ಬದಲಾವಣೆ Poem by Praveen Kumar in Bhavana

ಬದಲಾವಣೆ

ಕಾಲ ಹೋಗಿ ಕಾಲ ಬಂತು,
ಮಧ್ಯದಲ್ಲಿ ಏನೇನೋ ಬಂತು;
ಏನೇನನ್ನೊ ನುಂಗಿಬಿಟ್ಟು,
ಹಳಸಿದನ್ನೆಲ್ಲ ಸುಟ್ಟುಬಿಟ್ಟು,
ಕಾಣದನ್ನು ಕೈಯಲ್ಲಿ ಕೊಟ್ಟು
ಬದಲಾವಣೆ ಬರುತ್ತಲಿದೆ.

ನಾನುನೀನು ಎಂಬುವುದನ್ನು
ತರಂಗಾವರ್ತದಲ್ಲಿ ಹಿಡಿದು,
ದಿನರಾತ್ರಿ ಎಂಬುವುದನ್ನು
ತಂತಿಮಾರ್ಗದಲ್ಲಿ ಹೆಣೆದು,
ಕೈಕಾಲು ಕೌಶಲ್ಯವನ್ನು
ಯಂತ್ರರೂಪ ಗೊಳಿಸಿದೆ.

ಚಂದ್ರಸೂರ್ಯ ದೇವರೀಗ
ದೂರವಿರುವ ಲೋಕವಂತೆ,
ಆಕಾಶ, ಬೇಗ ತಲಪುವಂತ
ಸುಖದ ವಾಯುಮಾರ್ಗವಂತೆ,
ಭೂಮಿ ಬಿಟ್ಟು ಮೇಲೆಹಾರಿ
ಯಾಕೋ ಏನೋ ನಡೆಯುತ್ತಿದೆ.

ರಾಜರಾಣಿ ಈಗ ಇಲ್ಲ,
ಒಟು ಪಡೆದು ರಾಜ್ಯಭಾರ;
ಯೋಧಭಟರ ಯುದ್ಧವಿಲ್ಲ,
ಬೋಂಬು ಸುರಿದು ಕೊಲುವರು;
ಚಿಕ್ಕಪಟ್ಟ ದುಡಿಮೆಯಿಲ್ಲ,
ಲಕ್ಷಕೋಟಿ ಉದ್ಯೋಗವು.

ಊರುಹಳ್ಳಿ ಹಾರಿಹೋಗಿ,
ಸಾವಕಾಶತೆ ಮರೆತು ಹೋಗಿ,
ಒತ್ತೊತ್ತಿ ನಾವು ಬದುಕಬೇಕು,
ಕಾದಿಟ್ಟ ರಸ್ತೆ ಬಳಸಬೇಕು,
ಪುಟ್ಟ ಉದ್ಯಾನ ತೆರೆದ ಸಮಯ
ನೋಡಿ ಜನರು ಸೇರಬಹುದು.

ಮನೋವೃತ್ತಿ ಜನರು ಈಗ
ಕಟ್ಟುನಿಟ್ಟಿನ ಕಡು ಶಿಸ್ತಿನಲ್ಲಿ,
ಜಾತಿಧರ್ಮ ಒಡಕು ಮರೆತು
ಸಮಾನತೆಯ ಹಕ್ಕಿನಲ್ಲಿ
ಒಂದೆಯೆಂದು ಬದುಕಬಹುದು,
ಮೇಲೆಮೇಲೆ ಏರಬಹುದು.

ಸಪ್ತಸಾಗರದಾಚೆ ದೇಶ
ಅಂಗೈಯಲ್ಲಿನ ಆಟಿಕೆಯಂತೆ,
ಆಚೆಈಚೆ ಇರುವ ಮನೆ
ಕತ್ತಲಲ್ಲವಿತ ಬಚ್ಚಲಿನಂತೆ;
ಅಗತ್ಯದಂತೆ ನಡತೆ ಈಗ,
ಸಹಜ ಪ್ರಕ್ರಿಯೆ ಎಲ್ಲೂ ಇಲ್ಲ.

ಸಹಜತನದ ಸ್ಥಾನದಲ್ಲಿ
ಏನೋ ಕ್ಲಿಷ್ಟತೆ ಹಬ್ಬಿ ನಿಂತು,
ಅರ್ಹಮಾತ್ರ ಸಹ್ಯವೆಂಬ
ಲೋಕ ನಾಣ್ಣುಡಿ ಪ್ರಮಾಣವಾಗಿ
ಏನೋ ಅದಲು, ಏನೋ ಬದಲು,
ಬದಲಾವಣೆ ಬರುತ್ತಲಿದೆ.

ಸ್ಥಿರತೆ ಸೃಷ್ಟಿಗೆ ಸಹಜವಲ್ಲ,
ಬದಲಾವಣೆ ಲೋಕನಿಯಮ;
ಸರಿಯೋ ಇಲ್ಲಿ ತೀರ್ಪು ಸಲ್ಲ,
ಕಾಲಕೋಲ ನಡೆಯುವಾಗ,
ಕಾಲದೊಡನೆ ಕಾಲನಿಕ್ಕಿ
ಬಾಳುವುದೆ ನಮ್ಮ ದಾರಿಯು.

READ THIS POEM IN OTHER LANGUAGES
Close
Error Success