ನಿನ್ನೆಯಂತೆ ಇಂದು ಇಲ್ಲ, ಇಂದಿನಂತೆ ನಾಳೆಯಿಲ್ಲ,
ಒಂದೊಂದು ಒಂದು ನವೀನತೆ;
ಅಲ್ಲಿಯಂತೆ ಇಲ್ಲಿಯಿಲ್ಲ, ಇಲ್ಲಿಯಂತೆ ಮಗದೊಂದಿಲ್ಲ,
ಒಂದೊಂದು ಒಂದು ಆವಿಷ್ಕಾರವು.
ಎಲ್ಲ ಹೊಸ ಕಲ್ಪನೆ, ಸೃಜನಾತ್ಮಕತೆಯ ಸಂತರ್ಪಣೆ,
ಅತ್ತ ನೋಡು, ನೀನು ಇತ್ತ ನೋಡು,
ಸೃಷ್ಠಿಕ್ರಿಯೆ ಕಾಲಪ್ರಜ್ಞೆ ಕೂಡಿಕೊಂಡು ರತಿಸಿದಾಗ,
ಪ್ರಕೃತಿಯ ಆ ದೀಪ್ತಚೈತನ್ಯ ನೋಡು.
ಎಲ್ಲಿಂದ ಒಸರಿತಿದು ರಂಗುರಂಗಿನ ಹೊಸ ಕಲ್ಪನೆ?
ಎಲ್ಲಿಂದ ಜಿಗಿಯಿತೊ ಸೃಷ್ಠಿಪ್ರಕ್ರಿಯೆಯು?
ಕಾಲಪ್ರಜ್ಞೆ ಗಂಗೆಯಂತೆ ಗಂಗೋತ್ರಿಯಿಂದ ದುಮುಕುವಾಗ,
ಮೂಡಿ ಬಂತೆ ಈ ನಮ್ಮನಿಮ್ಮ ಲೋಕವು?
ಏನು ಹುರುಪು, ಏನು ಉಲ್ಲಾಸ ನವನವೀನ ಲೋಕದಲ್ಲಿ,
ಮುಟ್ಟಿದ್ದೆಲ್ಲ ಸುಖಸಮೃದ್ಧಿಯ ಒರತೆಯು;
ಒಂದರಂತೆ ಒಂದು ಇಲ್ಲ, ಹೊಸಹೊಸತಿನ ಉಧ್ಭವ,
ಇದೆ ಹೊಸಲೋಕಗಳವತರಣವು.
ಒಂದು ರೂಪ ಒಬ್ಬನಿಗೆ; ಮತ್ತೊಂದು ಮತ್ತೊಬ್ಬನಿಗೆ,
ಒಂದರಲ್ಲೆ ಅದೆಷ್ಟು ಬಗೆ ದರ್ಶನ!
ಕಣ್ಣು ಒಂದೆ, ದೃಷ್ಠಿ ಹಲವು, ವಿಭಿನ್ನ ವಿಚಿತ್ರ ಆಟವು,
ಇದಾವ ದಿವ್ಯ ಪರದಾಟವು?
ನಿನ್ನ ಸೃಷ್ಠಿ, ನನ್ನ ಸೃಷ್ಠಿ, ಎಂದೂ ಅಲ್ಲ ಸರಿಸಾಠಿ,
ಇಲ್ಲಿ ಎಲ್ಲವು ಆಕಸ್ಮಿಕ;
ನೀನು ನಾನು ಕೂಡಿ ಕಳೆದು ಗುಣಿಸಿದ್ದೆ ಟೊಳ್ಳು,
ಈ ಲೋಕದಾರಿಯೆ ಭಿನ್ನವು.
ಇಲ್ಲಿ ಎಲ್ಲ ರೋಮಾಂಚನ, ಕೌತುಕತೆಯ ಸಿಂಪನ,
ಕ್ಷಣಕ್ಷಣವೂ ಇಲ್ಲಿ ಕ್ಷಣಿಕವು;
ಇದುವೆ ಲೋಕದ ನನ್ನನಿನ್ನ ರಸಿಕತೆಯ ಗುಟ್ಟು,
ಅದನ್ನು ಬಿಟ್ಟು ಬೇರೇನ್ನುಂಟು ಇಲ್ಲಿ?
ಕಾಲ ಒಂದು ನಾಟಕದ ಪರದೆ ಸರಣಿ,
ಇಳಿತ ಭರತ ಇಲ್ಲಿ ಸಹಜ;
ಒಂದೊಂದು ಹೊಸ ದೃಶ್ಯ ಸರಪಣಿ,
ಒಂದೆ ಕತೆಯ ದೃಶ್ಯ ರೂಪ.
ಕಾಲ ಒಂದು ಅನುಭವದ ಸರಮಾಲೆ,
ಸಾಧ್ಯತೆಗಳ ನೀಲನಕ್ಷೆ;
ಕಾಲಕ್ರಮಣ ಭ್ರಮಣದಲ್ಲಿ ನಿಂತ ನಾವು,
ಕಾಲಪ್ರಜ್ಞೆಯ ತುಂಬು ವಸ್ತು.
This poem has not been translated into any other language yet.
I would like to translate this poem