ಅರಿವಿನ ಪರಿಧಿ Poem by PRAVEEN KUMAR Kannada Poems

ಅರಿವಿನ ಪರಿಧಿ

ನೀನೆಲ್ಲಾದರೂ ಇದ್ದಿದ್ದರೆ ಇಲ್ಲಿ ಬರಬೇಕಿತ್ತು,
ಓಡೋಡಿ ಬಂದು, ನೋವು ನಲಿವು ಹಂಚಬೇಕಿತ್ತು;
ನನ್ನನ್ನು ಕಂಡು, ಕಣ್ಣಿನಾರತಿ ಬೆಳಗಿ
ನಿನ್ನಾತ್ಮ ಬೆಳಕನ್ನು ಸುತ್ತ ಚೆಲ್ಲಬೇಕಿತ್ತು;
ನಿನ್ನ ದೂರದಿ ಕಂಡು, ನನ್ನವಳೆಂದು ನಾನರಿತು,
ಈ ಪ್ರಪಂಚವ ಮರೆತು, ನಿನ್ನ ಹಿಂದೆ ಹಿಂದೆ ಬಂದು,
ನನ್ನ ಹೃದಯದ ತುಂಬ ನಿನ್ನ ಆರಾಧಿಸಬೇಕಿತ್ತು;
ಬತ್ತಿದಾತ್ಮಕೆ ನಿನ್ನ ಪ್ರೀತಿಯಮೃತ ಹರಿಸಿ,
ಹೊಸ ಜೀವ, ಹೊಸ ರಾಗ ಚಿಗುರೊಡೆಸಬೇಕಿತ್ತು.

ನೀನೇಕೆ ಬಂದಿಲ್ಲ, ನೀನೆಲ್ಲಿರುವೆಯೆಂಬ ಅರಿವಿಲ್ಲ,
ನೀ ಬರಬೇಕೆಂದಿದ್ದ ದಾರಿ ಭಣಭಣ ಎನ್ನುತ್ತಿದೆ ಇಲ್ಲಿ;
ಬರಬೇಕೆಂದು ಹೋದವಳು ನೀನೆಲ್ಲಿ ದಾರಿ ತಪ್ಪಿರುವೆ?
ಎಲ್ಲಿ ಸೊರಗಿ ಕೊರಗಿ ಪಂಚಭೂತಗಳ ಸೇರಿದೆಯೊ ಎಂದು
ಅಳುಕು ಭಯವು ಒಳಗೆ, ತಿಳಿಯದಂತ ನೋವು;
ಬರುವೆನೆಂಬ ನಿನ್ನ ಛಲ, ನನಗೀಗ ಉಳಿದ ಬಲ,
ನಿನ್ನ ಪ್ರೀತಿ, ಒಲವು, ಛಲ ಎಂದೂ ಸುಳ್ಳಾಗುವುದೆ ಇಲ್ಲ;
ಯಾಕೆ ನೀನು ಬರುವ ಸಂಜ್ಞೆ ಯಾವ ದಿಕ್ಕಿನಲ್ಲೂ ಇಲ್ಲ?
ಯಾಕೆ ಯಾವ ಸುಖದ ಸುಳಿಯು ನನ್ನನೆಚ್ಚರಿಸುತಿಲ್ಲ?

ನನ್ನರಿವಿನ ಪರಿಧಿಯ ಸುತ್ತ ಸುತ್ತಿ ಸುತ್ತಿ ಹುಡುಕಿದ ನಾನು,
ನಿನ್ನ ದಾರಿಯ ಉದ್ದ ಕಣ್ಣು ಪಹರೆಯನಿಟ್ಟ ನಾನು
ನಿನ್ನ ಸುಳಿವಿನ ಹೊರತು ಬೇರೆಲ್ಲ ಆಟ ಕಂಡೆ;
ನೀನೆಲ್ಲಿದ್ದರು ಹಿಂದೆ ಬರಬೇಕಾಗಿರುವ ಜೀವ,
ನಿಶ್ಛಿತ ಪಥವ ತೊರೆದು ಅಂತರಿಕ್ಷದಂಚಿನಲಿ
ಬೆಳಕಿನೊಡನೆ ಓಡಿ ನನಗೆರವಾಗುವೆಯೊ ಏನೋ?
ಶೂನ್ಯತೆಯ ನೋವು, ನೋಡು ಹಬ್ಬುತಿದೆ ಸುತ್ತ,
ಗುರಿತಪ್ಪಿದೆ ನನ್ನ ಬಳಲಿದ ಜೀವ, ಕಪ್ಪು ಕತ್ತಲೆ ಕಣ್ಣೋಡಿಸಿದತ್ತ,
ಎಲ್ಲೋ ನೀನಿದ್ದಿದ್ದರೆ ಅಲ್ಲಿ, ಬೆಳಕು ಕುರುಹು ಇರುತಿತ್ತು.

ನಮ್ಮ ಭೇಟಿಗೆ ನೀನು ತಡ ಮಾಡುವವಳಲ್ಲ,
ನಿನ್ನರಿವು ನಿನ್ನೊಳಿದ್ದರೆ ಈ ರೀತಿ ಬಾರದಿರುವವಳಲ್ಲ;
ಎಲ್ಲೋ ತಪ್ಪಿದೆ ಏನೋ, ವಿಶ್ವ ವ್ಯವಸ್ಥೆಯ ಮಧ್ಯೆ,
ಕಾರ್ಯಕಾರಣದ ಕೊಂಡಿ ಕಡಿದಿದೆ ಎಲ್ಲೋ,
ನಿರ್ಧಾರದ ನಡವಳಿಕೆ ಸಡಿಲಿದೆ ಇಂದು;
ನೀನಿನ್ನು ಬರುವವಳಲ್ಲ, ನಾನು ಕಾಯುವುದು ಸಲ್ಲ,
ವಿಕ್ಷಿಪ್ತ ಚಲನೆಯ ಮಧ್ಯೆ ನಾವು ಕೂಡುವೆವೆಂಬ
ದೂರದಾಶೆಯ ಹೊತ್ತು, ಎಲ್ಲ ವಿಧಿ ಮೇಲಿಟ್ಟು,
ಆತ್ಮ ತೆರೆದಿಟ್ಟು ನಾ ನಿನ್ನ ಕಾಯುವೆನು ಮುಂದೆಂದೂ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success