ರಸ್ತೆಯ ಪಕ್ಕದ ಮನೆ Poem by Venkatesh Davangere

ರಸ್ತೆಯ ಪಕ್ಕದ ಮನೆ

ಅಲ್ಲಿ ಏಕಾಂತ ಹೃದಯಗಳು ತಮ್ಮನ್ನು ತಾವೇ ಕಳೆದುಕೊಂಡು
ತಮ್ಮ ಪರಿಧಿಯಲ್ಲೇ ಬಂದಿಸಿಕೊಂಡು ಕುಳಿತಿವೆ:
ಆಕಾಶದಲ್ಲಿ ಯಾರ ಜೊತೆಗೂ ಸೇರದೆ ಮುದಿರಿಕೊಂಡು
ಕುಳಿತುಕೊಂಡಿರುವ ನಕ್ಷತ್ರಗಳಂತ ಆತ್ಮಗಳಿವೆ:
ಇದುವರೆಗೂ ಇರದ ರಸ್ತೆಯನ್ನ ಬೇಧಿಸಿದ
ಧಗಧಗಿಸುವ ಮೊತ್ತ ಮೊದಲ ಆಧ್ಯ ಆತ್ಮಗಳಿವೆ-
ಆದರೆ, ನನಗೆ ರಸ್ತೆ ಪಕ್ಕ ಮನೆ ಮಾಡಿಕೊಂಡು
ಮನುಷ್ಯನ ಜೊತೆಗೂಡಿ ಮನುಷ್ಯನಿಗೆ ಸ್ನೇಹಿತನಾಗುವ ಆಸೆ.

ಎಲ್ಲ ರೀತಿಯ, ಜಾತಿಯ, ವರ್ಣದ ಜನರು ಹೋಗುವ
ರಸ್ತೆಯ ಪಕ್ಕ ಮನೆ ಮಾಡಿಕೊಂಡು ಜೀವಿಸುವಾಸೆ -
ನನ್ನಷ್ಟೇ ಒಳ್ಳೆಯ ಮನುಷ್ಯರು ಮತ್ತು ನನ್ನಷ್ಟೇ ಕೆಟ್ಟ
ಮನುಷ್ಯರ ಜೊತೆಗೂಡುವಾಸೆ-
ನಾನು ನ್ಯಾಯಾಧೀಶನ ಸ್ಥಾನದಲ್ಲಿ ಕೂರಲಾರೆ,
ಅಥವಾ, ಹೋಗುವ ಬರುವ ಜನರ ಮೇಲೆ ಸಿನಿಕನಾಗೆ ಶಪಿಸಲಾರೆ-
ಆದರೆ, ನನಗೆ ರಸ್ತೆ ಪಕ್ಕ ಮನೆ ಮಾಡಿಕೊಂಡು
ಮನುಷ್ಯನ ಜೊತೆಗೂಡಿ ಮನುಷ್ಯನಿಗೆ ಸ್ನೇಹಿತನಾಗುವ ಆಸೆ.

ನನ್ನ ಮನೆಯಿಂದ ರಸ್ತೆಯ ಪಕ್ಕ ಆಗಾಗ ಕಣ್ಣು ಹಾಯಿಸುತ್ತೇನೆ.
ಬೃಹದಾದ ರಸ್ತೆಯ ಪಕ್ಕ ಕಣ್ಣು ಹಾಯಿಸಿದಾಗ-
ಅತ್ಯುಸ್ತಾಹದ ನೀರಿಕ್ಷೆಗಳನ್ನ ಇಟ್ಟುಕುಂಡು ನಡೆದಾಡುವ ಜನರನ್ನೂ
ಸಪ್ಪೆಯಾದ ಮುಖವನ್ನೊತ್ತು, ನೀರಿಕ್ಷೆಗಳಿಲ್ಲದೆ ಕಲಹ ಮಾಡಿಕೊಂಡು
ನಡೆದಾಡುವ ಜನರನ್ನು ಸಹ ನೋಡಿದ್ದೇನೆ-
ಆದರೆ ಒಂದು ಅನಂತ ಯೋಜನೆಯ ಭಾಗದಲ್ಲಿ ಮುಳುಗಿರುವ
ಆ ಜನಗಳ ನಗು ಮತ್ತು ಅಳುವಿನಿಂದ ನಾನೆಂದು ದೂರ ಸರಿಯಲಾರೆ-
ಆದರೂ, ನನಗೆ ರಸ್ತೆ ಪಕ್ಕ ಮನೆ ಮಾಡಿಕೊಂಡು
ಮನುಷ್ಯನ ಜೊತೆಗೂಡಿ ಮನುಷ್ಯನಿಗೆ ಸ್ನೇಹಿತನಾಗುವ ಆಸೆ.

ನನಗೆ ಗೊತ್ತು ಮುಂದೆ ಮರ-ಗಿಡಗಳೊಂದಿಗಿರುವ ಹುಲ್ಲುಗಾವಲಿದೆಯೆಂದು,
ಹತ್ತಲು ಪ್ರಯಾಸಪಡುವ ಬೆಟ್ಟ ಗುಡ್ಡಗಳಿವೆಯೆಂದು,
ಒಂದು ದೀರ್ಘ ಮದ್ಯಾನದಿಂದ ಕತ್ತಲು ಅವರಿಸುವವರೆಗೂ
ಛೇದಿಸಿಕೊಂಡು ಸಾಗುವ ಬೃಹತ್ತಾದ ರಸ್ತೆಯಿದೆಂದು,
ಆದರೆ, ಆ ರಸ್ತೆಯಲ್ಲಿ ನಡೆವ ಜನರ ಸಂತೋಷ ನನ್ನ ಸಂತೋಷವು
ಅಳುತ್ತ, ನರಳುತ್ತಾ ನಡೆವ ಅಪರಿಚಿತ ಜನರ ಸಂಕಟವೂ ನನ್ನವೇ ಎಂದುಕೊಳ್ಳುತ್ತೇನೆ
ಒಂಟಿಯಾಗಿ, ಮನುಷ್ಯನ ಜೊತೆಗೂಡಿ ಮನುಷ್ಯನಾಗದೇ
ರಸ್ತೆಯ ಪಕ್ಕದ ಮನೆಯಲ್ಲಿ ನಾನೆಂದೂ ವಾಸ ಮಾಡಲಾರೆ.

ಇಗೋ ಇಲ್ಲಿ- ಸರ್ವ ಜನಾಂಗವು ನಡೆವ ರಸ್ತೆಯ ಪಕ್ಕದ
ನನ್ನ ಮನೆಯಲ್ಲಿಯೇ ಜೀವಿಸುವಾಸೆ-
ಕೆಲವರು ಒಳ್ಳೆವರು, ಕೆಲವರು ಕೆಟ್ಟವರು, ಕೆಲವರು ಅಶಕ್ತರು
ಇನ್ನು ಕೆಲವರು ಶಕ್ತರು, ಬುದ್ದಿವಂತರು, ಮೂರ್ಖರು- ನನ್ನ ಹಾಗೆಯೇ!
ಹಾಗಿದ್ದಮೇಲೆ ನಾನೇಕೆ ನ್ಯಾಯಾಧೀಶನ ಸ್ಥಾನದಲ್ಲಿ ಕೂರಬೇಕು?
ಸಿನಿಕನ ಹಾಗೆ ನಾನೇಕೆ ಅವರನ್ನು ಶಪಿಸಲಿ.?
ಅದಕ್ಕಾಗಿಯೇ, ನನ್ನ ರಸ್ತೆಯ ಪಕ್ಕದ ಮನೆಯಲ್ಲಿ ಕೂತು
ಮನುಷ್ಯನ ಜೊತೆಗೂಡಿ ಮನುಷ್ಯನಿಗೆ ಸ್ನೇಹಿತನಾಗುವ ಆಸೆ.

This is a translation of the poem The House By The Side Of The Road by Sam Walter Foss
Sunday, July 12, 2020
Topic(s) of this poem: human
COMMENTS OF THE POEM
Close
Error Success