ಆಗ ದೇವನೊಲಿವ Poem by Srinidhi S U

ಆಗ ದೇವನೊಲಿವ

Rating: 1.0

ಹರಿ ನಾಮವ ಪಾಡಿ
ವರವಂ ಹರನಲ್ಲಿ ಬೇಡಿ
ಜನನ ಮರಣದ ಆಟದಲ್ಲಿ
ಸೃಷ್ಟಿಕರ್ತ ಬ್ರಹ್ಮನ ಒಳಗೂಡಿ
ಸಂಕಷ್ಟದಲ್ಲಿ ಮಾತೆಯ ನೆನೆವಾತ ಸನಾತನಿ

ವೇದ ಮಂತ್ರ ಜಪದ ನಿಷ್ಠೆ
ಭಕ್ತಿ ವೈರಾಗ್ಯ ಸಧರ್ಮ ಅವನ ಶಿಷ್ಠೆ.
ಅರಿಷಡ್ವರ್ಗಗಳ ತೊರೆದು ಜೀವಿಸುವನು
ಸನಾತನ ಧರ್ಮ ಪಾಲಕ ಹಿಂದು

ಸ್ವರ್ಗದಲ್ಲಿಪ್ಪ ದೇವನ ಪುತ್ರ
ಮಾನವನ ರೂಪದಲ್ಲಿ ಜನಿಸಿ ತಾ
ಪರರ ಪಾಪಕ್ಕೆ ಮಣಿದು, ಮತೊಮ್ಮೆ ಬರ್ಪನೆಂಬ
ಯೇಸು ಕ್ರಿಸ್ತನ ನಂಬಿದಾತ ಇಸಾಯಿ

ದೇವನೊಬ್ಬನೇ. ಸೇವಕ ನಾ! ಎಂಬ
ಅವನಿಲ್ಲದೆ ನಿರ್ಲಿಪ್ತತೆ ಇಲ್ಲ ಎಂಬ
ಪೈಗಂಬರರ ಸಂದೇಶವ ಸದಾ ಸ್ಮರಿಸಿ
ಅಲ್ಲಾಹು ಅನ್ನು ನಿತ್ಯ ಐದರಂತೆ ನೆನೆವವ ಮುಸಲ್ಮಾನ

ಕ್ಷಮೆಯೇ ಶಿಕ್ಷೆ ಕ್ಷಮತ್ವವೇ ಶಕ್ತಿ
ಜನನ ಮರಣದ ವೃತ್ತಕ್ಕೆ ಶಾಂತಿ
ಮಂತ್ರದ ಬೀಜ ಬಿತ್ತಿ
ಬುದ್ಧನಿಂದ ಜ್ಞಾನಾರ್ಜನೆ ಪಡೆದವ ಬೌದ್ಧ

ಇಹದ ಕರ್ಮ ಲೇಸು ಪರದ ಸೌಖ್ಯಕ್ಕಿಂತ
ವೈಭೋಗವಿಲ್ಲದೆ, ತ್ಯಾಗ ಅಹಿಂಸೆಯ
ಮೈದಪ್ಪಿ ಮೋಕ್ಷ ಮಾರ್ಗದಲ್ಲಿ ವೀರ
ತೀರ್ಥಂಕರರ ದಾರಿ ಹಿಡಿದವ ಜೈನ.

ಹಿತಂಗೆ ಹಿತ, ಸೇವೇಯೇ ಸ್ಮರಣೆ
ಸತ್ಯ ಮಾರ್ಗದ ಹಾದಿ,
ಮೂಲ ಮಂತ್ರದ ಜಪ,
ಗುರುವೇ ಸರ್ವಸ್ವ ಎಂಬವ ಸಿಖ್ಖ

ಮನದಲ್ಲಿಪ್ಪ ದೇವಂಗೆ ನಾನಾರ್ಥ
ನಾನಾ ಸ್ವರೂಪ ನಾನಾ ಚಿಂತನೆ
ಪಶು ಪಕ್ಷಿ ಪುಸ್ತಕ ಪುತ್ತಳಿ ಪ್ರಜ್ಞೆಯಲ್ಲಿ
ಅವನ ಕಂಡವ ಮನುಜ

ಭಕ್ತಿಯ ಕರೆಗೆ ಓಗೊಟ್ಟು ಬರುವ
ಶಕ್ತಿ ಯುಕ್ತಿ ನೀಡಿ ಫಲ ಕೊಡುವ
ವಿದ್ಯಾದಾನ ನೀಡಿ ಹಸಿವನ್ನೀವನ್ನ
ತಾಯಿ ತಂದೆ ಗುರುವಿನೊಳ್ ಕಾಣಿರೋ
ನಾನಾ ನಂಬಿಕೆಗೆ ನೆಲೆಗೊಟ್ಟ
ಭಾರತ ಮಾತೆಯನ್ ನಮಿಸಿರೋ
ಆಗ ದೇವನೊಲಿವ!


ಪ್ರೊ. ಶ್ರೀನಿಧಿ ಎಸ್ ಯು
[26 Dec 2022]

COMMENTS OF THE POEM
READ THIS POEM IN OTHER LANGUAGES
Srinidhi S U

Srinidhi S U

Sullia, Karnataka, India
Close
Error Success