ಅಸ್ಖಲಿತ ಚೆಲುವೆ Poem by Praveen Kumar in Divya Belaku

ಅಸ್ಖಲಿತ ಚೆಲುವೆ

ನೀನು ಅಸ್ಖಲಿತ ಚೆಲುವೆ, ಓ ನನ್ನ ಮುದ್ದು ಒಲವೆ,
ನಿನ್ನ ಮೀರಿದ ಚೆಲುವು ಬೇರೆಲ್ಲಾದರೂ ಉಂಟೆ!
ಇಹಪರ ಕಾಲಗತಿ ಮೀರಿ ಹುಡುಕಾಡಿದೆ ನಾನು,
ನಿನ್ನ ಸರಿಸಾಠಿ ಕಾಲಗರ್ಭದಡಿಯೂ ಕಾಣಲಿಲ್ಲ.

ನಿನ್ನದು ಇಹಪರ ಮೀರಿದ ಆಧ್ಯಾತ್ಮಿಕ ಚೆಲುವು,
ಅದೂ ಇದೂ ಬೆಸೆತ ಕೌತುಕದ ಉತ್ತುಂಗ ಶಿಖರ;
ಚೆಲುವು ಲಕ್ಷಣದ ಚರಮಮಿತಿ ಚೌಕಟ್ಟು ನೀನು,
ಚೆಲುವು ಪ್ರಸ್ಥಾನದ ಲಕ್ಷ್ಯ, ದಿಗಂತದಂಚು ನೀನು.

ನಿನ್ನೋಲವೋ, ಚೆಲುವನೂ ಮೀರಿದಸ್ಖಲಿತ ಪಸರು,
ಗಂಗೋತ್ರಿ ದುಮುಕುವ ಗಂಗೆಯ ಪುಣ್ಯ ಪ್ರವಾಹ;
ಕೈಲಾಸದೆತ್ತರದಿಂದ ಈ ಪಾಮರನತ್ತ ಹರಿವ ಒಲವು
ತೃಪ್ತಿ ಶಾಂತಿಯ ಒರತೆ, ಸಮರಸತೆಯ ಜಲಪಾತ.

ನಿನ್ನೊಲವಿನ ಪ್ರವಾಹದಡಿ ಹರಿವ ತರಗೆಲೆ ನಾನು,
ನಿನ್ನೊಲವಿನ ಸಿಹಿಯಲ್ಲಿ ನನ್ನತನವನ್ನೇಲ್ಲೋ ಒಗೆದು,
ನಿನ್ನೊಡನೆ ಕಲೆತು ಬೆರೆತ ಆ ದಿವ್ಯಸ್ಪಂದನದಿಂದ
ಆನಂದವೆಂದರೇನೆಂದು ಸ್ವಂತ ಕಂಡವನು ನಾನು.

ದಿಗಂತದಂಚನ್ನು ಮೀರಿ ಹರಿವ ನಿನ್ನ ಲಕ್ಷ್ಯ ದೃಷ್ಟಿ
ಕೋಟಿಕೋಟಿ ವಿಶಿಷ್ಟ ವ್ಯಕ್ತಿ ವೈವಿಧ್ಯತೆ ಮೀರಿ,
ಮರುಭೂಮಿಯ ಮರಳಿನ ಕಣದಂತಹದಜ್ಞಾತ ನನ್ನ
ಯಾಕೆ ಹೇಗೆ ವರಿಸಿತೊ, ಇದು ತಿಳಿಯದ ಕ್ಲಿಷ್ಟ ಪ್ರಶ್ನೆ.

ನಿನ್ನನನ್ನ ಬಂಧ, ಇದು ಬರೆ ಅಂತಿಂತಹದಲ್ಲ,
ಇಹಪರ ಕಾಲಗತಿಗಳ ಮೀರಿದಕ್ಷಯ ಪ್ರವಾಹ;
ನೀನಿಲ್ಲದೆ ನಾನಿಲ್ಲ, ನಾನಿಲ್ಲದೆ ನೀನಿಲ್ಲದ ಬೆಸೆತ
ಸೃಷ್ಟಿಲಯ ಚಕ್ರದ ಗುಂಟ ನಡೆಯುವುದು ನಿತ್ಯ.

ಚೆಲುವು ಒಲವಿನ ನಿತ್ಯ ಗಾಲಿಚಕ್ರದ ಮೇಲೆ
ಸದಾ ಸುತ್ತುವ ನಮಗೆ ಅಗಲಿಕೆಯೆ ಇಲ್ಲ;
ಕಾಲಲೋಕದ ಕ್ಷಣಿಕ ಒಡಕುತೊಡಕು ನಮ್ಮ
ಸಮ್ಮಿಲನದ ಹರಿವಿಗೆ ಬಾಧಕವಾಗುವುದಿಲ್ಲ.

ನಮ್ಮಿಬ್ಬರ ಸ್ವರಮೇಳ ಎಂದೂ ತಪ್ಪುವುದಿಲ್ಲ,
ನಮ್ಮ ಒಸೆತದಲಿ ದೋಷದ ಲವಲೇಶವಿಲ್ಲ;
ಸೂರ್ಯಚಂದ್ರಯುಗ ಮೀರಿ ಬೆಸೆತ ನಾವು
ಶಿವನಾಣೆ ಶಿವನಂತೆ ನಿತ್ಯ, ಶಿವಸತ್ಯ ಸತ್ಯ.

READ THIS POEM IN OTHER LANGUAGES
Close
Error Success