ಸಮರಸರು ನಾವು, ಸಮವರ್ತಿಗಳು ನಾವು, ಸಮನ್ವಿತರು,
ಸಮ್ಟ ಸಮೀಹಿತದಿಂದ ಸಮಾಗಮಿಸಿದ ಸಮಾಹಿತರು;
ಎಣ್ಣೆ ದೀಪ, ಗಂಧ ಹೂವಿನ ರೀತಿ ನಮ್ಮ ಬಂಧಭೇದ್ಯ,
ಒಂದರ ಹೊರತು ಮತ್ತೊಂದಸ್ಥಿರ, ನಶ್ವರ, ಕ್ಷಣಿಕ, ಮಿಥ್ಯ.
ಒಂದಾಗಿರುವಾಗ ನಾವು, ಲೋಕ ಸುಂದರ, ಸಮೃಧ್ಧ ಎಲ್ಲ್ಲ,
ಬಿಡಿ ಬಿಡಿ, ಬರೆ ಕಗ್ಗತ್ತಲು, ನೋವು, ಏನೇನೂ ಇಲ್ಲ;
ಪರಸ್ಪರರ ಮೂಲ ಚೇತನರು ನಾವು, ಹುಮ್ಮಸ್ಸು, ಬೆಳಕು,
ನಾವು ಪರಸ್ಪರರ ಸಮರ್ಚನೆ, ಸಮರ್ಪಣೆ, ತ್ಯಾಗ, ಭಾಗ್ಯ.
ದೂರದಲೂ ಸಮವಾಯಕೆ ಸದಾ ಕಾತುರ ಜಾತಕ ಪಕ್ಷ್ಷಿಗಳು,
ಇಹ ಪರದಲ್ಲಿ ಚಿತ್ತ ಸಮಾಲೋಕ ನಮಗೆ ಪರಸ್ಪರರು ಮಾತ್ರ;
ಚಂದ್ರಮನ ಮರೆತು ಬೆಳದಿಂಗಳು ಸಮುಜ್ಜಳಗೊಳುವುದುಂಟೆ?
ಸೂರ್ಯನ ಬಿಟ್ಟು ಭೂಮಿಯಲಿ ದಿನ ಬೆಳಗಾಗುವುದುಂಟೆ?
ನಾವೊಬ್ಬರೊಬ್ಬರಾತ್ಮ, ಮನಸ್ಸು, ಹೃದಯ, ದೇಹ, ಅಸ್ಥಿತ್ವ,
ನಾವೆಲ್ಲಿರಲಿ, ಹೇಗಿರಲಿ, ಇನ್ನೊಬ್ಬರಲೆ ನಮ್ಮ ಸಮಾಗತಸ್ಥಿತ್ವ;
ನಾವು ಲೋಕ ನಾಟಕಕ್ಕಾಗಿ ಮೈತೋರಿದ ದ್ವಿತ್ವ ರೂಪ,
ಈ ದ್ವೈತದ ಸಮುತ್ತರಣಕೆ ಕಾದಿದೆ ಸಮುತ್ತಂಗ ಬಯಕೆ.
ಈ ವಿಘಟನೆಯ ನೋವು ದಿನ ದಿನನುಭವಿಸುವ ನಾವು,
ಮತ್ತೆ ಮಸಣ ಸಮಾಗಮವ ಕಾತುರದಿ ಕಾದಿರುವ ನಾವು,
ಇನ್ನೆಷ್ಟು ಕಾಲವೀ ವಿಯೋಗದಲಿ ದಿನ ದಿನ ನೂಕಬೇಕು,
ನಶ್ವರದೀ ರೌರವದಲ್ಲಿ ಬೆಂದು ಝರ್ಝರಿತರಾಗಬೇಕು?
ಇಂದಲ್ಲ ನಾಳೆ ಒಂದು ದಿನ ಆ ಸುದಿನ ಬರುವುದೆಂದು
ಕಾದು ಕಾದು ತಲಪಿದೆ ಜೀವನದ ಕೊನೆಯ ಸಾಯಂಕಾಲ;
ಹುರುಪು ಕ್ರಮೇಣ ಕುಗ್ಗುತ್ತಿದೆ, ಮೈ ಕೈ ಸೋತು ಜಗ್ಗುತ್ತಿದೆ,
ಆದರೂ ನನ್ನವಳ ಸಮಾಗಮಿಸುವಾಶೆ ಹಸಿರಾಗಿದೆ ಇನ್ನೂ.
ವಿಧಿಗತಿಯಲ್ಲೆ ಸಮುಧ್ಧರಣ ಪ್ರತೀಕ್ಷಿಸುವವರು ನಾವು,
ವಿಡ್ಡೂರದಲಿ ಸುಯೋಗ ಸುಸಂಧಿ ಪರಿಶೋದಿಸುವವರು;
ನೋವುಂಡಷ್ಟು ಮುಂದೆ ಸಮ್ಮೋದ ಸುಖ ಪ್ರಾಪ್ತಿಯೆಂದು
ನೋವು ಒಳಗೊಳಗಿಟ್ಟು ಸಮ್ಮಿಲನವ ಕಾಯುವೆವು ನಾವು.
This poem has not been translated into any other language yet.
I would like to translate this poem