ಇದು ನಿನಗೆ ತಿಳಿಯದ ವಿಷ್ಯ Poem by PRAVEEN KUMAR Kannada Poems

ಇದು ನಿನಗೆ ತಿಳಿಯದ ವಿಷ್ಯ

ಎಲೆ, ಹುಲುಗರಿ ಮನುಷ್ಯ,
ಇದು ನಿನಗೆ ತಿಳಿಯದ ವಿಷ್ಯ! !

ನೀನು ಈ ವಿಶ್ವದ ಬರಿಯ ಒಂದು ಧೂಳು,
ಧರ್ಮ ಕರ್ಮ ಮರ್ಮ ಇದೆಲ್ಲ ಬರಿಯ ಸುಳ್ಳು;
ನಿನ್ನೆ ಇಂದು ನಾಳೆ ಇದೆಲ್ಲ ಏನೂ ಇಲ್ಲ,
ಪಾಪಪುಣ್ಯ ಎನ್ನುವುದಕೆ ಅರ್ಥನೆ ಇಲ್ಲ.

ಧೂಳುಗಳ ಒಟ್ಟಾರೆ ರೂಪ ಬ್ರಹ್ಮಾಂಡ,
ಅವುಗಳ ಸಿಡಿದ ರೂಪವೆ ಕರ್ಮಕಾಂಡ;
ಕಣ್ಣುಬಿಟ್ಟು ನೋಡಿದರೆ ಕಾಣುವುದು ಎಲ್ಲ,
ಒಂದರಂತೆ ಒಂದು ಇಲ್ಲಿ ಯಾವುದೂ ಇಲ್ಲ.

ನ್ಯಾಯ ಸಮಾನತೆಗಳೆಲ್ಲ ನಿನ್ನ ಹುಚ್ಚು,
ನಿನ್ನನುಕೂಲಕೆ ನೀನು ಸೃಷ್ಟಿಸಿದ ಸಂಚು;
ಪ್ರಕೃತಿಗೆ ಇದರ ಗಂಧಗಾಳಿಯೆ ಇಲ್ಲ,
ಅದಕೆ ಕಾಯುವುದು ಮೌಢ್ಯ, ಬುದ್ಧಿಮಾಂದ್ಯ.

ಕಾರ್ಯಕಾರಣ ಮಾನವ ಕಪೋಲಕಲ್ಪಿತ ಕೂಪ,
ಬುದ್ಧಿಮತ್ತೆಯೆಂಬ ಭ್ರಾಂತಿನ ಹಿಡಿಕೈ ಶಾಪ;
ಕಾರ್ಯಕಾರಣಬುದ್ಧಿ ತಳವಿಲ್ಲದ ಹುಚ್ಚು ಹಾರಾಟ,
ಸಾಗರದ ಮಧ್ಯದ ಹನಿನೀರಿನ ಪರದಾಟ.

ಇದೆಲ್ಲ ವಿಜ್ಞಾನಮಯ, ಆನಂದಮಯ,
ಇಲ್ಲಿ ನಡೆವುದೆಲ್ಲ ನಿಷ್ಕರ್ಷ ಸಂಚಲನ;
ಕಾಲಚಕ್ರದಂಚಿನ ಘೋರ್ಣನೆಯಲ್ಲಿ ಸಿಡಿದು
ಉಬ್ಬಿತಗ್ಗುವ ಪ್ರಕ್ರಿಯೆಯೆ ವಿಶ್ವದಾಟ.

ಇಲ್ಲಿ ಯಾರೂ ಕೆಟ್ಟವರಲ್ಲ, ಒಳ್ಳೆಯವರಿಲ್ಲ,
ಸ್ವಇಚ್ಛೆ ಸ್ವಚ್ಚಂದ ಸ್ವಕಲ್ಪಿತ ಭ್ರಾಂತಿ;
ಇಲ್ಲಿ ಯಾವುದೂ ನಿನ್ನೆಮೊನ್ನೆಯ ಹಾಗಿಲ್ಲ,
ಕಾಲಗತಿಯಲ್ಲಿ ಹೊಸತು ಸೃಷ್ಟಿ ನಿಯಮ.

ಎಲ್ಲವೂ ಒಟ್ಟುಶಕ್ತಿಯ ಒಂದೊಂದು ಧೂಳು,
ವಿಶ್ವಸಮಷ್ಟಿಯ ಧೂಳಿನ ಖಂಡ ರೂಪ;
ಈ ಶಕ್ತಿಯ ಮೀರಿ ಮತ್ತೆ ಎಲ್ಲೂ ಏನೂ ಇಲ್ಲ,
ಆ ಚಕ್ರಬಂಧದೊಳಗಿನ ಪುಟ್ಟ ಆಟ ಎಲ್ಲ.

ದೇವದಾನವರೆನ್ನುವುದು ನಿನ್ನ ಭ್ರಾಂತು,
ಸೃಷ್ಟಿ ಯಾವುದನ್ನೂ ಹಾಗೆ ಸೃಷ್ಟಿಸಲಿಲ್ಲ;
ಇದೆಲ್ಲ ಸೃಷ್ಟಿಪ್ರಕ್ರಿಯೆಯ ಚದುರಂಗದಾಟ,
ಇದನ್ನು ತಿಳಿದರೆನೆ ತೃಪ್ತಿ, ಜೀವನಕೆ ಮುಕ್ತಿ.

ಇಲ್ಲಿ ಯಾವುದೂ ಸುಳ್ಳಿಲ್ಲ, ಸತ್ಯವಿಲ್ಲ,
ಕಾಣುವುದು ಕೇಳುವುದೆಲ್ಲ ಉಂಟು;
ಕಂಡದ್ದಕ್ಕೆ ಕೇಳಿದ್ದಕ್ಕೆ ಹಬ್ಬಿ ಕುಗ್ಗಿ
ಗಂಗೆಯಂತೆ ಹರಿಯುವುದೆ ಜೀವನದ ಸುಗ್ಗಿ.

ಇಷ್ಟದುಷ್ಟತೆಯ ಮೀರಿ ನಡೆವ ಈ ವಿಶ್ವ
ನಡೆಸುವ ಭಾರಿ ಮಹಾಪ್ರಜ್ಞೆ ಬೇರೆ ಉಂಟೆ?
ಇದು ಮಾತ್ರ ಎಲೆ, ಓ ಹುಲುಗರಿ ಮನುಷ್ಯ,
ನಿನಗೆ ನನಗೆ ಎಂದೂ ತಿಳಿಯದ ಒಂದು ವಿಷ್ಯ.

COMMENTS OF THE POEM
READ THIS POEM IN OTHER LANGUAGES
Close
Error Success