ಈ ಕರಾಳ ಮಾಸದ ಹತ್ತಾರು ಮಳೆ,
ವಿಸ್ತಾರ ಜೀವನ, ಊದಿಕೊಂಡ ಆಗಸದ ಹಾಗೆ.
ಇನ್ನೂ ಹೊರ ಬರುತ್ತಿಲ್ಲ, ನನ್ನ ತಂಗಿ ಮತ್ತು ಆ ಸೂರ್ಯ,
ಅವಳ ಕೋಣೆಯಲಿ ಗುಬ್ಬಚ್ಚಿಯ ಹಾಗೆ ಹೊಕ್ಕಿರುವರು
ನನಗೆ ಗೊತ್ತು ಎಲ್ಲವೂ ನರಕಕ್ಕೆ ಹೋಗುತ್ತದೆ;
ಪರ್ವತದ ಹೊಗೆಯಂತೆ, ನದಿಯಾಗಿ ಗಿಡವಾಗಿ;
ಆದರೂ ಈಕೆ ಹೊರ ಬರುತ್ತಿಲ್ಲ,
ಈ ಜೋರು ಮಳೆ ನಿಲ್ಲುತ್ತಿಲ್ಲ..
ಅವಳಿನ್ನೂ ಒಳಗೇ ಇದ್ದಾಳೆ, ಆ
ಹಳೆಯ ವಸ್ತುಗಳ ಮುದ್ದಿಸುತ್ತಾ,
ಅವು ನನ್ನ ಕವಿತೆಗಳು, ಬಹುಶಃ
ಸಿಡಿಲು ಬಡಿದರೂ ಅವಳು ಹೊರಗೆ ಬರಳು..
ಅವಳು ಅಲ್ಲೇ ಇದ್ದಾಳೆ.
ನಿನಗೇಕೆ ತಿಳಿಯುವುದಿಲ್ಲ, ಈ ಮಳೆ ನಿಲ್ಲಿಸಲು
ನಾನು ಅಸಹಾಯಕನೆಂದು? ಆದರೂ
ಇಂದು ನಿಧಾನಕೆ ಕಲಿಯುತಿರುವೆ
ಕರಾಳ ದಿನ, ಪರ್ವತದ ಆವಿ, ಕೀಟಗಳ ಗಾಳಿ ಮಾತು
ಜೊತೆಗೆ ಈ ಕಹಿ ಮಾತ್ರೆಗಳ ಸೇವನೆ ಪ್ರೀತಿಸುವುದ...
ಹೂವಂತ ನಿನ್ನ ಹಣೆ ಮತ್ತು ಆ
ಕ್ಷಮೆಯ ಕಂಗಳ ಮಳೆಗೆ
ನೆನೆಯದಂತೆ ಪೊರೆವಳು ನನ್ನ ತಂಗಿ,
ಸಾಕು ಇನ್ನಾದರೂ ಹೊರಗೆ ಬಾ...
ಗೊತ್ತಾ ನಿನಗೆ, ಇದು ಆ ಹಳೆಯ ಕತೆಯಂತಲ್ಲ,
ಆದರೆ ಅದರಷ್ಟೇ ಸತ್ಯ, ಏಕೆಂದರೆ
ಈಗೀಗ ದಿನಗಳನ್ನೂ,
ಕರಾಳ ರಾತ್ರಿಗಳನ್ನೂ ಪ್ರೀತಿಸುತ್ತಿದ್ದೇನೆ ನಾನು;
ಅಷ್ಟೇಕೆ? ಈ ಕರಿಯ ಮೋಡವನ್ನೂ,
ಆ ಬಿಳಿದಾದ ಬೆಟ್ಟಗಳನ್ನೂ....
ನಿನಗೆ ಇಷ್ಟೆಲ್ಲಾ ಹೇಳಿದ್ದೇಕೆ ಗೊತ್ತೇ?
ಹಿಂದೆ ನಾನೂ ಬಹಳಷ್ಟು ಪ್ರೀತಿಸುತ್ತಿದ್ದೆ,
ಬರೀ ನನ್ನನ್ನೇ....
ಮೂಲ: ಡೆರೆಕ್ ವಾಲ್ಕಾಟ್
ಕನ್ನಡಕ್ಕೆ: ರಮೇಶ್ ಹೆಚ್.ಕೆ
This poem has not been translated into any other language yet.
I would like to translate this poem