ಮೈಸಿರಿ Poem by PRAVEEN KUMAR Kannada Songs

ಮೈಸಿರಿ

ದಂತದಿಂದ ಕಡೆದ ನಾಜೂಕಿನ ಮೈಸಿರಿಯವಳೆ,
ಚಂದನದ ಸವಿಸ್ವಾದ ಕಣಕಣದಿಂದ ಹೊರಸೂಸುವವಳೆ,
ನೀನು ಬರೆ ರಂಭೆ ಊರ್ವಶಿ ಮೆನಕೆ ಮಾತ್ರವಲ್ಲ,
ಹುಣ್ಣಿಮೆಯ ಬೆಳದಿಂಗಳಲಿ ಮಿಂದು ನಿಂತ ಶಾರದೆಯೆ.

ಚೆಲುವಿನ ರಾಶಿ, ಸೌಂಧರ್ಯದ ಕಾಶಿ, ನನ್ನಾತ್ಮದ ಸಾಕ್ಷ್ಯಿ,
ನಿನ್ನ ಪ್ರಜ್ವಲ ಪ್ರಭೆಯಲಿ ಅದ್ದಿ, ಮುಳುಗಿಸಿ, ತೊಯ್ದು,
ನನ್ನೊಳಗಿನ ಕೊಳಕು, ಕತ್ತಲೆ, ಕೆಸರನ್ನು ತೊಳೆದು, ಕಳೆದು
ತಿಳಿಯದಾವುದೋ ಮೋಡಿಯಲಿ ಹಿಡಿದಿಡುವೆ ನನ್ನ.

ನಿನ್ನ ಮೈ ಏರುತಗ್ಗಿನಲಿ ಶಿಲ್ಪಚಾತುರ್ಯ ಕಂಡಾಗ,
ಆ ಅಲೌಕಿಕ ಚೆಲುವಲ್ಲಿ ಮಿಂದು ನಾನು ನಿಂತಾಗ
ಸುಖ ಶಾಂತ ತೃಪ್ತತೆಯ ಬುಗ್ಗೆಯೆ ಆಗುವೆನು,
ತಿಳಿಯಲಾಗದಾನಂದ ಎಲ್ಲೆಂದರಲ್ಲಿ ಸ್ಫುರಿಸುವೆನು.

ಇದು ಚೆಲುವೋ, ದೈವಿಕತೆಯ ಅಪರಿಮಿತ ಸೊಗಸೊ,
ನಿನ್ನೊಂದೊಂದು ಹಾವಭಾವದಲಿ ಒಂದೊಂದು ಲಾವಣ್ಯ,
ಮೈಮನವರಳಿಸುವ ಮನೋಹರತೆಯ ವರಸೆ,
ಹಾಲಿನ ಕೊಳದಲ್ಲರಳಿದಪೂರ್ವ ಭವ್ಯ ತಾವರೆಯೆ ನೀನು.

ನಿನ್ನ ಮೈಮಾಟದಲಿ, ಏರುತಗ್ಗಿನ ನವಿರು ಕೌಶಲ್ಯದಲಿ
ದೇವಶಿಲ್ಪಿಯ ದಿವ್ಯ ನಾಜೂಕು ಕಂಡೆ;
ನಿನ್ನ ಬಳಿ ಬಂದು, ಮುಟ್ಟಿ, ಹಿಡಿದು, ತಬ್ಬಿಕೊಂಡು ನಿನ್ನ
ಸದಾ ನನ್ನೊಳಗೆ ಹಿಡಿದಿಡಬೇಕೆಂದು ಕೊಂಡೆ.

ಈ ಲೋಕದವಳಲ್ಲ ನೀನು, ಸುಂದರಿ, ಕಿನ್ನರಿ,
ಮತ್ತೆಲ್ಲಿಂದಲೋ ಚೆಲುವು ಅವತರಿಸಿದವಳು;
ನಿನ್ನದು ಪರಿಪೂರ್ಣ ಸೌಂಧರ್ಯ, ಲೌಕಿಕಲೌಕಿಕ ಜೋಡಿ,
ನಿನ್ನಲ್ಲೊಂದಾದವ ಮಾತ್ರ ಬಲ್ಲ ನಿನ್ನ ಮೈಸಿರಿಯ ಮೋಡಿ.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success