ಸೂರ್ಯೋದಯ Poem by Praveen Kumar in Bhavana

ಸೂರ್ಯೋದಯ

ದಿಗಂತದಾದ್ಯಂತದ ಕಪ್ಪು ಹಾಸಿನ ಮೇಲೆ
ಮೂಡಣದಂಚಿನಲ್ಲಿ ಬೆಳಕಿನ ಕಿಂಡಿಯೊಂದು
ಹಸುನಗುವನ್ನು ಚೆಲ್ಲುವ ಪರಿ ನೋಡೆ, ಚೆನ್ನೆ;
ಹಸುನಗು ಅರಳಿ ಮುದವರಳಿ ನಾಡಿನ ತುಂಬ
ಬೆಳ್ಳನೆ ಉತ್ಸಾಹ ಉತ್ಕರ್ಷ ತುಂಬುತ್ತಿದೆ ಚೆನ್ನೆ.

ಗರತಿಯ ಹಣೆಯ ಉಂಗುರದ ಹಾಗಿನ ನಸುಗೆಂಪು
ಮೂಡಲಿನ ಮೆಟ್ಟಿಲನು ಮೆಟ್ಟಿ ಮೇಲೇರಿದ ಹಾಗೆ
ಅದೇನೋ ಲವಲವಿಕೆ ಚಟುವಟಿಕೆ ಸುತ್ತುಸುತ್ತಲೆಲ್ಲ;
ಕತ್ತಲಿಗೇ ಜೀವಬಂದಿದೆಯೋ, ಇದೇನು ಮೋಡಿ,
ಕತ್ತಲೆಯೆ ಕರಗಿ ಬೆಳಕು ನೀರಾಗಿ ಹರಿಯುತ್ತಿದೆ ಇಲ್ಲಿ.

ಹಕ್ಕಿಗಳ ಕಲಕಲರವ, ನವನವೀನತೆ ಉಲ್ಲಾಸ,
ಇದೆಲ್ಲದರ ಮಧ್ಯೆ ಅದೇನೋ ಪ್ರಶಾಂತ ಸಂಗೀತ;
ತಾಜಾತನ ತೇಜೋತನ ಪ್ರತಿ ಗಿಡಮರವನದಲ್ಲಿ,
ಹೊಸತನ ಹುರುಪು ಅಲೆಅಲೆಯಾಗಿ ಹರಿದು
ಅದೇನು ಅನುಭವ, ಚೆನ್ನೆ, ಸೂರ್ಯೋದಯದಲ್ಲಿ.

ಮೂಡಣ ಕಣ್ಣು ಮೇಲೇರಿ ಬೆಳಕು ಹಬ್ಬಿದಂತೆ,
ಹಿತ ಕೆಂಬಣ್ಣ ಮೆಲ್ಲ ಕಡುನೀಲವಾಗುತ್ತಿರುವಂತೆ,
ಮಿತ ತಂಗಾಳಿಯು ಬೆಚ್ಚನೆಯ ಹಬ್ಬುತ್ತಿದೆ, ನೋಡೆ;
ಮಲಗಿದ್ದ ಲೋಕವು ನಿದ್ರೆಯ ಮಬ್ಬನ್ನು ಕಳಚಿ
ಹೊಸಲೋಕದ ಹೊಸತನಕೆ ಕಾಲನ್ನಿಕ್ಕುತ್ತಿದೆ ಚೆನ್ನೆ.

ಕತ್ತಲೆಯೊಳಗಡರಿದ್ದ ಬೆದರಿದ್ದ ಆ ಹಳೆ ಗಾಳಿ
ಬಂಧನ ಕಿತ್ತೊಗೆದು ನವೋಲ್ಲಾಸದ ರೂಪಿನಲ್ಲಿ
ತಂಗಾಳಿಯಾಗಿ ಜನಮನ ಮುತ್ತಿಡುತ್ತಿದೆಯಲ್ಲ;
ಹಿತಮಿತ ಬೀಸಿ, ಅಪ್ಪಿ ಅದು ಮುದ ಕೊಡುವಾಗ
ಈ ಲೋಕವೆ ನಾಕ, ಸ್ವರ್ಗ ಮತ್ತೆ ಬೇರೆಲ್ಲೂ ಇಲ್ಲ.

ಗಿಡಮರಕೊಂಬೆಯ ನಡುವಲ್ಲಡಗಿದ್ದ ಹಕ್ಕಿ
ನೇಸರಿನ ಭರವಸೆ ಮೇಲೆ ಮತ್ತೆ ಪುಕ್ಕ ಬಿಚ್ಚಿ
ಬಾನಿನ ತುಂಬ ಕೇಕೇ ಹಾಕುವುದನು ನೋಡು,
ಕತ್ತಲಿನ ಭಯ ಮರೆತು ಬೆಳಕಿನ ಮರೆಯಲ್ಲಿ
ಹೊಸ ದಿನದ ಭರವಸೆ ಹಬ್ಬುವುದನು ನೋಡು.

ಕಗ್ಗತ್ತಲಿನ ಗರ್ಭದಲಿ ಬಾಡಿಬಗ್ಗಿದ ಗಿಡಬಳ್ಳಿ
ಬೆಳಕಿನ ಸ್ಫರ್ಶದಿ ವಿದ್ಯುತ್ತು ಸಂಚಾರವಾಗಿ
ಎಡೆಯೆತ್ತಿ ನಿಂತು ಝಗಝಗಿಸುವ ಪರಿ ನೋಡು;
ಕಂಪು ತುಂಬಿದ ಹೂವುಗಳು ಅರಳುತ್ತಿರುವಾಗ
ಹೊಸಹೊಸ ಚೈತನ್ಯ ತುಂಬುತ್ತಿದೆ ಸುತ್ತುಮುತ್ತು.

Thursday, July 20, 2017
Topic(s) of this poem: nature,sunrise
COMMENTS OF THE POEM
READ THIS POEM IN OTHER LANGUAGES
Close
Error Success