ಬೆಳಗಾಗುತಿತ್ತು ಅಂದು,
ಸಂಜೆಯಾಗಿದೆ ಇಂದು,
ದಿನ ಹೇಗೆ ಕಳೆಯಿತೆಂದೆ ತಿಳಿಯಲಿಲ್ಲ,
ಹಗಲು ಹೆಗಲುಕೊಟ್ಟದ್ದೆ ಹೊಳೆಯಲಿಲ್ಲ.
ಅದು ದಿನ ಬೆಳಗಾಗುವ ಹೊಳಪು,
ಇದು ಕತ್ತಲಡರುವ ಜೊಂಪು,
ಮಧ್ಯದಲ್ಲಿದ್ದ ಆ ಕೋಲಾಹಲ ಸನ್ಮಾನ,
ಈಗ ಬರಿಯ ಮರೀಚಿಕೆ, ಕನಸು, ಮೌನ.
ಅಂದು ಎವರೆಸ್ಟಿನ ಎಳೆತ,
ಇಂದು ಪ್ರಪಾತದ ಸೆಳೆತ,
ಮೇಲೇರಿ ಕೆಳಗಿಳಿದದ್ದೆ ಒಂದು ಆಟ,
ಕೆಳಗಿಳಿದು ಮೇಲೇರಿದ್ದೆ ದೊಡ್ಡ ಓಟ.
ಹಗಲಿನ ಬೇಗೆ ಬೆವರು ಇತ್ತು,
ಈಗ ಚಳಿಯಲ್ಲಿ ಸತ್ತು ಸತ್ತು
ಹೀಗೇಕಾಯಿತೆಂದು ಒಳಗೊಳಗೆನೆ ಬೇನೆ,
ಪ್ರಪಂಚದ ನಿಷ್ಠುರ ನಿಯಮ ಇದು ತಾನೆ?
ಆಗ ಎರಡು ಒಂದಾಗುತಿತ್ತು ಬೇಗ,
ಎರಡು ಮೂರುಗೊಳಿಸುವ ಆವೇಗ;
ಈಗ ಹತ್ತ ಒಂದಕ್ಕೆನೆ ನಿಲ್ಲಿಸುವ ತವತವಕ,
ಇನ್ನು ಹೀಗೆ ಬದುಕುವುದೆ ಕಷ್ಟ ಕೊನೆತನಕ.
ಕೆಸರಲ್ಲೂ ಮೊಸರು ಕಂಡ ದಿನ,
ಕಂಡಲ್ಲೆಲ್ಲ ಸುಂದಸುಂದರ ವನ,
ಈಗ ನೆರಳಿಗೆ ಬಯಸುತ್ತಿದೆ ನನ್ನ ಜೀವ,
ಬತ್ತಿನಿಂತಿದೆ ಒಳಗೊಳಗಿದ್ದ ಸುಂದರ ಭಾವ.
ಅದು ಸುಂದರ ಮಧುರ ಮಿಡಿತ,
ಇದು ಹೆಡಮುರಿ ಕಟ್ಟಿದ ಹಿಡಿತ,
ಬರಿದು ಬಾವಿಯಲಿ ನೀರಿನ ಒರತೆ ಉಂಟೆ?
ಸೊರಗಿದ ಹೂವು ಮತ್ತೆ ಚಿಗುರುವುದುಂಟೆ?
ಅಂದು ಹೆಜ್ಜೆತಪ್ಪಿ ಎಡವಿದ್ದೆ ಹೆಚ್ಚು,
ಆದರೂ ಒಳಗೊಳಗೆ ಏನೋ ಹುಚ್ಚು;
ಮೇಲೆದ್ದು ಮೈತಡವಿ ನಾನು ಮತ್ತೆ ಓಡುತ್ತಿದ್ದೆ,
ಎಡವದಿದ್ದರೂ ಇಂದು ಮೇಲೇಳುವುದು ಕಷ್ಟಸಾಧ್ಯ.
ಅದು ಹುಚ್ಚುಚ್ಚು ಭರವಸೆಗಳ ದಿನ,
ಕಂಡವರೆಲ್ಲ ಹಿತವರು ಒಳ್ಳೊಳ್ಳೆ ಜನ;
ಆ ಆಶೆ ಹಾರೈಕೆ ಧಪಧಪನೆ ಕೆಳಗುರುಳಿದಂತೆ,
ಬೆಂಕಿಯಾರಿದರೂ ಒಳಗೊಳಗೆನೆ ಬೆಳೆದು ನಿಂತೆ.
This poem has not been translated into any other language yet.
I would like to translate this poem
Sorry Praveen, Kannada gotthilla