ದೂರದ ತೀರ ತಲಪುವ ತನಕ Poem by Praveen Kumar in Bhavana

ದೂರದ ತೀರ ತಲಪುವ ತನಕ

ಮರೆವಿನ ಮರೆಯಲಿ ನಿಂತು ನೆನಪು
ಕರೆಯುತ್ತಿದೆಯಲ್ಲ ನನ್ನ,
ಎಳೆಎಳೆಯಾಗಿ ಬಿಚ್ಚಿ ಆ ದಿನದ ಕಂಪು
ಹೇಳುತ್ತಿದೆ ಕಳೆದ ಐತಿಹ್ಯವನ್ನ.

ಒಂದೆರಡಲ್ಲ ಅದು ನಲ್ವತ್ತ ಏಳು
ಸಂವತ್ಸರ ಕೆಳಗಿನ ಕತೆಯ ಗೋಳು;
ಹೇಳದೆ ಕೇಳದೆ ಅವರು ಥಟ್ಟನೆ ಬಂದಾಗ,
ನನಗಾದ ಆನಂದ ಅಂತಿಂತಹದಲ್ಲ,
ನೋವು ತರುವವರಲ್ಲ, ಸುಮ್ಮನೆ ಬರುವವರಲ್ಲ,
ಮನತುಂಬಿ ಅವರ ಸತ್ಕರಿಸಿದೆ ನಾನು;
ಒಳಗಿದ್ದುದನ್ನು ಒಳಗೊಳಗೇ ಅದುಮಿ,
ಮುಂದಿನವಾಂತರದ ಸಂಕೇತ ಕೊಡದೆ,
ಬೆರೆತು, ನನ್ನ ಸರಸಸಲ್ಲಾಪಕ್ಕೆಳೆದು,
ತಕ್ಕ ಸಮಯದ ವಿಷ ಘಳಿಗೆಯ ಕಾದು,
ಒಳಗೊಳಗೇ ಚಡಪಡಿಸುವುದ ನಾ ಕಾಣಲಿಲ್ಲ,
ನಡೆದುದರ ಗೊಡವೆಯೇ ನನಗಿರಲಿಲ್ಲ.

ಮರೆವಿನ ಮರೆಯಲಿ ನಿಂತು ನೆನಪು
ಕರೆಯುತ್ತಿದೆಯಲ್ಲ ನನ್ನ,
ಎಳೆಎಳೆಯಾಗಿ ಬಿಚ್ಚಿ ಆ ದಿನದ ಕಂಪು
ಹೇಳುತ್ತಿದೆ ಕಳೆದ ಐತಿಹ್ಯವನ್ನ.

ಮುಂದಿನ ನೋವು ಆಘಾತದ ಆಳ ತಿಳಿದಿದ್ದ ಅವರು,
ನನ್ನ ಜೀವನಾದ್ಯಂತದ ತಿರುವಿನ ಸೂತ್ರ ಹಿಡಿದೂ
ನಗುವಿನ ಮರೆಯಲ್ಲೇ ಅಳುವುದ ನಾ ಕಾಣಲಿಲ್ಲ,
ನನ್ನುತ್ಸಾಹ ಉಲ್ಲಾಸ ಕಂಡು ಅವರಿಗೇನಾಗಿರಲಿಕ್ಕಿಲ್ಲ?
ಅಲ್ಲಿಂದ ಜೊತೆಜೊತೆ ಹೊರ ಹೊರಟ ನಾವು
ಪ್ರಾತಃದ ತಿಂಡಿತೀರ್ಥ ವಿಧಿ ವಿನೋದ ಮುಗಿಸಿ,
ರುಗ್ನಾಲಯದ ಶೀಘ್ರ ಹಾದಿಯ ಬಳಸಿ, ಮುಗಿಸಿ,
ಹೊರ ನಡೆದುದೇ ತಡ, ಒಳಗಿದ್ದುದನು ಹೊರಗೆ
ಹಿತಮಿತ ಶಬ್ದದಲಿ, ಜರ್ಜರಿತ ಮಾತಿನಲಿ,
ಅವರು ಹೇಳಿದುದೊಂದೆ ಗೊತ್ತು, ಕುಸಿದೆ ನಾನು,
ಹೀಗಾಗುತ್ತದೆಂದು ಗೊತ್ತೆಂದು ಹೇಳಿದುದು ನೆನಪು;
ಅಳು ಕಣ್ಣೀರಿಲ್ಲ, ಮಾತು ಆರ್ಭಟಗಳ ಗಾಳಿಯೇ ಇಲ್ಲ,
ಎಲೆ ಬಸಳೆಯಂತೆ ಕುಸಿದು ಸ್ಥಬ್ದನಾದೆ ನಾನು.

ಮರೆವಿನ ಮರೆಯಲಿ ನಿಂತು ನೆನಪು
ಕರೆಯುತ್ತಿದೆಯಲ್ಲ ನನ್ನ,
ಎಳೆಎಳೆಯಾಗಿ ಬಿಚ್ಚಿ ಆ ದಿನದ ಕಂಪು
ಹೇಳುತ್ತಿದೆ ಕಳೆದ ಐತಿಹ್ಯವನ್ನ.

ಏನೋ ಮೋಡ ಮುಸುಕಿದ ಹಾಗೆ, ನಿಷ್ಕ್ರಿಯ, ಮಬ್ಬು,
ನೋವು ಸಂತಾಪಗಳು ನನ್ನ ಬಳಿ ಸುಳಿಯಲೇ ಇಲ್ಲ,
ಆಶೆ ನಿರಾಶೆಯೂ ಇಲ್ಲ, ಮುಂದಿನ ಚಿಂತೆಯೂ ಇಲ್ಲ,
ಕಳೆದ ದಿನಗಳ ವಾರ್ತೆ ನನಗೆ ನೆನಪಾಗಲೇ ಇಲ್ಲ,
ಯಂತ್ರ ಮಂತ್ರಿತನಾಗಿ ದಿನವಿಡೀ ನಡೆದುದೆ ನೆನಪು;
ಆಗೊಮ್ಮೆ ಈಗೊಮ್ಮೆ ಎಲ್ಲೋ ದೂರ ನಡೆವ ಮನಸು,
ಎಲ್ಲಿ ಹೇಗೆ ಎಂಬ ಯೋಜನೆಯ ವ್ಯವಧಾನವೂ ಇಲ್ಲ,
ವರುಷಗಳೆ ಹೀಗೆ ಸಾಗಿದವು ಮುಂದೆ ಮುಂದೆ;
ಬಿದ್ದರೆ ನೋವಿಲ್ಲ, ಎದ್ದರೆ ಸಂತೋಷ ಸುಳಿಯಲಿಲ್ಲ,
ಅವಮಾನ ಗೌರವಗಳ ಹೊಯಿಲು ನನ್ನ ಬದಲಿಸಲಿಲ್ಲ;
ಬದುಕುವುದಕೆ ಬದುಕಬೇಕೆಂಬ ಮಂತ್ರದಿಂದ
ಸಾಗುತ್ತಿದೆ ನಾವೆ ದೂರದ ತೀರ ತಲಪುವ ತನಕ.

ಮರೆವಿನ ಮರೆಯಲಿ ನಿಂತು ನೆನಪು
ಕರೆಯುತ್ತಿದೆಯಲ್ಲ ನನ್ನ,
ಎಳೆಎಳೆಯಾಗಿ ಬಿಚ್ಚಿ ಆ ದಿನದ ಕಂಪು
ಹೇಳುತ್ತಿದೆ ಕಳೆದ ಐತಿಹ್ಯವನ್ನ.

Friday, July 14, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success