ಅಮೃತವೆಂಬಲ್ಲಿ ಅಮೃತವುಂಟು,
ಸುಖದಿನಗಳ ವಿಜಯದ ಚಿನ್ನದ ಗಂಟು;
ಅಮೃತವೆಂಬಲ್ಲಿ ಅಮೃತವುಂಟು,
ಕುದುರೆಯೇರಿ ಬರಲಿದೆ ಬಯಸಿದ ನಂಟು.
ಹೋದಲ್ಲೆಲ್ಲ ಮುಗ್ಗರಿಸಿ ಬಿದ್ದದ್ದೆ ಹೆಚ್ಚು,
ಈ ನಡುವೆಯೂ ಅದೆಂತಹ ಕನಸಿನ ಹುಚ್ಚು;
ದಾರಿ ಕ್ರಮಿಸಿದ ಮೇಲೆ ಗುರಿ ತಲಪಲೆ ಬೇಕು
ಎನ್ನುವ ತವಕದ ಈ ಬೂಟಾಟಿಕೆ ಸಾಕು.
ಮುಂದೆ ಹೀಗೇಯೆಯೆಂದು ನಾನು ತಿಳಿದವನಲ್ಲ,
ಬಯಸಿದ್ದು ಆಗಲೇ ಬೇಕೆಂದು ಬಯಸಿದವನಲ್ಲ;
ಗಾಳಿಯಲಿ ಬಂದು ಕಿವಿಹಿಡಿದು ಹೇಳಿತು ಅಂದು,
ನನಗೆ ಅಮೃತವೆಂಬಲ್ಲಿ ಅಮೃತವುಂಟುಯೆಂದು.
ತಾನಾಗಿ ಬೆಳಕೆದುರಾದಾಗ ಪುಳಕಗೊಳದವರಾರು?
ಹೊಸಲೋಕ ಸ್ವಾಗತಿಸಿದಾಗ ರೆಕ್ಕೆ ಬಿಚ್ಚದವರಾರು?
ನಾನಾದರೋ ಬಿದ್ದುಬಿದ್ದುಯೆದ್ದ ಸಾದಾ ಹುಲು ಜೀವ,
ನನ್ನದೃಷ್ಟ ನಂಬಿ ಮರೆತೆನು ಹಿಂದಿನ ಎಲ್ಲ ನೋವ.
ಆಗಂತುಕ ಭರವಸೆಯನ್ನ ತಬ್ಬಿ ದಿನದಿಂದ ದಿನಕೆ
ನಡೆದಾಗ ನಡೆದದ್ದು ಬರೇ ದಿನದಿನಗಳ ಎಣಿಕೆ;
ದಿನಕಳೆದಂತೆ ಕಾಲ ನಡೆಯಿತು ಮುಂದೆ ಮುಂದೆ,
ನಾನೆಣಿಸಿದ ದಿನ ಮಾತ್ರ ನುಗ್ಗಿತು ಹಿಂದೆ ಹಿಂದೆ.
ಇನ್ನೆಷ್ಟು ದಿನ ಆ ಮರೀಚಿಕೆಯ ಬೆನ್ನಟ್ಟಿ ನಡೆವೆ?
ಅದೆಷ್ಟು ದೂರ ಹುಂಬಹಂಬಲದ ಪೊಳ್ಳು ಗೊಡವೆ?
ಕೇಳಿದ್ದು ಸುಳ್ಳೆನ್ನಲು ನನ್ನ ಮನಸ್ಸೊಪ್ಪುವುದಿಲ್ಲ,
ಕೇಳಿದ್ದು ದಿಟವಾಗಿ ನನ್ನತ್ತ ಸುತರಾಂ ಬರುವುದಿಲ್ಲ.
ಬಾಳು ಹುಂಬಹಂಬಲದ ಮೇಲೆ ನಡೆಯುವ ಬಂಡಿ,
ಆಶೆನಿರಾಶೆಗಳ ಹಿಡಿದು ಹೆಣೆಯುವ ಉಕ್ಕಿನ ಕೊಂಡಿ;
ಭರವಸೆಯ ಗಾಳಿಯ ಮೇಲೆ ಜಗ್ಗುವ ನನ್ನ ತೇರು
ಯಾವಾಗ ಸೇರುವುದೋ ನಾನು ಬಯಸಿದ ಊರು?
ಕಾದುಕಾದು ಸೋತು ಮುಗ್ಗರಿಸಿದೆ ನನ್ನ ನಿರೀಕ್ಷೆ,
ಸುತ್ತ ತುಂಬಿರುವುದು ಇದೀಗ ಬರಿಯ ನಿರಾಶೆ;
ನಿರಾಶೆಯೊಡಲೊಳಗೆ ಕದಡುವ ಏನೋ ಮಿನುಗು
ಹೇಳುತ್ತಿದೆ ಬಂದೆ ಬರುವುದು ನೆನೆದದ್ದು ಕೊನೆಗೂ.
This poem has not been translated into any other language yet.
I would like to translate this poem