ನಮ್ಮಸ್ಥಿತ್ವದ ಚಕ್ರತೀರ್ಥದ ನಡುವೆ ಮೇಲೇಳಬೇಕು Poem by Praveen Kumar in Bhavana

ನಮ್ಮಸ್ಥಿತ್ವದ ಚಕ್ರತೀರ್ಥದ ನಡುವೆ ಮೇಲೇಳಬೇಕು

ಬೆಳಕಿಗೆ ಬೆಳಕಾಗಿ ಬಂದವರು ನಾವು,
ಬೆಳಕಿಗೆ ಶುಭ್ರ ಬೆಳಕಾಗಬೇಕು;
ಕತ್ತಲನು ಬಗೆದೊಗೆದು ಬೆಳಕಾದವರು ನಾವು,
ಕತ್ತಲಿನ ಮುಖವೊರಸಿ ಬೆಳಕು ಹರಿಸಬೇಕು.

ಕಾಲಗರ್ಭದಜ್ಞಾತದಿ, ಚಿಗುರೊಡೆದ ನಾವು,
ಜ್ಞಾನರೆಂಬೆಕೊಂಬೆಯಲಿ, ಕವಲೊಡೆಯಬೇಕು;
ನಿಶ್ಚೇತನದ ನಡುವಿಂದ, ಸಿಡಿದೆದ್ದ ನಾವು,
ನಮ್ಮಸ್ಥಿತ್ವ ಚಕ್ರತೀರ್ಥದ ನಡುವೆ ಮೇಲೇಳಬೇಕು.

ದಿಗಂತದಂಚಿಗೆ, ನಮ್ಮ ಚೈತನ್ಯ ಚಿಮ್ಮಿ,
ನಿಂತಲ್ಲೆ, ಊಧ್ರ್ವ ಮುಖರಾಗಬೇಕು ನಾವು;
ಪಾತಾಳದಿ ಕೈವಲ್ಯಕ್ಕೆ, ಹೃದಯ ಪತಾಕೆಯ ಹಾರಿ,
ಸ್ಥಿರದಲ್ಲೊಳಗಿಳಿದು, ನಮ್ಮನ್ನರಿಯಬೇಕು.

ಕಾಲಪದರುಗಳ ಮೇಲೆ, ಪದರಾದ ನಾವು,
ಹೊಸತೊಂದು ಮಜಲಾಗಿ, ಗುರುತೊತ್ತಬೇಕು;
ಕಾಲನಾರಾಯಣನ ಭುಜವೇರಿ ನಿಂತಿರುವ ನಾವು,
ತಲೆಯೆತ್ತಿ, ಗಡಿಮೀರಿ ಕೈಚಾಚಬೇಕು.

ಮಿಂಚುಹುಳುಗಳಲ್ಲ, ಮಿಂಚುಗಳಾಗಬೇಕು ನಾವು,
ಮಿಂಚುಗುಡುಗುಗಳಾಗಿ ಗುಡುಗಿ, ಮಳೆಹರಿಸಬೇಕು;
ಗಾಜುಹರಳುಗಳಲ್ಲ, ದೈತ್ಯವಜ್ರಹಾರವಾಗಿ ನಾವು,
ಸೂರ್ಯಾಪ್ರಭೆಯನು ಹೀರಿ, ಬೆಳಕು, ಹಬ್ಬಬೇಕು.

ನಮ್ಮಸ್ಥಿತ್ವದ ಬೇಲಿಗಳ ಕಡಿದೊಗೆದು ನಾವು,
ವಿಶ್ವಮಾನವರಾಗಿ, ಮೇಲೇರಬೇಕು;
ಮುಚ್ಚಿರುವ ಪಂಚೇಂದ್ರಿಯಗಳ ವಿಸ್ತರಿಸಿ ತೆರೆದು,
ಒಳಗೆ, ಹೊರಗಿನ ಸೇತುವೆ, ಗಟ್ಟಿ ಬೆಸೆಯಬೇಕು.

ಕಾರ್ಗತ್ತಲು, ಮರುಭೂಮಿಯ, ಈ ಮರೀಚಿಕೆ ಜೀವ,
ಶಾಶ್ವತ ಬೆಳಕಾಗಿ, ಸದಾ ಮಿನುಗುತ್ತಿರಬೇಕು;
ಕ್ಷಣಿಕ ಜೀವ ಕಿಡಿಯಿಂದ, ದಿಗಂತಗಳ ಬೆಳಗಿ,
ಭೂತಭವಿಷ್ಯತ್ತಿನ ಮಧ್ಯೆ ವಿಕಸನದ ಕೊಂಡಿಯಾಗಬೇಕು.

ಬಲುದೂರಕೆ, ನಮ್ಮ ಧ್ಯೇಯಗುರಿಯನ್ನಿಟ್ಟು,
ಸಾಧನೆಯ ನಾವೆಯಲೆ ಹುಟ್ಟುಹಾಕಬೇಕು;
ಕಣ್ಣಿವೆ ಮುಚ್ಚದೆ, ಸದಾ ಎಚ್ಚರವಾಗಿದ್ದು,
ಹಿಡಿದ ದಾರಿಯ ಗುಂಟ ಮುಂದೊತ್ತಬೇಕು.

ಕತ್ತಲೆಯ ಗರ್ಭದಲ್ಲಿ ನಾವು, ಮತ್ತೆ ಮುಳುಗುವ ಮೊದಲು,
ಬೆಳಕಿನ ದಾರಿಯಲಿ ನಡೆದು, ಬಸವಳಿಯಬೇಕು,
ಮುಟ್ಟಲಾರದ ಗುರಿಗಳನೇಕ, ಎದುರುಬದುರಿರುವಾಗ,
ಕತ್ತಲೆ ಕರೆದೊಯ್ಯುವತನಕ, ದಾರಿ ನಡೆಯಬೇಕು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success