ಎಡದಲ್ಲೊಂದು ಕುತ್ತು,
ಬಲದಲ್ಲೊಂದು ಕುತ್ತು,
ದಾರಿತಿಳಿಯದ ಬಂಡಿ ಎತ್ತು
ಜೋಡುರಸ್ತೆಯಲ್ಲಿ ನಿಂತು
ಎಷ್ಟುಕಾಲ ಕಳೆಯಬೇಕು?
ಮುಂದೆ ದಾರಿ ನಡೆಯಬೇಕು,
ದೂರ ಗುರಿಯ ಮುಟ್ಟಬೇಕು,
ಒಂದುದಾರಿ ಹಿಡಿಯಬೇಕು;
ಸಂಧಿಗ್ಧತೆ ಇನ್ನು ಸಾಕು,
ತಪ್ಪೋಸರಿಯೋ ತೀರ್ಪು ಬಿಟ್ಟು,
ಒಂದು ದಾರಿ ಹಿಡಿದುಬಿಟ್ಟು
ಎತ್ತು ಬಂಡಿ ನಡೆಯಬೇಕು.
ಸರಿಯೋತಪ್ಪೋ ಗಣಿಕೆಯಲ್ಲಿ,
ಗುರಿಯ ಬೇಗ ತಲಪುವಲ್ಲಿ
ಯಾವದಾರಿ ಸೂಕ್ತವೆಂದು
ನಿಂತಲ್ಲೆ ಬಂಡಿ ನಿಂದು ನಿಂದು
ಕಾಲವ್ಯರ್ಥವಾಗುವಲ್ಲಿ
ದಿಟ್ಟನಡತೆಯೊಂದೇ ಸೂಕ್ತ;
ಕಣ್ಣುಮುಚ್ಚಿ ಒಳಗೆ ನೋಡಿ
ಕಂಡ ಕಡೆಯಲಿ ಏತ್ತುಬಂಡಿ
ತನ್ನದಾರಿ ಹಿಡಿಯಬೇಕು;
ಶಂಕೆ ಅಳುಕು ಬಿಟ್ಟುಕೊಟ್ಟು
ಧೈರ್ಯಸ್ಥೈರ್ಯ ಎದುರಿಗಿಟ್ಟು
ನಡೆವ ಕ್ರಿಯೆ ನಡೆಸಬೇಕು.
ಹಲವುದಾರಿ ಕೂಡುವಲ್ಲಿ
ಬಂದುನಿಂತ ಏತ್ತುಬಂಡಿ
ವಿಧಿಯ ಕೈಯ ಸೂತ್ರಗೊಂಬೆ;
ಎಲ್ಲಿ ಏನು ತಿಳಿಯುವಲ್ಲಿ,
ಆಕಸ್ಮಿಕದ ಪ್ರಪಾತದಲ್ಲಿ
ಗುರಿಯನೊಂದೆ ಮುಂದೆ ಇಟ್ಟು
ದಾರಿಕ್ರಮಣ ನಡೆಸಬೇಕು;
ಅನಂತ ದಾರಿ ಮಧ್ಯದಲ್ಲಿ
ಅನಂತ ಜೋಡುದಾರಿಯಲ್ಲಿ
ಏತ್ತುಬಂಡಿ, ಕಣ್ಣಿಟ್ಟ ಗುರಿ -
ಎರಡು ಮಾತ್ರ ಲೌಕಿಕ,
ಉಳಿದುದೆಲ್ಲಲೌಕಿಕ.
ಮುಂದೆದಾರಿ ನಡೆಯುವಾಗ
ಎಲ್ಲಿಯಾವುದೆಂಬ ಶಂಕೆ,
ಗುರಿಯ ಮುಟ್ಟುವ ಬಗ್ಗೆ ಶಂಕೆ
ಏತ್ತುಬಂಡಿಗೇಕೆ ಬೇಕು?
ಮುಂದೆಮುಂದೆ ನಡೆಯಬೇಕು,
ದಾರಿಕಂಡಲ್ಲಿ ತಿರುಗಬೇಕು,
ಇಷ್ಟೇ ಬಂಡಿಯ ಕಟ್ಟಳೆ;
ವಿಧಿವಿಧಾನ ತಿಳಿಯದಾಗ
ದಾರಿಯೆದುರು ತಂದ ವಿಧಿ
ಎಲ್ಲಿಯೇನೆಂದು ವಿಧಿಸುವಾಗ,
ಗುರಿಯಕಡೆಗೆ ದೃಷ್ಟಿಯಿಟ್ಟು
ಕಣ್ಣುಮುಚ್ಚಿ ನಡೆಯಬೇಕು.
ಸದಾ ಗುರಿಯ ಮುಂದೆಯಿಟ್ಟು,
ಹಿಡಿದ ದಾರಿಗೆ ಹೆಜ್ಜೆಯಿಟ್ಟು
ನಡೆವುದೇ ಸಮ ಚೇತನ;
ವ್ಯರ್ಥಚಿಂತೆ ಬಿಟ್ಟುಕೊಟ್ಟು,
ವಿಧಿಯಮೇಲೆ ಭಾರವಿಟ್ಟು
ನಡೆವುದೇ ಸರಿ ಜೀವನ.
This poem has not been translated into any other language yet.
I would like to translate this poem