ದೀಪ (ಕಥನ ಕವನ) Poem by PRAVEEN KUMAR Kannada Poems

ದೀಪ (ಕಥನ ಕವನ)

ಇದು ಸಾವಿರ ವರ್ಷದ ಹಿಂದಿನ ಕತೆಯು,
ಕಾಲದ ಪುಟದಲಿ ಮಾಸಿದ ಹಳೆ ನೋವು;
ಕಾಲದ ಪರೆಗಳ ಒಂದೊಂದನೆ ತೆರೆದು,
ಮಾನವ ಕತೆಗಳ ಸಾಗರದೊಳಗಿಳಿದು,
ಸಾವಿರ ವರ್ಷದ ಗಡಿಯನು ದಾಟಲು,
ಎದುರಾಗುವುದೆ ಆ ಬೆಳಕಿನ ರತ್ನ,
ನಾಡಿನ ದೊರೆಯ ಒಬ್ಬಳೆ ಮಗಳು,
ಪ್ರಾಯವೊ ಇಪ್ಪತ್ತರ ಮೇಲೊಂದು,
ರಾಜನ ಕಣ್ಮಣಿ, ದೀಪಯೆಂದು;
ಜಾಣೆ, ಸುಗುಣೆ, ಲಲಿತ ಕಲೆ ನಿಪುಣೆ,
ಸರಳೆ, ಸುಂದರಿ, ಘನ ವಿಮರ್ಶಕ ಬುದ್ಧಿ,
ಮೆಚ್ಚಿದ ಗುಣಕೆ, ಸೋಲುವ ಪ್ರವೃತ್ತಿ.

ಮಂತ್ರಿಯ ಮಗ, ಮನ್ವಂತರನೆಂದು,
ರಾಜ ಕುಮಾರಿಯ ಬಾಲ್ಯದ ಗೆಳೆಯ,
ಆಡಿ, ಕಾದಾಡಿದ, ಸಾನ್ನಿಧ್ಯದ ಪರಿಚಯ,
ಒಬ್ಬರನೊಬ್ಬರು, ಬಲು ಮೆಚ್ಚಿದ ಅರಿವು,
ತಂದಿತು ಅವರಲಿ ಪ್ರೀತಿಯ ಉದಯ;
ರಾಜಕುಮಾರಿ ಪ್ರಾಯಕೆ ಬಂದಳು,
ಅರಮನೆ ತುಂಬ ಬೆಳಕನು ತಂದಳು;
ರಾಜ ರಾಣಿಯ ಕಣ್ಣಿನ ಕಾವಲು,
ಮನ್ವಂತರನನ್ನು ನಿಲ್ಲಿಸಿತು ದೂರ.

ದೂರದ ನಾಡಿನ ದೊರೆಗಳಿಗೆಲ್ಲ,
ರಾಜನು ಬರೆದ ನೆಂಟಸ್ತಿಕೆ ಓಲೆ;
ದೀಪಳ ಚೆಲುವು, ಗುಣ ನೈಪುಣ್ಯದ ಕುರಿತು,
ದೀಪಳ ಮದುವೆಯ ಪ್ರಸ್ತಾಪವ ಬರೆದು,
ಮಗಳಿಗೆ ಗಂಡನ ಆಯ್ಕೆಗೆ ಎಂದು,
ರಾಜಕುಮಾರರ ವಿವರವ ಕೊಡಿಯೆಂದ;
ಉತ್ತರ ಬಂದುವು, ಒಂದರ ಮೇಲೊಂದು,
ಕಳಿಂಗ, ಮಾಳ್ವ, ಚೋಳ, ಚಾಲುಕ್ಯ,
ಮಗಧ, ಮಣಿಪುರ, ಕಾಶ್ಮೀರದ ಅರಸರು,
ದೀಪಳ ಕೈಯ ತಮ್ಮವರಿಗೆ ಬೇಡಿ,
ದೀಪಳ ತಂದೆಗೆ ಬರೆದರು ಪತ್ರ.

ಒಬ್ಬರಿಗಿಂತ ಮಿಗಿಲಾದವರೊಬ್ಬರು,
ದೂರದ ನಾಡಿನ ರಾಜಕುಮಾರರು;
ಸೂರ್ಯಚಂದ್ರರಲ್ಲದಾವ ಆಯ್ಕೆ?
ಆಕಾಶದ ತುಂಬ ಬೆಳಗುವ ನಕ್ಷತ್ರದಿ,
ಒಂದರ ಆಯ್ಕೆ ಸುಲಭವೆ, ಸಾಧ್ಯವೆ?
ರಾಜನು ತಂದ, ಉತ್ತರಗಳ ಚೀಲ,
ದೀಪಳ ಮುಂದೆ ಆಯ್ಕೆಗೆ ಸುರಿದ.

ಸೂರ್ಯನ ಬೆಳಕಿನ ತೀವ್ರತೆ ಮುಂದೆ,
ಮಿಂಚು ಹುಳಗಳಲಾಸಕ್ತಿ ಸಾಧ್ಯವೆ?
ಮನ್ವಂತರನಂತಹ, ತೇಜಸ್ವಿಯ ಮುಂದೆ,
ದೀಪಳ ಕಣ್ಣಿಗೆ, ಪೊಳ್ಳು ಪ್ರತಿಯೊಂದು;
ನಿರಾಸಕ್ತಿಯ ಮಹಾಬೆಟ್ಟವೆ ಆಗಿ,
ಕಣ್ಣೆತ್ತಿ ಬೇರಾರನೂ ನೋಡಳು ದೀಪ;
ದು: ಖದ ಭಾರದಿ ತಗ್ಗಿದ ಸ್ವರದಲಿ,
ಮದುವೆಯೆ ತನಗೆ ಬೇಡವೆಂದು,
ನಿರ್ಧಾರದಿ ತಂದೆಗೆ ತಿಳಿಸಿಯೆ ಬಿಟ್ಟಳು.

ಮನ್ವಂತರ, ಮಂತ್ರಿಯ ಕುಮಾರನಾಗಿ,
ರಾಜಕುಮಾರಿಯ ಸರಿಸಮನಲ್ಲ,
ಇವರಿಬ್ಬರ ಮದುವೆಗೆ, ಪಾವಿತ್ರ್ಯತೆ ಇಲ್ಲ,
ಪ್ರಜೆ ಸೇನೆಯಲಿ ಮನ್ನಣೆ ಇಲ್ಲ;
ಮನ್ವಂತರ ತನಗೆ, ಹಗಲುಗನಸೆಂದು,
ಮನ್ವಂತರನಿಲ್ಲದೆ ಬದುಕಲೇಕೆಂದು
ರಾಜಕುಮಾರಿ ಕಣ್ಣೀರಿಟ್ಟಳು.

ರಾಜರಾಣಿ, ಕಳಿಂಗ ಕುಮಾರನ,
ಮಗಳಿಗೆಯೆಂದು, ನಿರ್ಧರಿಸಿಯೆ ಬಿಟ್ಟರು;
ಮದುವೆಯ ಸನ್ನಹ, ಗಡಿಬಡಿಯಲ್ಲಿ,
ದೀಪಳ ಎಲ್ಲರು ಮರೆತೆ ಬಿಟ್ಟರು;
ಮದುವೆಯ ದಿನ ಬಳಿ ಬರುತ್ತಿರುವಂತೆ,
ದೀಪಳ ದುಗುಡ ಮೇಲೇರುತಿತ್ತು;
ಮದುವೆಯ ಬಳಿಕ, ಕಳಿಂಗ ನಾಡಲಿ,
ಮನ್ವಂತರನನ್ನು ಬಿಟ್ಟಿರಬೇಕು,
ಎನ್ನುವ ದು: ಖದಿ, ನಿರ್ಧಾರವ ತಳೆದಳು.
ಮದುವೆಯ ದಿನವದು, ಸಂಭ್ರಮವು ಎಲ್ಲೆಡೆ,
ಪ್ರಜೆಗಳಿಗಂತೂ, ತಲೆಮಾರಿನ ಹಿರ ಹಬ್ಬ;
ಬೀದಿ ಬೀದಿಗೆ, ತಳಿರು ತೋರಣ,
ಕೊಡುಗೈ ರಾಜನ, ಔದಾರ್ಯದ ದಾನ;
ಅರಮನೆಯಂತೂ, ಅಮರಾವತಿಯಂತೆ,
ಕಣ್ಣಿಗೆ, ಮನಸಿಗೆ, ಹಿತ ಕೊಡುತ್ತಿತ್ತು.

ರಾಣಿಯು ಬಂದಳು, ರಾಜನ ಹುಡುಕುತ,
ರಾಜನ ಸಂಭ್ರಮ, ಓಡಾಟವ ಕಂಡು,
ಮನದಲಿ ಮಮ್ಮಲ ಮರುಗುತ ನಿಂತಳು;
ಮುಂದಕೆ ಬರಲು, ಧೈರ್ಯವು ಸಾಲದೆ,
ಸೆರಗಿನ ಮರೆಯಲಿ, ಕಣ್ಣೇರಿಟ್ಟಳು;
ರಾಣಿಯ ಕಂಡು, ರಾಜನು ನಡುಗಿದ,
ಸಂಭ್ರಮದಲ್ಲಿದು, ಬಂತೇನೆಂದು,
ರಾಣಿಯ ಸಮೀಪಿಸಿ, ವಿಷಯವೇನೆಂದ.

ರಾಣಿಯು ರಾಜನ ಕಿವಿಯಲಿ ದು: ಖದಿ,
ದೀಪಳ ಸ್ಥಿತಿಯನು ತಿಳಿಸಿಯೆ ಬಿಟ್ಟಳು;
ಮುದ್ದಿನ ಮಗಳು, ಎದ್ದೇಳಲೆ ಇಲ್ಲ,
ತಣ್ಣಗೆ ದೇಹ, ನಿಂತಿದೆ ಉಸಿರು,
ಮುಖದಲಿ ಸಾವಿನ ಕಳೆುದೆಯೆಂದಳು;
ರಾಜನು ವೈದ್ಯರ ಜೊತೆಯಲಿ ಹೋಗಿ,
ಮುದ್ದಿನ ಮಗಳನು ನೋಡುತ ನಿಂತ;
ವಿಷ ಪ್ರಾಶನದಿ, ಬಂದಿದೆ ಸಾವು,
ಎಂದನು ಮರುಗುತ ರಾಜವೈದ್ಯ.

ಮದುವೆಯ ಮನೆಯು, ಮಸಣವಾುತು,
ಸಡಗರ ಸಂಭ್ರಮ, ದು: ಖಕೆ ತಿರುಗಿತು,
ಊರಿಗೆ ಊರೇ, ಕಣ್ಣೀರಿಟ್ಟಿತು;
ಮಗಳಿಗದಾವ ಕೊರತೆಯು ಬಂತು,
ಆದಾವುದಕೆಂದು, ತಮ್ಮನು ತೊರೆದಳು,
ಮದುವೆಯ ದಿನದಲೆ, ದೂರಕೆ ಹೋದಳು,
ತಿಳಿಯದೆ ರಾಜರಾಣಿಯು ನೊಂದರು;
ಮಗಳಿನ ಮನಸಿನ ಗರ್ಭಗುಡಿಯಲಿ,
ಬೆಳಗುವ ನಂದಾದೀಪವನರಿಯದೆ,
ದ್ವಾರಕೆ ಚಿನ್ನದ ಬಾಗಿಲು ಝಡಿದು,
ತಂದೆತಾಯಿಯೆ ಕತ್ತಲೆ ತಂದರು;
ದೀಪವು ನಂದಿತು, ಇರುಳಾವರಿಸಿತು,
ದೀಪ, ಇನ್ನೆಂದಿಗೂ ಬೆಳಗದಂತಾಯಿತು.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success