ಬಿಡಿಸಲಾಗದ ಒಗಟು Poem by Deepak Malapur

ಬಿಡಿಸಲಾಗದ ಒಗಟು

ಮೊನ್ನೆ ನಮ್ಮ ಅಜ್ಜಿಯನ್ನು ಮೆಜೆಸ್ಟಿಕ್ ರೈಲ್ವೆ ಸ್ಟೇಶನ್ ನಿಂದ ಕಲ್ಯಾಣ ನಗರದಲ್ಲಿರೊ ನಮ್ಮ ಮನೆಗೆ ಕರೆದುಕೊಂಡು ಹೊರಟಿದ್ದೆ. ಒಬ್ಬನೇ ಬಸ್ ಹತ್ತಿ ಹತ್ತಿಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಊರಿಗೆ ಹೋಗುವುದಕ್ಕೇ ಹೆದರುತ್ತಿದ್ದ ನಾನು ಇಂಥ ದೊಡ್ಡ ನಗರದಲ್ಲಿ, ಇರುವೆಗಳ ಸಾಲಿನಂತೆ ಎಡೆಬಿಡದೇ ಹರಿದಾಡುವ ಟ್ರಾಫಿಕ್ ಮಧ್ಯೆ ಒಮ್ಮೆ ಸ್ವಲ್ಪ ಜೋರಾಗಿ, ಇನ್ನೊಮ್ಮೆ ಆಮೆಯ ವೇಗದಲ್ಲಿ ಕಾರು ಓಡಿಸುವುದನ್ನು ನೋಡಿ ಅಜ್ಜಿ ಬೆಕ್ಕಸ ಬೆರಗಾಗಿದ್ದಳು. ಯಾವುದೋ ಸಿಗ್ನಲ್ ನಲ್ಲಿ ಕಾರು ನಿಲ್ಲಿಸಿದ್ದೆ. ಅಜ್ಜಿಯೊಂದಿಗೆ ಊರಿನ ಸುದ್ದಿಗಳು, ಜನರ ಬಗ್ಗೆ ಕೇಳುತ್ತಿದ್ದೆ. ನಮ್ಮ ಕಾರಿನ ಮುಂದೆ ಬಿಳಿ ಟಯೋಟಾ ಫರ್ಚುನರ್ ನಿಂತಿತ್ತು. ಅದರ ಡ್ರೈವರ್ ಕೈ ಕಿಟಕಿಂದ ಹೊರಚಾಚಿಕೊಂಡು ಕುಳಿತಿದ್ದನೋ ಏನೋ, ಅದನ್ನು ನೋಡಿದ ಅಜ್ಜಿ ಆ ಹುಡುಗನಿಗೆ ಏನಾಗಿದೆ ನೋಡೋ, ಕೈ ಹೊರಗೆ ಬಿದ್ದಿದೆ ಎಂದು ಕೂಗಾಡ ಹತ್ತಿದಳು. ಅವನ ಕೈ ತಕ್ಷಣ ಗಾಡಿಯೊಳಗೆ ಹೋಗಿ ಮತ್ತೆ ಮುಂಚಿನ ಸ್ಥಿತಿಗೆ ಬಂತು. ಅವನ ಕೈಲಿ ಸಿಗರೇಟಿತ್ತು. ಅವನು ಸಿಗರೇಟು ಸೇದುತ್ತ ಗಾಡಿ ಹೊಡೆಯುತ್ತಿದ್ದಾನೆ ಅಷ್ಟೆ ಎಂದು ಸಮಾಧಾನ ಪಡಿಸಿದೆ. ಅದಕ್ಕೆ ಅಜ್ಜಿ, 'ನಮ್ಮೂರಾಗಾದ್ರೆ ಕೈ, ತಲೆ ಹೊರಗೆ ಹಾಕಿ ಕುಳಿತುಕೊಳ್ಬೇಡಿ ಅನ್ತಾರೆ. ಇಲ್ಲಿ ಹಿಂಗ್ಯಾಕೆ? ಇವರೆಲ್ಲ ಇಷ್ಟೊಂದು ಓದಿರ್ತಾರಲ್ಲ, ಇಷ್ಟು ಚಿಕ್ಕ ವಿಷಯ ತಿಳಿಯೋದಿಲ್ವೆ? ' ಎಂದು ಪ್ರಶ್ನಿಸಿದಾಗ, ಉತ್ತರ ನೀಡಬೇಕೆಂದರೆ ಕನ್ನಡದ ಕೋಟ್ಯಾಧಿಪತಿಯಲ್ಲಿ ನೀಡುವಂತೆ ಅಜ್ಜಿ ಯಾವುದೇ ಆಪ್ಶನ್ ನೀಡಲಿಲ್ಲ. ಆಪ್ಶನ್ ಗಳಿದ್ದರೂ ನಾನು ಉತ್ತರ ನೀಡುವುದು ಸಾಧ್ಯವಿರಲಿಲ್ಲ. ಅಜ್ಜಿ ಒಂದನೆಯ ತರಗತಿಯಲ್ಲಿದ್ದಾಗ ಮೇಷ್ಟ್ರು ಬೈದರೆಂದು ಅಳುತ್ತ ಮನೆಗೆ ಹೋಗಲು, ನಮಗೇನು ಕಮ್ಮಿ, ಅವಳ್ಯಾಕೆ ಓದಬೇಕು ಎಂದು ಅವಳಪ್ಪ ಶಾಲೆ ಬಿಡಿಸಿದ್ದರಂತೆ. ಆದರೂ ಅಜ್ಜಿಯ ಬುದ್ಧಿವಂತಿಕೆ, ತಿಳುವಳಿಕೆ ಓದಿ ಓದಿ ಇನ್ನೂ ಓದುತ್ತಿರುವವರಿಗಿಂತ ಎಷ್ಟೋ ಪಟ್ಟು ಉತ್ತಮವಾಗಿದೆ ಅನ್ನಿಸಿತು. ಆಮೇಲೆ ಇನ್ನೊಂದು ವಿಚಾರ ಹೀಗೆ ಬಂದು ಹಾಗೆ ಹೋಯ್ತು - 'ನಾವು ಬಿಳಿ ಹಾಳೆಗಳ ಮೇಲೆ ಹರಡಿಕೊಂಡ ಕಪ್ಪು ಅಕ್ಷರಗಳ ಚೌಕಟ್ಟಿನೊಳಗೆ ಕಲಿತದ್ದೇ ಜೀವನ ಅಂದುಕೊಂಡವರು, ಒಂಥರಾ ಬಾವಿಯೊಳಗಿನ ಕಪ್ಪೆಯಂತೆ. ಆದರೆ ಅಜ್ಜಿಯ ಪ್ರಾಪಂಚಿಕ ಅನುಭವ ಸಮುದ್ರದಷ್ಟೇ ವಿಶಾಲ ಮತ್ತು ಅಷ್ಟೇ ವಾಸ್ತವಿಕ ಕೂಡ'.
ಮನೆ ಇನ್ನೂ ದೂರವಿತ್ತು. ಮತ್ತೊಂದು ಸಿಗ್ನ ಬಂತು. ಬ್ರೇಕ್ ಹಾಕುವ ಸ್ವಲ್ಪ ಮುಂಚೆ ಒಂದು ನಾಲ್ಕಡಿಯಷ್ಟು ಉದ್ದ, ನನ್ನ ಪುಟ್ಟ ಕಾರಿನ ಗಾಲಿಯನ್ನು ಅರ್ಧದಷ್ಟು ನುಂಗುವಷ್ಟು ಆಳದ ತಗ್ಗು ಬಂತು. ಉಳಿದ ವಾಹನಗಳಿಗೆ ಮುಂದೆ ಹೋಗಲು ಅವಕಾಶ ಮಾಡಲೆಂದು ನಾನು ಅಲ್ಲೇ ನಿಂತುಕೊಂಡೆ. ಅಷ್ಟರಲ್ಲಿ ಹಿಂದೆ ನಿಂತಿದ್ದ ಕೆಲವು ವಾಹನಗಳ ಹಾರ್ನು ಬಡಿದುಕೊಳ್ಳಲು ಶುರುವಾಯ್ತು. 'ಅದೇನೋ ಕತ್ತೆ ಥರಾ ಬಡ್ಕಂತವೆ? ಸ್ವಲ್ಪ ತಾಳ್ಮೇನೂ ಇಲ್ಲ' ಎಂದು ಅಜ್ಜಿ ಮತ್ತೆ ಕೂಗಾಡ ಹತ್ತಿದಳು. ನಾನು ನಿಧಾನವಾಗಿ ಕಾರು ತಿರುಗಿಸಿಕೊಂಡು ಮುಂದೆ ಬರಬೇಕೆನ್ನುವಷ್ಟರಲ್ಲಿ, ಬಲಗಡೆಯ ಮುಂದಿನ ಚಕ್ರ ತಗ್ಗಿನಲ್ಲಿ ಹೋಯ್ತು. ಕಾರು ಪಾತಾಳಕ್ಕೇ ಇಳಿಯಿತೇನೋ ಎಂಬ ಭಾವನೆ ಅಜ್ಜಿಯ ಮುಖದಲ್ಲಿ ಸ್ಪಷ್ಟವಾಗಿತ್ತು. ಇಷ್ಟು ಹಿಂಸೆ ಸಾಲದೆಂಬಂತೆ, ನಮ್ಮ ಪಕ್ಕಕ್ಕೆ ಹಾದು ಹೋಗುತ್ತಿದ್ದ ಟ್ಯಾಕ್ಸಿಯವನು 'ಏನಲೇ, ಕಾರ್ ಓಡಿಸ್ತಿದ್ದೀಯಾ, ಬಂಡಿ ಓಡಿಸ್ತಿದ್ದೀಯಾ, ಥು! ' ಎಂದು ಮಂಗಳಾರತಿ ಎತ್ತಿ ಬಿರುಗಾಳಿಯಂತೆ ಮುನ್ನುಗಿದ. ಅಜ್ಜಿಯ ತಲೆ ಕುಕ್ಕರ್ ಹಾಗೆ ಬಿಸಿಯೇರಲು ಶುರುವಾಗಿತ್ತು. ನಾನು ಹಾಗೋ ಹೀಗೋ ಕಷ್ಟಪಟ್ಟು ತಗ್ಗಿನಿಂದ ಕಾರನ್ನು ಹೊರತಂದು, ಸಿಗ್ನಲ್ ವರೆಗೆ ಬಂದು ಕಾರು ನಿಲ್ಲಿಸಿದೆ. 'ಅಲ್ಲಾ ಕಣಪ್ಪಾ, ಇದು ಪಟ್ಟಣವೇ, ಇಲ್ಲ ಯಾವುದಾದರೂ ಹಳ್ಳಿಯೇ? ಅಲ್ಲ, ಮೊದಲೇ ಪುಟ್ಟ ಕಾರು, ಆ ತಗ್ಗು ಒಳ್ಳೆ ರಾಕ್ಷಸನ ಬಾಯಿಯಂತೆ ತೆರೆದುಕೊಂಡೈತೆ. ನಿನ್ನ ಕಾರನ್ನೇ ನುಂಗಿ ಹಾಕ್ತಿತ್ತಲ್ಲ. ಇನ್ನು ಆ ಗಾಡಿಯೋನು. ಅದೇನು ಭಾಷೆ ಅಂತಾ. ನಿನ್ನ ಗಾಡಿ ತಗ್ಗಿನಿಂದಾಚೆ ಬರುವವರೆಗೆ ಕಾಯೋದು ಬೇಡ್ವೆ? ಬಾಯಿಗೆ ಬಂದಂಗೆ ಬೊಗಳಿ ಹೋಯ್ತು ಮೂದೇವಿ' ಎಂದು ಕೊನೆಗೂ ಕುಕ್ಕರ್ ಸೀಟಿ ಹಾಕಿತು. 'ಇಲ್ಲಿ ಹಂಗೆ ಅಜ್ಜಿ. ಯಾರ ಹತ್ರಾನೂ ಟೈಮ್ ಇರಲ್ಲ. ಎಲ್ಲರೂ ಬೇಗ ಬೇಗ ಹೋಗ್ಬೇಕು ಅಂತಾ ಹಾಗೆ ಮಾಡ್ತಾರೆ' ಎಂದು ಅಜ್ಜಿಯನ್ನ ತಣ್ಣಗಾಗಿಸಲು ನೋಡಿದೆ. 'ಬೇಗ ಬೇಗ, ಎಲ್ಲಿ ಶಿವನ ಪಾದಕ್ಕಾ? ' ಎಂದು ಅಜ್ಜಿ ಮತ್ತೊಂದು ಕಿಡಿ ಕಾರಿದಳು. ನಾನು ಮುಂದೆ ಮಾತನಾಡಲು ಹೋಗಲಿಲ್ಲ. ಹಸಿರು ಸಿಗ್ನಲ್ ಬಿದ್ದಿತ್ತು. ಕಾರು ಮತ್ತೆ ಹೊರಟಿತು.
ಅಜ್ಜಿ ಇದೇ ಮೊದಲ ಬಾರಿ ಪಟ್ಟಣಕ್ಕೆ ಬಂದಿದ್ದರೆಂದಲ್ಲ. ಆದರೆ, ಅವರು ಮೂವತ್ತು ವರ್ಷ ಮುಂಚೆ ನೋಡಿದ್ದ ನಗರಕ್ಕೂ, ಈಗಿರುವ ನಗರಕ್ಕೂ ಅಜಗಜಾಂತರ ವ್ಯತ್ಯಾಸ. ಇದೆಲ್ಲ ಯಾಕೆ ಹೀಗೆ? ಎಂಬ ಅಜ್ಜಿಯ ಪ್ರಶ್ನೆಗೆ 'ಅದು ಹಾಗೇ' ಎಂದು ಪೆಚ್ಚು ಪೆಚ್ಚಾಗಿ ಉತ್ತರಿಸುವಾಗ, ನಾನೆಷ್ಟು ಮೂರ್ಖ ಎಂದು ಅಜ್ಜಿ ಅಂದುಕೊಳ್ಳುತ್ತಿರಬಹುದೆಂದು ಅನ್ನಿಸದಿರಲಿಲ್ಲ. ಇನ್ನೊಂದು ಸಿಗ್ನಲ್ ಬಂತು. ಕಾರು ಮತ್ತೆ ನಿಂತುಕೊಂಡಿತು. ಅಜ್ಜಿಯನ್ನು ಊರಲ್ಲಿ ಎಲ್ಲರೂ ಹ್ಯಾಗಿದ್ದಾರೆ ಅಂತಾ ಕೇಳುವ ಧೈರ್ಯ ನನಗಾಗಲಿಲ್ಲ. ಏಕೆಂದರೆ ಇನ್ನೊಂದು ಪ್ರಶ್ನೆಯ ಬಾಂಬು ಸಿಡಿಸಲು ಅಜ್ಜಿ ಸಿದ್ಧವಾಗಿದ್ದು ನನಗೆ ಅರಿವಾಗಿತ್ತು. 'ದೀಪು, ನಾವು ರೈಲ್ವೆ ಟೇಶನ್ ಬಿಟ್ಟು ಒಂದು ಗಂಟೆ ಮೇಲಾಯ್ತಲ್ಲ. ಮನೆ ಕಾಣೋದು ಬೇಡ, ಅದಿರುವ ಜಾಗಕ್ಕಾದರೂ ಹತ್ತಿರದಲ್ಲಿದ್ದೀವೇನೋ? ಏನೋಪಾ, ಅದೇನು ನಗರವೋ ಏನೋ. ಅಲ್ಲಾ ಈ ವಾಹನಗಳ ದಟ್ಟ ಪ್ರವಾಹದಲ್ಲಿ ಸಿಕ್ಕಂಡು, ಒಂದಕ್ಕೆ ಎರಡಕ್ಕೆ ಒತ್ತರಿಸಿ ಬಂದ್ರೆ ಗತಿಯೇನೋ? ' ಎಂದು ಅಜ್ಜಿ ಕೇಳಿದಾಗ, ಅಜ್ಜಿ ಮಾತಲ್ಲಿ ಪಾಯಿಂಟ್ ಇದೆ ಅನ್ನಿಸಿತು. ಜೊತೆಗೆ ಮುಳ್ಳಿನಷ್ಟು ಮೊನಚಾಗಿದ್ದರೂ, ಅವಳ ಕಳವಳಭರಿತ ಪ್ರಶ್ನೆಗಳೆಲ್ಲ ನಿಜವೇ ತಾನೇ ಅನ್ನಿಸುತ್ತಿತ್ತು. ನಾನು ಸುಮ್ಮನೇ ಮುಗುಳ್ನಗೆ ಬೀರಿ, ಸಿಗ್ನಲ್ ನತ್ತ ನೋಡುತ್ತ ಕುಳಿತೆ. ಇನ್ನೂ ಹಸಿರು ದೀಪ ಬರಲು ನಲವತ್ತು ಸೆಕೆಂಡುಗಳಿದ್ದವು. ಬೈಕ್ ಸವಾರನೊಬ್ಬ ಹಾಗೆಯೇ ಮುಂದೆ ಹೋದ. ಕಣ್ಮುಚ್ಚಿ ಕಣ್ಣು ತೆಗೆಯುವುದರಲ್ಲಿ, ಅವನ ಬೈಕ್ ಈ ಫುಟ್ ಪಾತ್ ಬಳಿ ಅವನು ಆ ಫುಟ್ ಪಾತ್ ಬಳಿ ಬಿದ್ದಿದ್ದ. ಇನ್ನು ಸಿಗ್ನಲ್ ಬಿದ್ದರೂ ಯಾರೂ ಹೋಗುವುದಿಲ್ಲ ಎಂದು ನನಗೆ ಗೊತ್ತಿತ್ತು. ಯಾಕಂದ್ರೆ ಆಕ್ಸಿಡೆಂಟ್ ಆದವನನ್ನು, ಆಕ್ಸಿಡೆಂಟ್ ಮಾಡಿದವನನ್ನು ವಿಚಾರಿಸುವುದು ಬೇಡವೇ? ನಾನು ಅಜ್ಜಿಯನ್ನು ಒಬ್ಬಳೇ ಬಿಟ್ಟು ಹೋಗಬಾರದೆಂದು ಕಾರಿನೊಳಗೇ ಕುಳಿತಿದ್ದೆ. ಆದರೂ ಅಜ್ಜಿ ಮತ್ತೆ ಪ್ರಶ್ನೆ ಕೇಳಿದರೆ? ಎಂದು ಹೆದರಿ ಕಾರಿನಿಂದಿಳಿದು ಆಕ್ಸಿಡೆಂಟ್ ಆಗಿದ್ದ ಸ್ಥಳಕ್ಕೆ ಹೋದೆ. ಬೈಕ್ ಸವಾರ ಸಿಗ್ನಲ್ ಜಂಪ್ ಮಾಡಿದ್ದು ತಪ್ಪಾದರೂ, ಜನರೆಲ್ಲ ಬಯ್ಯುತ್ತಿದ್ದುದು ಟ್ಯಾಕ್ಸಿಯವನನ್ನು. ನನಗೆ ಏನು ಮಾಡಬೇಕೆಂದು ತಿಳಿಯದೇ ನಿಂತಾಗ, ಆ ಟ್ಯಾಕ್ಸಿಯವನನ್ನು ಬಯ್ಯುತ್ತಿದ್ದವರಲ್ಲಿ ಸ್ವಲ್ಪ ನಗೆಯ ಅಲೆ ಎದ್ದಿತು. ಅಲ್ಲದೇ, ಆ ಟ್ಯಾಕ್ಸಿಯವನು ಕೈಮುಗಿದು ತಪ್ಪಾಯ್ತು ಎಂದು ಕೇಳುತ್ತಿದ್ದವನಂತೆ ಕಂಡ. ಜನರೆಲ್ಲ ತಮ್ಮ ತಮ್ಮ ವಾಹನಗಳಿಗೆ ಮರಳಿದಾಗ, ಟ್ಯಾಕ್ಸಿ ಡ್ರೈವರ್ ನಿಗೆ ಬುದ್ಧಿ ಹೇಳುತ್ತಿದ್ದವರು ಒಬ್ಬ ಹಿರಿಯ ಮಹಿಳೆಯೆಂದು ಗೊತ್ತಾಯ್ತು. ಅವರು ತಿರುಗಿ, ನನ್ನ ಬಳಿಯೇ ಬರಹತ್ತಿದರು. ಅದು ನನ್ನ ಅಜ್ಜಿ! ಅಜ್ಜಿ ಹಳ್ಳಿಯಲ್ಲಿ ಮಾಡುವಂತೆ ಇಲ್ಲಿಯೂ ಜಗಳ ಬಿಡಿಸಿ, ಬುದ್ಧಿ ಹೇಳಿ ಬರುತ್ತಿದ್ದಳು.
ಕಾರಿನೊಳಗೆ ಕುಳಿತುಕೊಳ್ಳುತ್ತ 'ಒಂದೆರಡು ಒಳ್ಳೆ ಮಾತು ಹೇಳಿದರೆ ಆಯ್ತು. ಸುಮ್ಮನೇ ತಮ್ಮ ವೈಯಕ್ತಿಕ ಸಿಟ್ಟು ತಂದು ಸಿಕ್ಕ ಸಿಕ್ಕವರ ಮೇಲೆ ತಂದು ಸುರಿದರೆ ಏನು ಬಂತು? ನೋಡ್ದಾ, ಜಗಳ ಹ್ಯಾಗೆ ಬಗೆ ಹರೀತು ಅಂತಾ? ' ಎಂದು ಅಜ್ಜಿ ನನ್ನನ್ನು ನೋಡಿ, ಮುಗುಳ್ನಗೆ ಬೀರಿದಳು. ಅಣೆಕಟ್ಟೆಯ ಬಾಗಿಲು ತೆರೆದಾಗ ಹರಿಯುವ ನೀರಿನಂತೆ ಟ್ರಾಫಿಕ್ ಮತ್ತೆ ಚಲಿಸತೊಡಗಿತು. ಮನೆ ಇನ್ನೇನು ದೂರವಿರಲಿಲ್ಲ. ಟ್ರಾಫಿಕ್ ಜಾಮ್ ಆಯ್ತು. ಅಜ್ಜಿಯದ ಹಂಚಿನ ಮೇಲೆ ಇನ್ನೂ ತುಸು ಪ್ರಶ್ನೆಗಳ ಚಪಾತಿಗಳು ಬೇಯಿತ್ತಿದ್ದವು. ಆದರೂ ಅಜ್ಜಿ ಮೌನವಾಗಿ ಕುಳಿತುಕೊಂಡಿದ್ದಳು. ಅದೇ ಸಮಯಕ್ಕೆ ಸರಿಯಾಗಿ ಬೈಕ್ ಸವಾರನೊಬ್ಬ ನಮ್ಮ ಕಾರ್ ಪಕ್ಕದಲ್ಲಿ ಬಂದು ನಿಂತುಕೊಂಡು, ಮಾತನಾಡುತ್ತಿದ್ದ, ನಗುತ್ತಿದ್ದ. ಅಜ್ಜಿ ಅವನನ್ನು ನೋಡಿದ್ದೇ ತಡ ಕೊಳ್ಳೆಂದು ನಗ ಹತ್ತಿದಳು. 'ನೋಡ್ದಾ ದೀಪು? ... ಅವನು, ತನ್ನಷ್ಟಕ್ಕೆ ತಾನೇ ಮಾತಾಡ್ತಿದ್ದಾನೆ, ನಗ್ತಿದ್ದಾನೆ. ಹುಚ್ಚ! ' ಎಂದು ನಕ್ಕಿದ್ದೇ ನಕ್ಕಿದ್ದು. ಆ ವ್ಯಕ್ತಿ ಹೆಲ್ಮೆಟ್ ಒಳಗೆ ಮೊಬೈಲ್ ಫೋನು ತೂರಿಸಿಕೊಂಡು ಮಾತನಾಡುತ್ತಿದ್ದುದು ಅಜ್ಜಿಗೆ ಗೊತ್ತಿರಲಿಲ್ಲ. ನನಗಿದೆಲ್ಲ ಹೊಸದಲ್ಲ. ದಿನಾ ಹೆಲ್ಮೆಟ್ ಒಳಗೆ ಮೊಬೈಲ್ ತೂರಿಸಿಕೊಂಡು ಮಾತಾಡೋರು, ಲಕ್ವಾ ಹೊಡೆದವರಂತೆ ಕುತ್ತಿಗೆ ಮತ್ತು ಭುಜದ ನಡುವೆ ಮೊಬೈಲ್ ಸಿಕ್ಕಿಸಿಕೊಂಡು ಮಾತಾಡುತ್ತ ಹೋಗೋರನ್ನ ನೋಡಿ ನೋಡಿ ಅಭ್ಯಾಸವಾಗಿತ್ತಾದರೂ, ಅಜ್ಜಿ ನಗೋದನ್ನ ನೋಡಿ ನನಗೂ ನಗೆ ತಡೆಯಲಾಗಲಿಲ್ಲ. ಕೊನೆಗೂ ಅಜ್ಜಿಯ ಕೋಪ ಕರಗಿತಲ್ಲ ಎಂದು ಸಮಾಧಾನವಾಯ್ತು. ನಗುನಗುತ್ತಲೇ ಮನೆಗೆ ತಲುಪಿದೆವು.
ಉತ್ತರ ಸಿಗದೇ ದಾರಿತಪ್ಪಿದ್ದ ಅಜ್ಜಿಯ ಪ್ರಶ್ನೆಗಳು ಅಲ್ಲೇ ಟ್ರಾಫಿಕ್ ನಲ್ಲಿ ಪೆಚ್ಚಾಗಿ ನಿಂತುಕೊಂಡಿರಬೇಕಲ್ಲ ಅನ್ನಿಸಿತು. ಅಜ್ಜಿ ವ್ಯಕ್ತಪಡಿಸಿದ ಕಳವಳಗಳೆಲ್ಲ ಅರ್ಥವುಳ್ಳವಾದರೂ, ಅವುಗಳಿಗೆ ಪರಿಹಾರ ಸಿಗುವುದು, ಅಸಾಧ್ಯವಲ್ಲದಿದ್ದರೂ ಸದ್ಯಕ್ಕಂತೂ ಸಿಗುವುದಿಲ್ಲ ಎಂದೆನಿಸಿತು. ಅಜ್ಜಿ ಮನೆಯೊಳಗೆ ಹೋದಳು. ನಾನು ಹಿಂದೆ ಎದುರಾದ ತಪ್ಪುಗಳು, ನ್ಯೂನತೆಗಳು ಎಂಬ ಇಲಿಗಳು ಕೊರೆದಿದ್ದ ಬಿಲವನ್ನು ಹುಸಿ ಸಮಾಧಾನದ ಸಿಮೆಂಟಿನಿಂದ ಮುಚ್ಚಿ, ಕಾರಿನಿಂದ ಅಜ್ಜಿಯ ಲಗೇಜು ತೆಗೆದುಕೊಂಡು ಮನೆಯೊಳಗೆ ನಡೆದೆ. ಆದರೆ, ಸಿಮೆಂಟಿನಿಂದ ಮುಚ್ಚಿದ ಬಿಲದೊಳಗೆ ಇನ್ನೂ ಜೀವಂತವಿರುವ ಆ ಇಲಿಗಳು 'ಚಿಂವ್, ಚಿಂವ್' ಎಂದು ಶಬ್ದ ಮಾಡುತ್ತ, ತಮ್ಮ ಉಗುರುಗಳಿಂದ ಗೋಡೆಯ ಮೇಲೆ ಪರಚುತ್ತ ತಮ್ಮ ಇರುವಿಕೆಯನ್ನೂ, ಸ್ವಲ್ಪ ಅವಕಾಶ ಸಿಕ್ಕರೂ ಸಾಕು, ಮತ್ತೆ ಹೊರಬಂದು ಸಿಕ್ಕಸಿಕ್ಕದ್ದನ್ನೆಲ್ಲ ಚಿಂದಿ ಮಾಡುತ್ತೇವೆಂಬುದನ್ನೂ ಸಾರುತ್ತಲೇ ಇರುತ್ತವೆ.

Thursday, November 20, 2014
Topic(s) of this poem: fashion
COMMENTS OF THE POEM
READ THIS POEM IN OTHER LANGUAGES
Close
Error Success