ಅಂದು-ಇಂದು Poem by PRAVEEN KUMAR Kannada Poems

ಅಂದು-ಇಂದು

ದಶಮಾನಗಳ ಕಾಲಕಣಿವೆಯ ಇಬ್ಬದಿಯಲ್ಲಿ
ಮೇಲೇರಿ ನಿಂತಿದೆ ಕಾಲವೈಖರಿಯ ಅಂದು-ಇಂದು,
ಸ್ಫಟಿಕ ಹೊಳಪಿನ ಜೀವಂತಸ್ಥಿತ್ವ ಸತ್ವಗಳ ಮಧ್ಯೆ
ಹರಿುತು ನೆನಪು ಕಣ್ಣೀರುಗಳನವರತ ಧಾರೆ,
ಕಾಲಕಣಿವೆಯ ಹಾರಿ ಅಂದಿನಾಲೋಕ ಸೇರುವಾಸೆ,
ನೆನಪು ಕಣ್ಣೀರುಗಳ ಮೆಟ್ಟಿ ಅಂದಿನಾಲೋಕ ಸೇರುವಾಸೆ,
ಕಳಚಿ ಬಿದ್ದವಶೇಷಗಳ ಮೇಲೆತ್ತಿ ನಿಲಿಸಿ
ಅಂದಿನಾ ಸಾಮ್ರಾಜ್ಯದಲಿ ನಾನು ಬದುಕಬೇಕು.

ಅಂದಿನ ಬೆಳಕಿನಿಂದೆದ್ದ ನೆನಪಿನ ನೆರಳುಗಳು ಇಂದು
ಅಂದಿನಾ ದೌಲತ್ತುಗಳ ಚಿತ್ತರ ಬಿಡಿಸಿ ಹೇಳುತ್ತಿವೆ,
ಅಬ್ಬರದುಬ್ಬರ ಮತ್ತು ಎದೆಗುಂದಿಸಿದವಸಾನ
ಕಾಲಕೊಲ್ಲಿಯ ಹಾರಿ ಸಂವೇದನೆ ರೂಪ ತಾಳುತ್ತಿವೆ,
ಕಾಲದಂತರ ಮರೆತು, ಅಂದುಯಿಂದುಗಳ ಬೆಸೆದು,
ಕಾಲಗರ್ಭಕ್ಕಿಳಿದ ಜೀವಂತಸ್ಥಿತ್ವಗಳ ಹೊರ ತೆಗೆದು.
ಕಳಚಿ ಬಿದ್ದವಶೇಷಗಳ ಮೇಲೆತ್ತಿ ನಿಲಿಸಿ
ಅಂದಿನಾ ಸಾಮ್ರಾಜ್ಯದಲಿ ನಾನು ಬದುಕಬೇಕು.

ಅಂದಿನದು ಅಂದಿಗಿತ್ತು, ಇಂದಿನದು ಇಂದಿಗಿದೆ,
ಅಂದುಯಿಂದುಗಳೆಂದೂ ಮತ್ತೆ ಕೂಡುವುದೆ ಇಲ್ಲ,
ಅಂದುಯಿಂದಿನ ಮಧ್ಯೆ ಕಾಲ ಚೆಲ್ಲಿದ ದೂರ
ಅನುಲ್ಲಂಘನೀಯ, ಅನಂತ, ಅಪಾರ, ಅಭೇಧ್ಯ,
ನೆನಪು ನೂಲೇಣಿಯಲೆಷ್ಟು ಕಾಲ ಕ್ರಮಿಸಿದರೇನು ಫಲ,
ಇಂದು ಅಂದಾಗದು, ಅಂದು ಇಂದಾಗದು,
ಆದರೂ ಕಳಚಿ ಬಿದ್ದವಶೇಷಗಳ ಮೇಲೆತ್ತಿ ನಿಲಿಸಿ,
ಅಂದಿನಾ ಸಾಮ್ರಾಜ್ಯದಲಿ ನಾನು ಬದುಕಬೇಕು.

Wednesday, July 12, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success