರಾರು,
ಒಂದೊಂದೂ ಹಲವು ತಿರುವುಗಳ ಬೆರಕೆ;
ಯಾವುದು ಎಲ್ಲಿ ತೀರುವುದೆಂದರಿತವರಿಲ್ಲ,
ಲಾಭ ನಷ್ಟದ ಲೆಕ್ಕ ಇಲ್ಲಿ ಖಂಡಿತ ಸಲ್ಲ.

ಎದೆ ಬಡಿತದ ತುಡಿತ ಏನೆಂದು ಅರಿತು
ನಡೆವ ದಾರಿಯ ದಿಕ್ಕು ಹಿಡಿಯುವುದು ಲೇಸು;
ಅದುವೇ ನಿನ್ನ ಇಂಧನ, ತೃಪ್ತಿಯ ನಿಜ ಸ್ಪಂದನ,
ಮೇಲೆತ್ತಿ ಮುನ್ನಡೆಸುವ ನಿನ್ನಾಪ್ತ ಪರಿಪಾಲಕ.

ಕಣ್ಣು ಕುರುಡಾದಾಗ ಮುಂದೆ ತಳ್ಳುವವರು ಹಲವು,
ಸ್ವ ಅರ್ಥ ವಿನೋದಗಳ ಕಾರಣ ಏನೇ ಇರಲಿ;
ನಿನ್ನ ದಿಕ್ಕು ದಾರಿ, ಅಂತರಂಗದ ಲಕ್ಷ್ಯ ನಿರ್ಧಾರ
ಹಿಡಿದು ನಡೆದರೆ ಮಾತ್ರ ನಿನ್ನ ನಡಿಗೆ ಸುಭದ್ರ.

ಸರಿತಪ್ಪು ಸತ್ಯಸತ್ಯಗಳು ಇಲ್ಲಿ ಮುಖ್ಯವಲ್ಲ,
ಲಾಭನಷ್ಟದ ಲೆಕ್ಕಕ್ಕೆ ಇಲ್ಲಿ ಬೆಲೆಯೆ ಇಲ್ಲ;
ಒಳಗೆ ಹೊರಗೆ ಹೊಂದಾಣಿಕೆ, ದೃಢತೆ, ನಡಿಗೆ
ಹಿಡಿದು ನಡೆವುದೆ ತೃಪ್ತಿ, ಶಕ್ತಿ, ನಿನ್ನ ಸಾರ್ಥಕ್ಯ.

ಎಡಬಲ ನೋಡದೆ ನಡೆಯಬೇಕು ಮುಂದೆ,
ಎಡವಿದರೆ ಎಡವಿ, ಬಿದ್ದರೆ ಎದ್ದು ನಡೆಯಬೇಕು;
ನಿನ್ನೊಳಗಿರುವುದು ಬೇರು, ನೀನದರ ಬೆಳೆದ ರೂಪ,
ಬೇರಿಗನುಗುಣ ಹೂವುಫಲ ಬಿಟ್ಟರೆನೆ ಚಂದ.

ನಿನ್ನತನ ಬಿಟ್ಟಾಗ ನೀನು ನೀನಾಗುವುದಿಲ್ಲ,
ಲಾಭನಷ್ಟದ ತಖ್ತೆ ಇಲ್ಲಿ ಸಮಂಜಸವೆ ಅಲ್ಲ;
ನೀನು ನೀನಾಗದೆ ಕುಬೇರನಾದರೇನು ಫಲ?
ಅಂತಹ ಕುಬೇರರಿಗೇನು ಇಲ್ಲಿ ಕೊರತೆಯಿಲ್ಲ.

ನೀನು ನೀನಾದಾಗ ಬರುವ ತೃಪ್ತಿಯೇ ಬೇರೆ,
ಆ ಹರ್ಷ ಉಲ್ಲಾಸಕ್ಕೆ ಬೇರೆ ಸಾಠಿಯೇ ಇಲ್ಲ;
ಅದೇ ಪರಿಪೂರ್ಣತೆ, ಜೀವನದ ಸಾರ್ಥಕ್ಯತೆ,
ನೀನಾಗಿ ನೀನು ನಡೆಯುವುದೆ ಬದುಕಿನ ಗುಟ್ಟು.

ನೀನು ನೀನಾಗಿದ್ದರೆ ಲೋಕವೇ ನಿನಗುಂಟು,
ನಿನ್ನೊಳಗು ಬರಿದಾದರೆ ಎಲ್ಲವೂ ಬರಡು;
ನೀನೇ ನಿನ್ನಳವು, ನೀನೇ ನಿನ್ನಳಿವು,
ಉಳಿದುದೆಲ್ಲ ನಿನಗೆ ಉಡುಪು ಆಡಂಬರ.

Monday, July 3, 2017
Topic(s) of this poem: life,self
COMMENTS OF THE POEM
READ THIS POEM IN OTHER LANGUAGES
Close
Error Success