ಜೀವನದ ಬೆಳಕು Poem by PRAVEEN KUMAR Kannada Songs

ಜೀವನದ ಬೆಳಕು

ಅವಳು ಬಂದು ನನ್ನನೆಚ್ಚರಿಸಿದಾಗಲೆ, ನನಗೆ ಗೊತ್ತು,
ನಾನಿಲ್ಲಿದ್ದೇನೆ, ಹೀಗಿದ್ದೇನೆ ಎಂದು;
ಅವಳು ಬಂದು, ಕಿವಿಯಲ್ಲಿ ಪಿಸುಗುಟ್ಟಿದಾಗಲೆ ಗೊತ್ತು,
ಹೊತ್ತು ಕಳೆದು, ಬೆಳಕು ಮೇಲೇರಿದೆ ಎಂದು.

ನಿದ್ದೆಯ ಮಡಿಲಲ್ಲಿ, ತಲೆಹೂತು ಮಲಗಿದ್ದ ನನಗೆ,
ಕನಸಿನ ಚಕ್ಕಂದ ಬಿಟ್ಟು ಬೇರೆ ಗೊತ್ತಿರಲಿಲ್ಲ;
ಸದ್ದುಗದ್ದಲದ ಮಧ್ಯೆ, ನಿದ್ದೆಯ ಹೊದ್ದು ಮಲಗಿದ್ದ ನನಗೆ,
ಹೊರಲೋಕದ ಪರಿವೆಯೆ ಬೇಕಾಗಿರಲಿಲ್ಲ.

ಅವಳು ಬಂದವಳು, ಮುಖಕ್ಕೆ ಮುಖವಿಟ್ಟು ನನ್ನನಲ್ಲಾಡಿಸಿದಾಗ,
ಇದೇನು ಗ್ರಹಚಾರವೆಂದು, ಝೊಂಪಿನಲಿ ಹಲುಬಿದೆನು ನಾನು;
ಬಳಿ ಕೂತು, ತಲೆ ನೇವರಿಸಿ, ಬೆಳಗಾುತೆಂದಾಗ,
ಇನ್ನೇಳದೆ ಗತ್ಯಂತರವಿಲ್ಲೆಂದು, ನಿಜದೆದುರು ತಲೆಬಾಗಿದೆ ನಾನು.

ಕಣ್ಣು ಬಿಟ್ಟಾಗ, ಹಿತ ಬೆಳಕು, ಮಧ್ಯೆ, ಮುಡಿಯಾಗಿ ಅವಳ ಮೊಗ,
ಮುಗುಳುನಗೆ ಹೊಳೆಯಾಗಿ, ನನ್ನನಾದರಿಸುತಿತ್ತು,
ಹೃದಯ ಹೃದಯಗಳ ಬೆಸೆಯುವ ಮಂದಪ್ರಕಾಶದ ಸೆಳೆತ,
ಅವಳ ಕಣ್ಣಿನಾಳದಿ ಚಿಮ್ಮಿ, ನನ್ನ ಸೆರೆಹಿಡಿಯುತಿತ್ತು.

ಮೇಲೆದ್ದವನೆ, ನಾನವಳ ಕೈಯಿಂದ ನನ್ನ ಮುಖ ಮುಚ್ಚಿಕೊಂಡೆ,
ಮೆಲ್ಲಮೆಲ್ಲನೆ, ಕೈಗಳ ನನ್ನ ತುಟಿಗೊತ್ತಿಕೊಂಡೆ;
ಇನ್ನೇನು, ಬರಸೆಳೆದವಳ ಬಿಗಿದಪ್ಪಬೇಕೆಂದು ಕೊಂಡು,
ಕಣ್ಣುಬಿಟ್ಟು ನೋಡಿದೆನು, ಕಾಣಿಸಲಿಲ್ಲ ಅವಳು.

ನನ್ನನೆಚ್ಚರಿಸಲೆಂದೆ, ನನ್ನೆದುರು ಬಂದವಳು ಅವಳು,
ಎಚ್ಚರಿಸಿದ ಮೇಲೆ, ನನ್ನೆದುರಿಂದಲೆ ಮರೆಯಾದಳು;
ಕತ್ತಲಲ್ಲಿ ಹುದುಗಿದ್ದ, ಕನಸಿನ ಮರೀಚಿಕೆುಂದ,
ಬೆಳಕಿನ ಭವ್ಯತೆಗೆ ನನ್ನ ಸೆಳೆದು ಮರೆಯಾದಳವಳು.

ಅವಳ ಪುನರಾಗಮನಕ್ಕೆ, ಆ ಅನನ್ಯ ಸ್ನೇಹಮಯ ಸಾಂಗತ್ಯಕ್ಕೆ,
ಮತ್ತೆ ನಿದ್ರೆಗೆ ನಾನು ಶರಣಾಗಬೇಕೋ ಏನೋ;
ಅದು ಕನಸೋ, ನೆನಸೋ, ನಿದ್ರೆಯೋ, ಜಾಗ್ರತಾವಸ್ಥೆಯೋ, ತಿಳಿಯೆ,
ಅವಳ ಬಳಿ ಇರುವುದು, ನನ್ನ ಜೀವನದ ಬೆಳಕು.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success