ಮಟಮಟ ಮಧ್ಯಾಹ್ನದ ವೇಳೆ, ನಾಳೆ, ಬರುವೆನೆಂದಿದ್ದೆ,
ಹೇಳಿದ ಕಾಲಕ್ಕೆ ತಲಪುವ ಶ್ರದ್ಧೆ ನನಗೂ ಬಹಳವಿತ್ತು,
ಹೇಳಿದ ಕಾಲಕ್ಕೆ ಸ್ನಾನ ಊಟ ಮುಗಿಸಿ ಕಾಯುತ್ತಿದ್ದೆ;
ನಾನೇನೋ ಹೇಳಿದ್ದೆ, ಅದರಂತೆ ನಡೆಯಲೂ ಸಿದ್ಧನಿದ್ದೆ,
ಆದರೆ ಕಾಲದ ಬೀಗಕ್ಕೆ ಕೈ ಇರುವವ ನಾನಲ್ಲವಲ್ಲ,
ಹೇಳುವವನೊಬ್ಬ, ಪರವಾನಿಗೆ ಕೊಡುವವನೊಬ್ಬನಿಲ್ಲಿ,
ಈ ದ್ವಂದ್ವದ ಮಧ್ಯೆ ಹೇಳಿದಂತೆ ನಡೆವುದು ಹೇಗೆ ಸಾಧ್ಯ?
ಮಟಮಟ ಮಧ್ಯಾಹ್ನ ಕಳೆದು ಮುಸ್ಸಂಜೆ ಕತ್ತಲಾಯಿತು,
ಕತ್ತಲೂ ಹರಿದು ಹೊಸ ಹೊತ್ತಾರೆ ಮೂಡಿತು ಮತ್ತೆ,
ನುಡಿದಂತೆ ನಡೆಯಲಾಗದೆ ನಡುವಲ್ಲೆ ನಿಂತಿದ್ದೆ ನಾನು;
ಕಾಯುತಿದ್ದವರು ಕಾದು ಕಾದು ಸೋತು ಮಲಗಿದ್ದರು,
ಕೊಟ್ಟ ಮಾತಿಗೆ ತಪ್ಪಿದ ತಪ್ಪಿಗೆ ನಾನೂ ಕೊರಗಿತ್ತಿದ್ದೆ.
ಅಸ್ಥಿತ್ವವೆಂಬುವುದು ಬರಿಯ ಪ್ರಸ್ತುತದ ಒಂದು ಸೊತ್ತು,
ನಿನ್ನೆನಾಳೆಯ ಪರಿವೆ ಗೊಡವೆ ಅದಕೆ ಕಿಂಚಿತ್ತೂ ಇಲ್ಲ,
ನಿನ್ನೆನಾಳೆಯ ಬಗ್ಗೆ ನಿಷ್ಠೆ ಶ್ರದ್ಧೆಗೆ ಅಲ್ಲಿ ಬೆಲೆಯೇ ಇಲ್ಲ;
ದಶದಶ ದಶ ಸಾವಿರ ಅಗೋಚರ ಅಪವರ್ತನದ ಫಲ
ಅಸ್ಥಿತ್ವ, ಪ್ರಚ್ಛನ್ನ; ನನ್ನ ನಿಮ್ಮ ಕಾಲಜ್ಞಾನಕ್ಕೆ ಹೊರತು,
ಅದು ನಡೆಸಿದುದೆ ದಾರಿ, ತೋರಿಸಿದುದೆ ಪರಮ ಗುರಿ,
ಅಸ್ಥಿತ್ವದ ಹೊರಗೆ ಶೂನ್ಯ, ಬರಿಯ ಕತ್ತಲು, ಬಯಲು;
ನಿನ್ನೆಯೊಂದ ಹೊರಟು ನಾಳೆಗೆ ನಡೆಯುವ ಅಸ್ಥಿತ್ವ
ಪ್ರಸ್ತುತಕೆ ಗಹನ, ಅಸ್ಪಷ್ಟ; ಕಾಲನಿಯಮಕೆ ಹೊರಗು,
ನಿನ್ನೆಯಿಂದ ಹೊರಟರೂ ನಿನ್ನೆಯ ಬಂಧನಕೆ ಹೊರತು,
ನಾಳೆಗೆ ಹೊರಟರೂ ನಾಳೆಯ ಸಂಘಟನೆಗೆ ಹೊರಗು,
ಕಾಲಗರ್ಭದೊಳಗಿಂದ ಸ್ಫುಟಿಸುವ ವಿಸ್ಮಯ ಅಸ್ಥಿತ್ವ.
ಮಟಮಟ ಮಧ್ಯಾಹ್ನ ಮರುದಿನ ನಾನಲ್ಲಿ ಹೋದೆ,
ನನ್ನ ಕಂಡವರು ಸ್ವಾಗತಿಸಿ ಒಳಗೊಯ್ದು ಕುಳ್ಳಿರಿಸಿ
ಬಹು ಕುಶಲೋಪಚಾರದಿ ಸನ್ಮಾನಿಸಿದರು ನನ್ನ;
ನುಡಿದಂತೆ ಬರಲಿಲ್ಲ ಏಕೆಂದು ಅವರು ಕೇಳಲಿಲ್ಲ,
ಕಾಲದ ಬೀಗದ ಕೈ ನನ್ನಲ್ಲಿಲ್ಲವೆಂದು ನಾನೂ ಹೇಳಲಿಲ್ಲ;
ಘಟಿಸುವುದು ಘಟಿಸುವುದು ಆಯಾಯಾ ಕಾಲದಲ್ಲಿ,
ಹೇಗೆ, ಯಾಕೆ, ಯಾವ ಕಾಲದಲ್ಲೆಂದು ತಿಳಿದವರಿಲ್ಲ;
ಹಾಗೆಂದು ನನ್ನನಿಮ್ಮ ನಿರ್ಧಾರ ಮಾಡದಿರುವಂತಿಲ್ಲ,
ಕಾಲಗರ್ಭದ ಒಳಗೆ ಬಿತ್ತುವುದು ಬೀಜ, ನಿರ್ಧಾರ,
ಕಾಲ ಪರಿಷ್ಕಾರದಿ ಮೊಳೆತು ಬೀಜ ಮರವಾಗುವುದು,
ಯಾವಾಗ ಹೇಗೆ ಹೂವುಫಲವೆಂಬುದು ನಮ್ಮ ಕೈಯಲ್ಲಿಲ್ಲ,
ಕಾದರೆ ಕಾಲಕಾಲ ಸೇರಿದಂತೆ ಫಲ ನೀಡುವುದು ಕಾಲ.
This poem has not been translated into any other language yet.
I would like to translate this poem