ತಪ್ಪಿದ ತಾಳ Poem by Praveen Kumar in Divya Belaku

ತಪ್ಪಿದ ತಾಳ

ತಾಳತಪ್ಪಿದ ಲೋಕದಲ್ಲಿ
ಥಕ ಥೈ ಥಕ ಥೈ ನಾನೂ ತಾಳಹಾಕಿದೆನಲ್ಲ,
ಬಿದ್ದರೂ ಎದ್ದು ಕೈಹಿಡಿದು
ನಿನಗೆ ಇಂಬು ನೀಡಿದೆನಲ್ಲ.

ನೀನು ನಡೆದ ದಾರಿ ನನಗೆ ತಿಳಿಯಲಿಲ್ಲ,
ನಿನ್ನ ಗುರಿಯ ಚಹರೆ ನನಗೆ ಹೊಳೆಯಲಿಲ್ಲ,
ಎದ್ದುಬಿದ್ದು ನೀನೋಡುತಿರುವಾಗ
ಬೆಂಬಿಡದೆ ಓಡಿ ಬೇಸ್ತುಬಿದ್ದೆನಲ್ಲ.

ನಿನ್ನ ದಾರಿಯ ಲಕ್ಷ್ಯ ನಿನಾಗೆನೇ ತಿಳಿದಿರಲಿಲ್ಲ.
ಕಣ್ಣ ಮುಚ್ಚಿ, ಎದೆ ಬಿಚ್ಚಿ ನೀನೋಡುತ್ತ ಹೋದೆ;
ಎಲ್ಲಿ ಎಂದೇನರಿಯದೆ ತತ್ತರಿಸಿ ನಾನು
ನಿನ್ನ ಲಕ್ಷ್ಯದಲ್ಲಿಟ್ಟು ಮುಗ್ಗರಿಸಿ ಬಿದ್ದೆ.

ಎಲ್ಲಿ ಹೋದರೂ ಒಂದೆಡೆ ಸೇರಬೇಕಲ್ಲ,
ನೀನೇನೋ ಓಡಿ ಎಲ್ಲೋ ಸೇರಿಬಿಟ್ಟೆ;
ಎಲ್ಲಿ ಬಂದೆನೆಂದು ನಾನು ನೋಡುವಾಗ,
ದಾರಿ ಮುಗಿದುದ ಕಂಡು ಬೆಚ್ಚಿಬಿದ್ದೆ.

ಮುಂದೆ ನಡೆಯುವಂತಿಲ್ಲ,
ನಿನ್ನ ಮರೆಯುವಂತಿಲ್ಲ,
ನಡೆದ ದಾರಿಯೋ ಕತ್ತಲೋ ಕತ್ತಲು,
ಹಿಂತಿರುಗುವ ಹಾಗೂ ಇಲ್ಲ.

ಇಲ್ಲಿ ಉಳಿಯುವಂತಿಲ್ಲ,
ಮುಳ್ಳುತಂತಿಬೇಲಿ ಅದೇನೇ ಇರಲಿ,
ನನ್ನ ದಾರಿಯ ಹುಡುಕಿ
ಕಾಲದಗುಂಟ ನಡೆಯಲೇ ಬೇಕು.

ನಿನ್ನನಿಲ್ಲಿಯೆ ಸದಾ ಬಿಟ್ಟುಕೊಟ್ಟು
ನನ್ನ ದಾರಿಯ ನಡೆಯಬೇಕು;
ಬೆನ್ನು ತಿರುಗಿ ನಿನಗೆ
ನಾನು ದೂರ ಓಡಬೇಕು.

ನೀನೊಂದು ತೀರ ಸೇರಿದ ಬಳಿಕ
ದೂರನಡೆಯುವ ನೋವು ನನಗಿಲ್ಲ,
ಮುಂದಿನ ದಾರಿಯ ಚಿಂತೆ
ನನ್ನನ್ನಾವರಿಸಿದೆ ನೋಡು.

ಏಕೋ ನಿನ್ನನನ್ನನ್ನಾವರಿಸಿದ ಬಳ್ಳಿ
ಕಡಿದುಹೋದುದರ ಪ್ರಜ್ಞೆ
ನನ್ನೊಳಗೊತ್ತರಿಸಿ ನನ್ನ
ತಬ್ಬಿಬ್ಬುಗೊಳಿಸಿದೆ ಈಗ.

ನಿನ್ನ ಬೆಂಬಿಡದೋಡಿದ ನಾನು,
ದೂರ, ಈಗ ಆದಷ್ಟು ದೂರ ಓಡಬೇಕು,
ಮತ್ತೆ ಪುನಃ ಒಗ್ಗೂಡದ ಹಾಗೆ
ದೂರವಾಗುಳಿಯುವುವ ಆಶೆ.

ಅದೇನೋ ಹೊರೆ ಕೆಳಗಿಳಿದಂತೆ,
ಭಾರ ಭುಜದಿಂದಿಳಿದಂತೆ
ತೀವ್ರ ನೆಮ್ಮದಿ ಈಗ,
ಇದೊಂದು ವಿಸ್ಮಯದ ಗಂಟು.

ಮುಂದಿನದೇನೇ ಇರಲಿ,
ಹಿಂದಿನದನ್ನು ಮರೆಯುವಂತಿಲ್ಲ,
ನಾನೆಷ್ಟೋ ಓಡಲಿ ದೂರ,
ಬಳ್ಳಿ ಪೂರ್ತಿ ಕಡಿಯುವಂತಿಲ್ಲ.

ಹಿಂದೆ ಓಡುವುದೊಂದೆ ಸರಿ,
ನಾನು ಸದಾ ಸಿಧ್ಧ,
ನಿನ್ನ ಪಾಲಿನದನ್ನು ನಿನಗಿತ್ತು
ಓಡುವುದಕೆ ಬದ್ಧ.

ಮತ್ತೆ ಹಿಂತಿರುಗುವುದಿಲ್ಲ,
ನಡೆದುದನ್ನು ಮರೆಯುವ ಹಾಗೂ ಇಲ್ಲ,
ಅಷ್ಟಷ್ಟಕ್ಕೆ ಅಷ್ಟಷ್ಟಿಟ್ಟು,
ನಾನು ದೂರ ಸರಿಯಬೇಕು.

ತಾಳತಪ್ಪಿದ ಲೋಕದಲ್ಲಿ
ಥಕ ಥೈ ಥಕ ಥೈ ತಾಳಹಾಕಿದ ನಾನು
ಬಿದ್ದ ತಪ್ಪಿಗೆ ಕಾಣಿಕೆಕೊಟ್ಟು
ನನ್ನ ದಾರಿ ನಡೆಯಬೇಕು.

Monday, November 20, 2017
Topic(s) of this poem: life,love,philosophy
COMMENTS OF THE POEM
READ THIS POEM IN OTHER LANGUAGES
Close
Error Success