ಪ್ರಿಯ ಗೀತೆ Poem by Praveen Kumar in Divya Belaku

ಪ್ರಿಯ ಗೀತೆ

Rating: 5.0

ನನ್ನ ಪ್ರಿಯ ನೆನಪು ನೀನು, ಎಷ್ಟು ದೂರವಿದ್ದರೇನು,
ನೀತಿ ನಡತೆ ಭೀತಿಯಿಂದ ದೂರ ದೂರ ಸರಿದರೇನು,
ದೀಪ-ಬೆಳಕು, ಹೂವು-ಗಂಧ, ಚಿನ್ನ-ಹೊಳಪು, ಭೂಮಿ-ಸೆಳೆತ
ಎಷ್ಟು ಕಾಲ ದೂರ ದೂರ ಹೀಗೆ ಬಿಟ್ಟು ಇರಲು ಸಾಧ್ಯ?
ಎಷ್ಟು ದೂರ ದೂರ ನನ್ನ ನೀನು ಹೀಗೆ ಇಡಲು ಸಾಧ್ಯ?
ಎಷ್ಟು ಕಾಲ ಸೂರ್ಯ ತನ್ನ ಬೆಳಕು ಹಗಲು ಅಡಗಿಸಿಟ್ಟು,
ಎಷ್ಟು ದೂರ ಬೆಳಕು ತನ್ನ ವೇಗ ಪಥವ ಮುಚ್ಚಿಟ್ಟು,
ವಿಶ್ವಧರ್ಮ ಮೀರಿ ನಿಂತು ತಾನು ತಾನೆ ನಿಲ್ಲಬಹುದು?
ಇಷ್ಟು ಕಾಲ ಆದ ಮೇಲೆ, ಇಷ್ಟು ದೂರ ನಡೆದ ಮೇಲೆ,
ಅದೆಷ್ಟು ಕಷ್ಟ ಆದರೇನು, ಸೋಲು ನಷ್ಟ ಬಂದರೇನು,
ಇಂದಲ್ಲ ನಾಳೆ ನೀನು ನನ್ನ ಹುಡುಕಿ ಬಳಿಗೆ ಬರಲೆ ಬೇಕು,
ಬಂದು ನನ್ನ ಸೇರಿ ಬಿಟ್ಟು, ಜೀವ ಜೀವ ಬೆರೆಯಬೇಕು;
ದೇಹ ದೇಹ ಬೆಸೆದುಕೊಂಡು, ನಾನು ನೀನು ಐಕ್ಯಗೊಂಡು
ನನ್ನ ನಿನಗೆ, ನಿನ್ನ ನನಗೆ ಕೊಟ್ಟು ಕೊಟ್ಟು ಪಡೆದು ಪಡೆದು
ದಿವ್ಯ ಸುಖದ ನೆರಳಿನಲ್ಲಿ ಅಗೆದು ಬಗೆದು ಬೆರೆತುಕೊಂಡು
ಉರುಳಿ ತೆವಳಿ, ತೆವಳಿ ಉರುಳಿ, ಅಪ್ಪಿ ಹಿಡಿದು, ಹೀರಿ ಹೀರಿ,
ನೀನು ನಾನು, ನಾನು ನೀನು ಆಗಿ ಎಲ್ಲ ಮರೆಯಬೇಕು;
ಆಳ ಆಳ ಇಳಿದು ನಾವು, ನಿನ್ನ ನನ್ನ ತಿರುಳು ತಲಪಿ
ದಿವ್ಯ ಬೆಳಕು ಸಾಕ್ಷ್ಯಿಯಲ್ಲಿ ಭವ್ಯವಾಗಿ ಬೆಸೆಯಬೇಕು.

ನೀನು ಅಲ್ಲಿ, ನಾನು ಇಲ್ಲಿ, ಯಾವ ಸೀಮೆ ತಿರುವು ನ್ಯಾಯ?
ಅಲ್ಲಿ ನೀನು ನೋವಿನಲ್ಲಿ ಹಗಲು ರಾತ್ರಿ ಮರುಗುವಾಗ,
ಇದ್ದುದನ್ನು ಬಿಟ್ಟುಕೊಟ್ಟು, ನನ್ನ ಧ್ಯಾನದಲ್ಲಿ ನಿಂತು,
ಬಂಧು ಲಗ್ನ ಬಂಧ ಬೇಡ, ವೃದ್ಧಿ ಖ್ಯಾತಿ ಸುಖವು ಬೇಡ,
ತಲಪದಂತ ಗುರಿಯೆ ತನ್ನ ಬದುಕು ತಪಸು ಎಂದು ಬಗೆದು
ಯಾಕೆ ನನ್ನ ಪ್ರಿಯ ಜೀವ ಹೀಗೆ ನೀನು ಚಿವುಟುವೆ?
ಯಾಕೆ ನನ್ನ ಆತ್ಮವನ್ನು ನೋವಿನಿಂದ ಕಿವುಚುವೆ?
ಇತ್ತ ನೋಡು, ನಾನು ಇಲ್ಲಿ ನಿನ್ನ ನೆನಪಿನಾಳದಲ್ಲಿ,
ಎಲ್ಲ ಮರೆತು, ನಿನ್ನ ದಾರಿ ಹಗಲು ರಾತ್ರಿ ಕಾದುಕೊಂಡು
ಜೀವನ್ಮ್ರತ ಜೀವಿಯಾಗಿ ಹಗಲು ರಾತ್ರಿ ಗುಣಿಸುವೆ;
ಬಂಧು ಬೇಡ, ಬಳಗ ಬೇಡ, ನಿನ್ನ ಹೊರತು ಬದುಕು ಬೇಡ,
ನೀನು ನನ್ನ ಧ್ಯೇಯವೆಂದು, ಒಂದೆ ಧ್ಯಾನದಿಂದ ನಿನ್ನ
ನನ್ನ ತುಂಬ ತುಂಬಿಕೊಂಡು, ದೂರದಾಶೆಯಿಟ್ಟುಕೊಂಡು,
ಮಸಣಭೂಮಿಯಲ್ಲಿ ನಾನು ಮುಂದೆ ಮುಂದೆ ನಡೆಯುವೆ;
ಎಷ್ಟು ವರ್ಷ ಹೀಗೆ ನಾವು ನೋವು ಶಿಕ್ಷೆಯಲ್ಲಿ ಬೆಂದು,
ಎಷ್ಟು ದೂರ ಕ್ರಮಿಸಬೇಕು, ವಿರಹ ಬೇಗೆ ಸಹಿಸಬೇಕು?
ಸಾಕು ಇಷ್ಟು ಪಟ್ಟ ಪಾಡು, ಬೇಗ ಬಂದು ಮುಂದೆ ನಿಲ್ಲು,
ದಾಹ ಭರಿತ ನಾನು ನಿನ್ನ ಸುಡುವ ಸಹರ ಭೂಮಿಯಂತೆ
ಮೈಯನೆಲ್ಲ ತಡವಿ ಹಿಡಿದು, ಹೀರಿ ಹಿಂಗುವುದನು ನೋಡು.

ನನಗೆ ನೀನು ಬೇಕೆ ಬೇಕು, ನಿನಗೆ ನಾನು ಬೇಕೆ ಬೇಕು,
ನಿನ್ನ ಬಿಟ್ಟು ನಾನು ಇಲ್ಲ, ನನ್ನ ಬಿಟ್ಟು ನೀನು ಇಲ್ಲ;
ಈ ವಿಶ್ವ ನಿಯಮ ಮರೆತು ಹೇಗೆ ವಿಶ್ವಕ್ರಿಯೆ ನಡೆವುದು?
ಕಾಲವಿಧಿಯು ವಿಘ್ನರಾಶಿ ತಂದು ಮುಂದೆ ಹೀಗೆ ಇಟ್ಟು
ನಿನ್ನ ನನ್ನ ನೋವಿನಲ್ಲಿ ಏನೊ ಗುರಿಯ ಕಂಡಿದೆ;
ಸ್ವಲ್ಪ ತಾಳು, ಕಾಲಗತಿಯು ನಿನ್ನ ನನ್ನ ಬೆಸೆವವರೆಗೆ,
ಮತ್ತೆ ನೋಡು ನಿನ್ನ ನನ್ನ ಪ್ರೀತಿ ರೀತಿ, ಬೆರೆತ ಮೊರೆತ:
ನಮ್ಮ ಬೆಂಕಿ ಉರಿಯುವಾಗ, ತಿಳಿಯದಂತಾವೇಗದಿಂದ
ಬಯಕೆ ಭರತದಲ್ಲಿ ನಾನು ನಿನ್ನ ಚೆಲುವಿನಾಶೆಯಿಂದ
ತೆಕ್ಕೆ ತುಂಬ ಹಿಡಿದು ನಿನ್ನ, ಮತ್ತೆ ಮತ್ತೆ ಎದೆಗೆ ಒತ್ತಿ,
ತುಟಿಯ ತುಟಿಗೆ ಒತ್ತಿ ಒತ್ತಿ, ಮತ್ತೆ ಮುಖದ ತುಂಬ ಒತ್ತಿ,
ಮೆಲ್ಲ ಮೆಲ್ಲ ಎದೆಗೆ ಇಳಿದು, ನಿನ್ನನನುಭವಿಸುವೆನು, ಚಿನ್ನ;
ಸೆರಗು ಬಿಸುಟು, ಕವಚ ಬಿಚ್ಚಿ, ನೀನು ಬರಿ ಮೈ ನನಗೆ ಕೊಟ್ಟು
ನನ್ನ ಬಿರುಸು ಮೊರೆತದಲ್ಲಿ, ಸುಖದ ಹರಿತ ಹಿಡಿತದಲ್ಲಿ,
ಮತ್ತೆ ಮತ್ತೆ ಒತ್ತಿ ಬಂದು, ಎರಡು ದೇಹ ಬೆರೆಯುವಾಗ,
ಸುತ್ತಿ ಸುತ್ತಿ ನೀನು ಹಿಡಿದು, ಒಳಗೆ ಒಳಗೆ ಸೆಳೆಯುವಾಗ,
ನಿನ್ನ ಪ್ರೀತಿ ಕಣ್ಣಿನಲ್ಲಿ ಬಯಕೆ ಬೆಂಕಿ ಉರಿಯುವಾಗ,
ನಿನ್ನ ಚಿನ್ನ ಮೈಯ ಹೊಳಪು ಕೆಂಪು ಕೆಂಪು ಹೊಳೆಯುವಾಗ,
ಹೇಗೆ ನಾನು ನನ್ನ ಬಯಕೆ ಹಿಡಿತದಲ್ಲಿ ಇಡಲು ಸಾಧ್ಯ?

ಶುದ್ಧ ಹೊಳಪಿನಿಂದ ಹೊಳೆವ ನಿನ್ನ ದೇಹ ಬೆವರು ಧಾರೆ
ನನ್ನಲ್ಲಂಟಿ ಬೆರೆತು ಹೊಸೆದು ನನ್ನಲ್ಲೊಂದಾಯಿತು,
ಮಲ್ಲಿಗೆಯ ಆ ಮಾದಕತೆಯ ನಿನ್ನ ಸಿಹಿ ಮೈಯ ಸ್ವಾದ
ಹೀರಿ ಹೀರಿ ನಾನು ನಿನ್ನ ನನ್ನ ಒಳಗೆ ತುಂಬಿದೆ;
ಮೈಯ ಕೊಟ್ಟು, ನೀ ಕಣ್ಣು ಮುಚ್ಚಿ, ಸುಖದ ಮೇರು ಏರುವಾಗ,
ಎಲ್ಲಿ ಮುಟ್ಟಲಲ್ಲಿ ನಾನು, ನಿನ್ನ ದೇಹ ಕಾದ ಚಿನ್ನ,
ಹಿತದ ನವಿರು ಮಖಮಲ್ಲಿನಂತೆ ಸುಖವ ಕೊಡುವ ಸಾಗರ,
ನನ್ನ ಪ್ರಿಯ ನೀನು ಆಗ ದೇವಲೋಕ ಸುಂದರಿ;
ಮೆಲ್ಲ ಮೆಲ್ಲ ಎಲ್ಲ ತೆರೆದು, ತೆಗೆದು ಬಗೆದು ನೋಡಿದೆ,
ಮುಟ್ಟಿ ಮುಟ್ಟಿ, ತುಟಿಯ ಒತ್ತಿ, ಪ್ರೀತಿಧಾರೆ ಸುರಿಸಿದೆ;
ಹಿತದ ಸುಯಿಲು ಸರಣಿ ಬಿಟ್ಟು, ಒಂದು ಮಾತು ಬೇರೆ ಇಲ್ಲ,
ನನ್ನ ಪ್ರಿಯ ರಾಣಿ ನೀನು ಪೂರ್ಣ ನನ್ನವಳಾದೆಯೆ;
ನೀನು ನಾನು, ನಾನು ನೀನು, ಆಗ ನೋಡು ಬೇರೆಯಲ್ಲ,
ಎರಡು ದೇಹದಲ್ಲಿ ಇರುವ ಒಂದೆ ಆತ್ಮ ಜೀವವು;
ಬಳ್ಳಿಯಂತೆ ಹೊಸೆದು ನಾವು, ಮೇಲೆ ಮೇಲೆ ಬೆಳೆಯಬೇಕು,
ಒತ್ತಿ ಒತ್ತಿ ಕೂಡಿಕೊಂಡು ವಿಶ್ವ ತುಂಬ ಹಬ್ಬಬೇಕು;
ನಿನ್ನ ನನ್ನ ಸೆಳೆತ ಬಂಧ ಕಾಲಾವರ್ತ ಮೀರಿ ನಿಂತ
ಸೃಷ್ಠಿಕ್ರಿಯೆ ಎಂಬ ಸತ್ಯ ನೀನು ನಾನು ಅರಿಯಬೇಕು;
ಎಲ್ಲೆ ಇರಲಿ, ಹೇಗೆ ಇರಲಿ, ನಮ್ಮ ಬಂಧ ನಿರಂತರ.

ಬೆಂಕಿಯಲ್ಲಿ ಉರಿವ ಚಿನ್ನ ಮತ್ತೆ ಮತ್ತೆ ಹೊಳೆಯುವಂತೆ,
ದೂರ ದೂರ ನಿಂತ ನಮ್ಮ ಬಂಧ ಬೆಸುಗೆ ಬಿಗುವುದು,
ಕಾದು ಕಾದು ನಿಂತ ಹಾಗೆ ಪ್ರೀತಿ ಬಂಧ ಹೊಳೆವುದು.

Tuesday, April 26, 2016
Topic(s) of this poem: love,life
COMMENTS OF THE POEM
Ibrahim Sulaiman 02 July 2016

well written. good poem. i liked it.

0 0 Reply
Vincent Mendonza 01 July 2016

Excellent poem. Full of love passions. Though my fluency in Kannada is limited, I immensely liked this lovely poem. Felicity and rhythmic flow of the poem makes it highly readable and enjoyable

0 0 Reply
Padma Shanbogue 01 July 2016

ತುಂಬ ಸೊಗಸಾದ ಕವನ. ಪ್ರೀತಿ ಭಾವವನ್ನು ಕವಿ ಮನ ಮುಟ್ಟುವ ಹಾಗೆ ಈ ಕವನದಲ್ಲಿ ಮೂಡಿಸಿದ್ದಾರೆ. ಹೃತ್ಪೂರ್ವಕವಾಗಿ ಸೃಷ್ಟಿಸಿರುವ ಕವನ ಇದು. ಕವಿಗೆ ಇಂತಹ ಸೊಗಸಾದ ಕವನವನ್ನು ರಚಿಸಿ ರಸಿಕರಿಗೆ ರಸದೌತಣ ನೀಡಿದಕ್ಕೆ ಕೃತಜ್ಞತೆಗಳು. ಪದ್ಮ

0 0 Reply
READ THIS POEM IN OTHER LANGUAGES
Close
Error Success