ನನ್ನ ದಾರಿಯ ಗುರುತೇ ಇಲ್ಲ Poem by Praveen Kumar in Bhavana

ನನ್ನ ದಾರಿಯ ಗುರುತೇ ಇಲ್ಲ

ನೋಡುನೋಡುತಿದ್ದಂತೆ, ಆ ದಡದಿಂದ, ಈ ದಡವ ಸೇರಿ ಬಿಟ್ಟೆ,
ನೋಡುನೋಡುತಿದ್ದಂತೆ, ಅಲೆಗಳನೇರಿ, ಇಳಿದು, ದೂರ ಕ್ರಮಿಸಿಬಿಟ್ಟೆ;
ಪ್ರಾತ: ಕಾಲದ ಎಳೆಬಿಸಿಲಲ್ಲಿ ಹೊರಟವನು,
ನಡು ಬಿಸಿಲಲ್ಲಿ, ಬೆವರು ಸೋತು ಬಸವಳಿದು,
ಮುಸ್ಸಂಜೆ ನೆರಳಲ್ಲಿ, ಈ ಯಾತ್ರೆ ಮುಗಿಸುತ್ತಿರುವೆ;
ಬಂದತ್ತ ತಿರುಗಿ ನೋಡಿದಾಗ,
ಕ್ರಮಿಸಿದ ದೂರವನು, ಮನದಲ್ಲೆ ಅಳೆದಾಗ,
ಬಿಸಿಲಲ್ಲಿ ಸುರಿವ ಮಳೆಯಂತ ಅನುಭವದ ಚಿತ್ರ,
ಮನಸ್ಸೆಲ್ಲ ಹುಚ್ಚೆದ್ದು, ಮೂಕವಾಗುವ ಭಾವ, ಚಿತ್ರ ವಿಚಿತ್ರ.

ಬಂದ ದಾರಿಯ ಉದ್ದ, ನನ್ನ ಹೆಜ್ಜೆಯ ಮುದ್ರೆಯೊತ್ತಬೇಕೆಂದಿದ್ದೆ,
ಹೆಜ್ಜೆ ಹೆಜ್ಜೆಗೂ ಎಚ್ಚರವಿದ್ದು, ನಿದ್ರೆ ಮರೆಯಬೇಕೆಂದಿದ್ದೆ;
ಆದರೆ, ನಿದ್ರೆಯ ಅಮಲಿನಲ್ಲೆ ಪಯಣ ಮುಗಿಸಿಬಿಟ್ಟೆ,
ಕನಸು ಕಾಣುತ, ನಿಜಲೋಕದಿ ನಾನು ದೂರ ನಿಂತೆ;
ಮುಸ್ಸಂಜೆಯ ನೆರಳಿಂದ, ಬಂದತ್ತ ಕಣ್ಣೋಡಿಸುವಾಗ,
ಭೋರ್ಗರೆಯುವ ನೀರಿನ ರಾಶಿ ಕಾಣಿಸುವುದು ಸೌಮ್ಯ;
ನನ್ನ ಒಂದು ಹೆಜ್ಚೆಯು ಇಲ್ಲ, ನನ್ನ ದಾರಿಯ ಗುರುತೇ ಇಲ್ಲ,
ಇದು ನಾನು ಬಂದ ದಾರಿಯೇ ಎಂದು, ಮನ ಕಾಡುತ್ತಿದೆ ಈಗ,
ನನಗೇ ನಾನು ಪರಕೀಯ, ಒಂಟಿ, ಈ ಮುಸ್ಸಂಜೆ ಬೆಳಕಿನಲ್ಲಿ.

ಹಿಂದೆ ಬಂದವರು, ಮುಂದೆ, ಮುಂದೆ, ಕಣ್ಮುಂದೆ ಹೋಗುವರು,
ಮುಂದೆ ಬಂದಿದ್ದವರು, ಎಲ್ಲೋ ಎಂದೋ, ಹೇಳದೆನೆ ಹಿಂತಿರುಗಿದರು;
ಈ ಪಯಣದಲ್ಲೆಲ್ಲ, ಸರದಿಯದ್ದೆ ದೊಡ್ಡ ವ್ಯವಹಾರ,
ಎಲ್ಲರೊಡನಿದ್ದೂ, ಹೃದಯದಲ್ಲಿ ಒಂಟಿತನದ ಸಾಕಾರ;
ಪಯಣದುದ್ದ, ಮಧ್ಯದಲಿ ಒಳಬಂದು, ಗೆಳೆತನ ಗಳಿಸಿದವರೆಷ್ಟೋ!
ಬಂದ ಹಾಗೆನೆ, ಇಲ್ಲಿ ಹೇಳಕೇಳದೆ, ಮೇಲಿದ್ದು ಹೋಗುವುದೆ ಪರಪಾಟ;
ಆ ಮೇಲೆ ಉಳಿಯುವುದು, ಸಿಹಿಕಹಿ ನೆನಪಿನ ಜಂಜಾಟ;
ಈಗ, ಬರೆ ನೆನಪುಗಳ ದೈತ್ಯ ಗೋಪುರವೆ ಆಗಿ,
ಸುತ್ತಿರುವ ಕತ್ತಲೆಯಲ್ಲಿ, ಮೈಮರೆವ ದಿನ ಕಾಯುತ್ತಿರುವೆ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success