ಅವ್ಯಕ್ತ ಸೆಳೆತ Poem by PRAVEEN KUMAR Kannada Poems

ಅವ್ಯಕ್ತ ಸೆಳೆತ

ನನಗೆ ನೀನು ಬೇಕೇ ಬೇಕು,
ನನ್ನೊಡನೆ ಬೆರೆಯಬೇಕು,
ನಿನ್ನ ನನ್ನ ಸಾಮರಸ್ಯ
ಪೂಜೆಗೆಂದು ದೇವಿಗಿಟ್ಟ
ಹೂವುಹಣ್ಣು ಗಂಧದಂತೆ,
ಹಾಲುಜೇನು ಪಾಕದಂತೆ,
ಮಾತು ನಡತೆ ಸರಸಮೀರಿ
ಅಮೂರ್ತ ರೂಪ ಪಡೆಯಬೇಕು.

ನಿನ್ನ ಪುಟ್ಟ ಹೆಜ್ಜೆಗಳಲಿ,
ನಿನ್ನ ಕಣ್ಣ ಥಳಕಿನಲ್ಲಿ
ನಿನ್ನ ಆಳ ಕಂಡೆ ನಾನು,
ಎರಡು ಹೆಜ್ಜೆ ಮುಂದೆುಟ್ಟು
ಒಂದು ಹೆಜ್ಜೆ ಹಿಂದೆ ನಡೆವ
ನಿನ್ನ ಸ್ವಂತ ಶೈಲಿಯಲ್ಲಿ,
ನಿನ್ನ ಮಾತು ಛಾಯೆಯಲ್ಲಿ
ನಿನ್ನಾವೇಗ ಕಂಡೆ ನಾನು.

ನೀನು ನಾನು ಎದುರಾದಾಗ
ಅವ್ಯಕ್ತ ಸೆಳೆತ ನಮ್ಮ ಬಿಗಿದು
ತಿಳಿಯದಂತ ದಿವ್ಯ ಶಕ್ತಿ
ನಿನ್ನ ನನ್ನ ಹುರಿದು ಹಿಡಿದು
ಒಳಗೆ ಒಳಗೆ ತುಂಬ ಒಳಗೆ
ನೀನು ನಾನು ಸೇರಿದಂತೆ
ನೀನು ನಾನು ಒಂದಾದಂತೆ
ಏನೋ ತೃಪ್ತಿ, ಸಫಲ ಭಾವ.

ನಿನ್ನ ಕಂಡರೇನೋ ಆಶೆ -
ಕಣ್ಣುತುಂಬ ನೋಡಬೇಕು,
ಬಾುತುಂಬ ನುಡಿಯಬೇಕು,
ತೋಳುತುಂಬ ನಿನ್ನ ಹಿಡಿದು
ಮತ್ತೆ ಮತ್ತೆ ಎದೆಗೆ ಒತ್ತಿ
ಮತ್ತೆ ಎಂದೂ ಅಗಲದಂತೆ
ನೀನು ನಾನು ಬೆಸೆಯಬೇಕು,
ನನ್ನ ನಿನ್ನೊಳಗೆ ಹುಗಿಯಬೇಕು.

ನಿನ್ನ ಆಶೆ ಕನಸು ಬಲ್ಲೆ,
ನಿನ್ನ ನೋವಿನಾಳ ಬಲ್ಲೆ,
ಭಗ್ನ ಕನಸು, ನೋವು ಬೇಗೆ
ತುಡುಕಿ ತುಡುಕಿ ಹಿಂಜುವಾಗ
ನೀನು ಪಡುವ ಪಾಡು ಬಲ್ಲೆ;
ನೀನು ಅಲ್ಲಿ, ನಾನು ಇಲ್ಲಿ,
ನನ್ನ ಕೈ ಚಾಚದಲ್ಲಿ,
ಹೇಗೆ ನಿನ್ನ ಸಂತೈಸಲಿ?

ನನ್ನ ಬದುಕು ಅರಳಲೆಂದು
ನೀನು ನನ್ನ ಬಿಟ್ಟು ಹೋದೆ,
ಬೆಂಕಿಬೇಗೆಯಲ್ಲಿ ನಿಂತೆ;
ನೀನು ಅಗಲಿದಾಗ ನಾನು
ಹೇಗೆ ತಾನೆ ಬದುಕಬಲ್ಲೆ,
ನಿನ್ನ ಬಿಟ್ಟು ನಿಲ್ಲಬಲ್ಲೆ?
ನೋವು ದುಃಖದಿಂದ ನಾನು
ದಿನದಿನ ಕೊರಗುತ್ತಿರುವೆ.

ನಿಂತಲ್ಲಿ ನನಗೆ ನಿನ್ನ ನೆನಪು,
ಕುಳಿತಾಗ ಸದಾ ನಿನ್ನ ಕೊರಗು,
ಊಟ, ನಿದ್ರೆ, ಕೆಲಸವಿರಲಿ,
ಆಟಕೂಟ ವಿರಾಮವಿರಲಿ,
ಒಳಗೆ ಮಾತ್ರ ಸದಾ ನೀನು -
ನಿನ್ನ ನಾಟ್ಯ ಸ್ಪಂಧನ,
ನಿನ್ನ ಬೆಳಕಿನ ಸಿಂಚನ
ಮುಂದೆ ಮುಂದೆ ನಡೆಸಿದೆ.

ಎಷ್ಟು ಕಾಲ ಹೀಗೆ ನಾವು
ದೂರ ನಿಂತು ಕೊರಗಬೇಕು?
ಯಾವ ಶಾಪ ಹೀಗೆ ನಮ್ಮ
ಮಧ್ಯ ನಿಂತು ಬೇರ್ಪಡಿಸಿದೆ?
ನಿನ್ನ ನಾನು ನನ್ನ ನೀನು
ಎಂದಾದರೊಂದು ಪರ್ವದಲ್ಲಿ
ಸೇರಿ ಬೆರೆತು ಬೆಸುಗೆಗೊಳುವ
ಆಶೆಯೊಂದೆ ನನ್ನಾಸರೆ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success