ನೋಡಿದೆಲ್ಲ ಬೇಕು ನಮ್ಮ ಆಶೆಬುರುಕು ಮನಸ್ಸಿಗೆ,
ದೂರದಲ್ಲಿ ಕಂಡದನ್ನು ಸಮೀಪ ತಂದು ನೋಡಬೇಕು,
ಕಣ್ಣಿನೆದುರು ಬಿದ್ದುದನ್ನು ಕೈಯ ಬಾಚಿ ತಬ್ಬಬೇಕು,
ಹಿಂದೆ ಮುಂದೆ ನೋಡಿ ನೋಡಿ, ಹಿಂಜಿ ಹಿಂಜಿ ಹಿಪ್ಪೆ ಮಾಡಿ
ಮನಸಿನಾಶೆ ತಣಿಸಬೇಕು, ಮತ್ತೆ ಮುಂದೆ ನೋಡಬೇಕು;
ಗಾಳಿಯೇಣಿಯೇರಿಕೊಂಡು, ಮೋಡಗಳನು ಸುತ್ತಿಕೊಂಡು
ಧ್ರುವತಾರೆಯನ್ನು ಮೀರಿ ಗಗನದಂಚು ಮುಟ್ಟಬೇಕು
ಎಂಬ ಮಿಥ್ಯ ಗುರಿಯನಿಟ್ಟು ಹಾರಿಯೇರಿ ಕೆಳಗೆ ಬಿದ್ದು!
ದಿಕ್ಕು ಕೆಟ್ಟ ಮನಸುಯೆಷ್ಟು, ಒಡೆದು ಹೋದ ಹೃದಯವೆಷ್ಟು!
ಆಶೆಬುರುಕು ಮನಸು ತಳವು ಕಾಣವಂತ ನಿಬಿಡ ಬಿರುಕು,
ಹಾಕಿದೆಲ್ಲ ಹೀರಿಕೊಂಡು ಮತ್ತೆ ಮತ್ತೆ ಬಾು ಬಿಟ್ಟು,
ಬೇಡಿ ಕಾಡಿ ಪೀಡೆ ಕೊಡುವ ಹೊಟ್ಟೆಬಾಕ ಬಡತನ;
ಬೆಳಕನೆಂದು ಕಾಣದಂತ ಪಾತಾಳದಾಳ ಆಶೆ ಮನಸು,
ಇಳಿಯುವಷ್ಟು ಅಗಲ ಕಿರಿದು, ಪಕ್ಕಗಳಿಗೆ ಗೋಡೆ, ಬಡಿತ,
ಕಾಲಿಕ್ಕಿದಲ್ಲಿ ಜಾರಿ ಬಿಡುವ ಒದ್ದೆ ಪಾಚಿ ಮೇಲ್ಮೈ;
ಮೇಲೇರಿ ಹೊರ ಬರುವುದೊಂದು ಬರೆ ಪೊಳ್ಳು ಕನಸು ಮತ್ತೆ,
ತಾಮಸದ ಬೇರು ಜಾಲ ಸುತ್ತಿ ಸುತ್ತಿ ಹಿಡಿದಿಟ್ಟ ಕಡೆ,
ಮೈಯ ಭಾರ ಹೊರೆಯ ದಾಟಿ ಮೋಕ್ಷ ಮತ್ತೆ ಹೇಗೆ ಸಾಧ್ಯ?
ಹಾಲು ಕೀರು, ಸಿಹಿ ನೀರು, ಉಪ್ಪು ನೀರು, ಕೊನೆಗೆ ಕೆಸರು,
ಏರುವಂತ ಬಾಯಾರಿಕೆಗೆ ತಾರತಮ್ಯ ಜ್ಞಾನವಿಲ್ಲ;
ಅಂದಚಂದ, ಒಲವು ಚೆಲವು, ಅವರು ಇವರು ಭೇದವಿಲ್ಲ,
ತೃಪ್ತಿ ಅತೃಪ್ತಿ, ಬೇಕು ಬೇಡ, ನ್ಯಾಯನ್ಯಾಯ ವಿಧಿಗಳಿಲ್ಲ;
ಕಂಡದ್ದನ್ನು ಹಿಡಿಯಬೇಕು, ಹಿಡಿದುದನ್ನನುಭವಿಸಬೇಕು;
ಆಶೆ ಬುರುಕು ಸುಳುಪಿನೊಳಗೆ ಸುತ್ತಿ ತಲೆ ತಿರುಗಿದಾಗ
ರುಚಿಯು ಬೇಡ, ಶುಚಿಯು ಬೇಡ, ಅಭ್ಯಾಸ ಬಲದಿ ಬಯಸಿ ಹಿಡಿದು
ರೊಚ್ಚೆ ಕೊಚ್ಚೆಯೊಳಗೆ ಮುಳುಗಿ, ಹೊಲಸು ಕೆಸರು ಮೆತ್ತಿಕೊಂಡು
ಬೀಭತ್ಸ ಬಾಳ ನರಕದೆಡೆಗೆ ನಡೆಸಿ ಕೊನೆಯ ಕಾಣಬೇಕು.
This poem has not been translated into any other language yet.
I would like to translate this poem