ನಾನೆಲ್ಲಿದ್ದೇನೆಂದು ನನಗೇ ಗೊತ್ತಿಲ್ಲ,
ನಾನಿಲ್ಲಿದ್ದೇನೆಂದು ಮಾತ್ರ ಗೊತ್ತು;
ಸ್ಥಳದ ಹಿಂದುಮುಂದುಗಳು ಗೊತ್ತಲ್ಲ,
ನಿಂತ ನಾಲ್ಕಡಿ ನೆಲ ಮಾತ್ರ ಗೊತ್ತು.
ಎಡಬಲದಲ್ಲಗಲ ದಾರಿ ದೂರದಲ್ಲಿವೆ,
ದಟ್ಟಡವಿ ಮರುಭೂಮಿ ಕೂಡಿ ನಿಂತಿವೆ ಸುತ್ತ;
ಎಲ್ಲೆಂದೆಲ್ಲೋ ಸಾಗಿದೆ ಕಟ್ಟಡವಿ ಮಧ್ಯದ ದಾರಿ,
ನಿಂತ ನೆಲವೆಲ್ಲಿ ನಿಂತಿದೆ ನಾನು ಕಂಡವನಲ್ಲ.
ನಾನಿಲ್ಲೇಕಿದ್ದೆನೆಂದು ಗೊತ್ತಿಲ್ಲ ನನಗೆ,
ನಾನಿಲ್ಲಿ ತಲಪಿದೆನೆಂದು ಮಾತ್ರ ಗೊತ್ತು;
ಹೇಗೆ, ಯಾರಿಂದ, ಯಾಕೆಂದು ಗೊತ್ತಿಲ್ಲ,
ಕಣ್ಣು ಬಿಟ್ಟಾಗ ನಾನಿಲ್ಲಿದ್ದೆನೆಂದು ಗೊತ್ತು.
ಕಣ್ಣು ಕುಕ್ಕವ ದಟ್ಟಕತ್ತಲೆ ತುಂಬಿರುವಲ್ಲಿ,
ಬಂದೆನೆಲ್ಲಿಂದ ಹೇಳುವವರಿಲ್ಲ;
ಮುಂದಾರಿ ತೋರಿ ನಡೆಸುವವರಿಲ್ಲ,
ಸ್ತಬ್ಧ ನೆಲದಲಿ ನಾನು ಬಂಧಿಯೆಂದು ಗೊತ್ತು.
ಇನ್ನೆಷ್ಟು ಕಾಲವೀಯಜ್ಞಾತವಾಸ?
ಯಾಕಿಷ್ಟು ದೀರ್ಘವೀ ವಿಧಿ ಸೆರೆವಾಸ?
ಬೆಳಕು ಬಂದರೆ, ದಿಕ್ಕುದಾರಿ ತೋರಿ ನಿಂತರೆ,
ಬೇರೂರಿದ ನೆಲಬಿಟ್ಟು ಹಾರಿ ಹೋಗುವೆ ದೂರ.
This poem has not been translated into any other language yet.
I would like to translate this poem