ಅನುರಾಗ Poem by PRAVEEN KUMAR Kannada Poems

ಅನುರಾಗ

ಯಾಕೆ ನಿನ್ನ ಕಣ್ಣಿನಲ್ಲಿ ನನ್ನ ಕಂಡು ಇಷ್ಟು ಹೊಳಪು,
ಹಿಂದೆ ಎಂದು ಕಾಣದಂತ ಬಣ್ಣ, ಆಶೆ, ಕನಸು, ಹುರುಪು,
ಹೃದಯ ತುಂಬಿ ಉಕ್ಕಿ ಬಂದ ನಗುವು ನಿನ್ನ ಮುಖದ ಮೇಲೆ,
ದೇವರನ್ನೆ ಕಂಡ ತೃಪ್ತಿ ಶಾಂತಿ ನನ್ನ ಕಂಡ ಮೇಲೆ.

ಬರುವೆ ನಾನು ಎಂದು ತಿಳಿದು, ಕಾಲತುದಿಯ ಮೇಲೆ ನಿಂತು
ದಾರಿಯತ್ತ ಕಣ್ಣು ಹರಿಸಿ, ನನ್ನ ನೀನು ಕಾಯುತ್ತಿದ್ದೆ.
ಹೊಸಿಲು ದಾಟಿ ಬಂದ ನನ್ನ ತಗ್ಗಿ ಬಗ್ಗಿ ನಾಚಿ ನಿಂತು
ಮೌನದಿಂದ ಕಣ್ಣು ತುಂಬಿ ನಿನ್ನ ಎದೆಗೆ ಸೆಳೆಯುತ್ತಿದ್ದೆ.

ನನ್ನ ಎದುರು ನಿನ್ನ ರೂಪ ತುಂಬ ನಾನು ಮಿಂಚು ಕಂಡೆ,
ಏನು ಹರ್ಷ, ಏನು ಬೆಳಕು, ತಿಳಿಯದಂತ ಚೆಲುವು ಕಂಡೆ,
ಜೀವ ಚಿಗುರುವಂತ ಚೆಲುವು, ಮಾತಿನಲ್ಲಿ ಹಿತದ ಚೆಲುವು,
ಹಾವಭಾವದಿಂದ ಒಲವು ಹೃದಯ ತುಂಬಿ ಬರುವ ಚೆಲುವು.

ಹೃದಯದಲ್ಲಿ ಏನೋ ಜಿಗಿತ, ಮೈಯಲೆಲ್ಲ ಸುಖದ ಬಿಗಿತ,
ಕಣ್ಣಿನಲ್ಲಿ ಬೆಳಕು, ಸೆಳೆತ, ಮಾತಿನಲ್ಲಿ ಪ್ರೀತಿ ಒರೆತ,
ಹೀಗೆ ಏನೋ ಅದಲು ಬದಲು ಯಾಕೆ ನಿನ್ನ ಚಹರೆಯಲ್ಲಿ,
ನಿನ್ನ ನನ್ನ ಕಣ್ಣು ಮಿಂಚು ಒಂದಕ್ಕೊಂದು ಬೆರೆಯುವಾಗ?

ನಿನ್ನ ನಾನು, ನನ್ನ ನೀನು ನೋಡಿದಾಗ ಏನೋ ಸುಖವು,
ಮನಸಿನಲ್ಲಿ ಬಿಸಿಲು ಹಬ್ಬಿ ಹಿತದ ಕಾವು ಮೈಗೆ ಏರಿ
ಮೈಯು ಮನಸು ಹೃದಯ ಆತ್ಮ ಕೂಡಿ ಕುಣಿವ ಸ್ವರ್ಗ ಸುಖವು,
ಹೃದಯ ಹೃದಯ, ಆತ್ಮ ಅತ್ಮ ಬೆಸೆವ ದಿವ್ಯ ಅನುಭವ.

ನಿಂತ ಜಾಗ ಬಿಡದೆ ನೀನು ನನ್ನ ಹೃದಯ ಸೇರಬಲ್ಲೆ,
ಮೌನ ದಿನ್ನೆ ತುದಿಯ ಸೇರಿ ಭಾವಲೋಕ ತೆರೆಯಬಲ್ಲೆ,
ದೀಪದಂತೆ ಹೊಳೆವ ಕಣ್ಣು, ಹೃದಯ ಹಣತೆಯನ್ನು ಹಚ್ಚಿ
ನನ್ನ ಲೋಕಕೆಲ್ಲ ಹಬ್ಬಿ ಬಾಳ ಬೆಳಕುಗೊಳಿಸುತಿಹುದು.

ಮೌನ ಮೀರಿ ಕೆಲವು ಬಾರಿ ಮಾತು ಮುತ್ತುಗಳನು ಹೆಣೆದು
ಮೆಲ್ಲ ಮೆಲ್ಲ ಪ್ರೀತಿುಂದ ನನ್ನ ಕಡೆಗೆ ತೂರಿ ಬಿಡುವೆ,
ಹೇಗೆ ನಾನು ಪಡೆದೆನೆಂದು ಕಣ್ಣ ಕಡೆಯ ನೋಟದಿಂದ
ನೋಡಿ ನೋಡಿ ತೃಪ್ತಿುಂದ ಹೇಗೆ ನೀನು ಹಿಗ್ಗಿ ಬಿಡುವೆ!

ನಿನ್ನ ನನ್ನ ಭೇಂಟದಲ್ಲಿ ಗಾಳಿ ಕೂಡ ಮಧುರವಾಗಿ,
ಬಣ್ಣಬಣ್ಣ ರೂಪ ತಾಳಿ ನಮ್ಮ ನಡುವೆ ಸೇತುವಾಗಿ
ನನ್ನ ಕನಸ ನಿನ್ನವರೆಗೆ, ನಿನ್ನ ಕನಸ ನನ್ನವರೆಗೆ
ತಂದು ನಮ್ಮ ಆಶೆಗೊಂದು ಹೃದಯ ಕಿಂಡಿ ತೆರೆಯುತಿಹುದು.

ಮಾತು ಮಾತು ಕೂಡುವಾಗ, ಕಣ್ಣು ಕಣ್ಣು ಬೆರೆಯುವಾಗ
ನಿನ್ನ ರೂಪ ಹಾವಭಾವ ಚಿನ್ನದಂತೆ ಹೊಳೆದು ಹೊಳೆದು
ಆಳವಾದ ಚೆಲುವು ಒಂದು ಒಳಗಿನಿಂದ ಮೇಲೆ ಉಕ್ಕಿ
ಹಾಲಿನಂತ ಭಾವದಲ್ಲಿ ಗಂಧಸ್ವಾದ ಬೆರೆವ ಸೊಗಸು.

ಅಲ್ಲೆ ಇರಲಿ, ಇಲ್ಲೆ ಇರಲಿ, ನಾವು ತೃಪ್ತ ಹಕ್ಕಿ ಮಿಥುನ,
ರೆಕ್ಕೆ ಪುಕ್ಕ ಚಾಚಿ ತಬ್ಬಿ ಜೊತೆಗೆ ಹಾರುವಂತ ಹಕ್ಕಿ,
ದೂರದೂರವಿರಲು ನಮಗೆ ದೇಹ ಜೀವ ಅಗಲಿ ನಿಂತ
ದು: ಖ ನೋವು ಕೂಡಿ ಬಂದು ಮತ್ತೆ ಜೀವ ಚಿಗುರದೆಂದೂ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success