ನಿನ್ನಲ್ಲಿದ್ದು ನಿನ್ನಿಂದಲಿದ್ದು
ನಿನ್ನನ್ನು ಹುಡುಕುವೆವು ನಾವು;
ನೀನು ಕೊಟ್ಟಿರುವ ಕಣ್ಣುಗಳಲ್ಲೆ
ಮೂಡಿ ನೀ ಬರಲಾರೆ ಯಾಕೆ?
ಎಡದಲ್ಲಿ, ಬಲದಲ್ಲಿ, ಮೇಲೆ, ಕೆಳಗೆ
ನಿನ್ನರವು ಮೈತೋರಲಾರೆ;
ಕ್ಷಣಕ್ಷಣವೂ ಪ್ರತಿ ಸ್ಥಳವೂ
ನಿನ್ನಿರವು ನೆನಪಿಸಿದಷ್ಟು
ನಮ್ಮಜ್ಞಾನ ಕಣ್ಣು ಕವಿಯುವುದು ನೋಡು,
ರೂಢಿ ಹಿಡಿತದ ಪಂಚೇಂದ್ರಿಯ ಭೂತ
ಬುದ್ದಿ ಗ್ರಹಣ ಹಿಡಿಸುವುವು ನೋಡು:
ನಮ್ಮೊಳಗೂ ಹೊರಗೂ ಹರಡಿರುವ ನೀನು
ನಮ್ಮರಿವಿಗೆ ಯಾಕೆ ದೂರವಿರುವೆ?
ನೀನಿಟ್ಟ ಬೆಳಕಿನ ನೆರಳಾದ ನಾವು
ನಿನ್ನ ಬೆನ್ನರಸುತ್ತ ದೂರ ನಡೆದಷ್ಟು
ಕೈಗೆಟುಕದೆ ನೀನು ದೂರದಲ್ಲಿರುವೆ.
ಏಕಾಗ್ರಚಿತ್ತದ ತಪಸ್ಸಿಗೊಲಿವೆ,
ಗುಣಗುಣಗಳೆಲ್ಲ ನೀನಾಗಿರುವೆ,
ಲಾವಣ್ಯದಲ್ಲಂತು ನೀನೇುರುವೆ;
ಅಣುತೃಣದಲ್ಲಡಗಿದ ನಿನ್ನ ವಿರಾಟ ರೂಪ,
ಕ್ಷಣ ಕ್ಷಣ ಕಾಣಿಸುವ ನಿನ್ನ ಕಾಲಸ್ವರೂಪ
ಬೆಳಕಿನಲ್ಲಡಗಿರುವ ವರ್ಣ ವೈವಿಧ್ಯದಂತೆ,
ನೀರಿನಲ್ಲಡಗಿರುವ ಅಲೆಅಲೆಗಳಂತೆ,
ಕತ್ತಲೆಯಲ್ಲಿನ ಕತ್ತಲೆಯಂತೆ
ಕಂಡರೂ ಕಾಣಿಸದಂತಿರುವಿ ನೀನು,
ಮನಸ್ಸಿಗೆ ಬರುವೆ, ಹೃದಯಕ್ಕೊಲಿವೆ,
ಇಂದ್ರಿಯಗಳಿಗೆ ನೀನೇಕೆ ತೋರಲಾರೆ?
ಭೌತಭೌತಗಳ ನೀನಮಾಯಕ ಶಕ್ತಿ,
ನಿಸರ್ಗ ಸ್ವರೂಪದ ಮೂಲಗುಣ ರೂಪ,
ನಿರ್ಗುಣ ನಿರಾಕಾರ ನೀನಾಗಿ ನಮಗೆ,
ಶೂನ್ಯದಲ್ಲಡಗಿದ ಅನಂತನಾಗಿ
ನಮ್ಮರಿವಿನ ಪರಿಧಿಗೆ ಬಾಹಿರನಾಗಿರುವೆ.
ನಿನ್ನನೆಲ್ಲೆಲ್ಲೂ ಕಂಡವರುಂಟು,
ನಿನ್ನನೆಲ್ಲೆಲ್ಲೂ ಕಾಣದವರೆಷ್ಟೋ!
ನಿನ್ನೀ ಸ್ಟೃಯಲ್ಲಿ ವೈವಿಧ್ಯವೇಕೆ?
ಸಕಲ ಸ್ಠೃಗೂ ನೀನೊಬ್ಬನಿರುವವನು,
ನಿನ್ನಿರವಿನ ಬಗ್ಗೆ ಭಿನ್ನಮತವೇಕೆ?
ನಿನ್ನ ಮೂಲವನ್ನರಿತವರಿಲ್ಲ,
ನಿನ್ನನ್ನು ಮೂಲವೆಂದೆನ್ನುತ್ತಾರಲ್ಲ!
ನಿನ್ನಯ ರೂಪವನ್ನರಿತವರಿಲ್ಲ,
ನೀನು ಸರ್ವಾಂತರ್ಯಾಮಿಯೆನ್ನುತ್ತಾರಲ್ಲ!
ನಿನ್ನಯ ಗುಣವನ್ನು ಗುಣಿಸಿದವರಿಲ್ಲ,
ನೀನಾನಂದ, ಜ್ಞಾನ, ಸೌಂದರ್ಯವೆಂದು
ಜನರೆಲ್ಲ ನಿನ್ನ ಕೊಂಡಾಡುತ್ತಾರಲ್ಲ!
ನೀನೆಲ್ಲವೂ ಹೌದು, ನೀನಾವುದೂ ಅಲ್ಲ,
ಎಲ್ಲಾ ಇಲ್ಲಗಳಪೂರ್ವ ಸಂಸರ್ಗ,
ಅನಂತ ಶೂನ್ಯದ ಪರಿಷ್ಕಾರ.
This poem has not been translated into any other language yet.
I would like to translate this poem