ನಡೆದಷ್ಟು ದೂರ ನಾನಿಟ್ಟಿರುವ ಧ್ಯೇಯ
ಮತ್ತಷ್ಟು ದೂರ ದೂರ ಓಡುತ್ತಿದೆಯಲ್ಲ;
ಕೈಗೆಟುಕುವಷ್ಟಿತ್ತು, ಒಂದು ಹೆಜ್ಜೆ ದೂರ -
ಹೆಜ್ಜೆಯಿಟ್ಟರೆ ಮರೀಚಿಕೆಯಾಯಿತಲ್ಲ.
ನಾನಿಟ್ಟ ಧ್ಯೇಯ, ಬರಿ ಅಂತಿಂತಹದಲ್ಲ,
ಇಹಪರದಲ್ಲೆಲ್ಲೂ ಸಿಗುವಂತಹದಲ್ಲ;
ಕನಸಿನ ಗಂಟೆಂದು ತಿಲಾಂಜಲಿ ಕೊಟ್ಟಾಗ,
ಮೈತಳೆದು, ಕೈ ನೀಡಿ ನನ್ನ ಕರೆಯಿತಲ್ಲ.
ಕನಸೋ, ಇದು ನೆನಸೋ, ತಿಳಿಯದೆ ನಾನು,
ವರುಷವಿಡಿ ಚಿತ್ತ ಸಂವಾದದಲಿ ಕಳೆದೆ;
ಮೈತಳೆದ ಐಸಿರಿ ದೃಢತೆಯಿಂದ ನಿಂತಾಗ,
ಆ ಸತ್ತ್ವಕ್ಕೆ ಸೋತು, ನನ್ನನ್ನಲ್ಲೆ ನಾನು ಕಂಡೆ.
ನನ್ನ ಧ್ಯೇಯ ಮುಂದೆ, ನಾನಾದರ ಹಿಂದೆ ಹಿಂದೆ,
ಇನ್ನೆಷ್ಟು ದಿನ ವರುಷ ಕಣ್ಣುಮುಚ್ಚಾಲೆಯಾಟ?
ಮನುಜ ಸಹಜ ಅತುರ ಕಾತುರ ತೋರಿ,
ಧ್ಯೇಯಸಾಧನೆಗಾಗಿ ಮುಂದೆ ಹೆಜ್ಜೆಯಿಟ್ಟೆ.
ಒಂದೊಂದು ಹೆಜ್ಜೆಗೂ ಒಂದೊಂದು ಹಿನ್ನೆಗೆತ,
ಒಂದೊಂದು ಯತ್ನವೂ ಒಂದೊಂದು ವೈಫಲ್ಯ;
ಮುನ್ನಡೆದಷ್ಟು ಗಿರಿಕಂದರಗಳ ಅಡೆ ತಡೆ,
ಮುಳ್ಳು ಬೇಲಿ ಕಟ್ಟುಪಾಡುಗಳ ಬೇತಾಳ ಗೋಡೆ.
ಗುರಿ ಮುಂದಿರುವಾಗ, ಗುರಿಗೆ ನಾ ಬೇಕಿರುವಾಗ,
ನಮ್ಮಂತರವು ಲೌಕಿಕ ಲೋಪವಾಗಿರುವಾಗ,
ಇದಾವ ಲೋಕದವಾಂತರ ನಮ್ಮ ಮಧ್ಯೆ ನಿಂತು,
ಅದಾವಲೌಕಿಕದಾಟ ಹೀಗೆ ಆಡುತ್ತಿದೆಯೋ.
ನಾನೋ ದಣಿದಿರುವೆ, ಅವಳೋ ತಬ್ಬಿಬ್ಬು,
ಜೊತೆಯಿದ್ದೂ ಜೊತೆಯಿಲ್ಲದ ನೋವು, ಕುಚೇಷ್ಟೆ;
ಇರಬೇಕು, ಇದ್ದದನ್ನು ಬದುಕಬೇಕು, ಹೌದು,
ಅದೆಷ್ಟು ಕಾಲ ಹೀಗೆ ನಡೆಯಬೇಕೋ ಏನೋ!
ಮುಂದೊಂದು ದಿನ ಕತ್ತಲ ಹರಿದು ಬೆಳಕು
ನಮ್ಮತ್ತ ಕಣ್ಣು ಹರಿಸುವುದೆಂಬ ಆಶೆ;
ದಣಿದಿರುವ ಕಾಲು ವಿರಾಮ ಬಯಸಿರುವಾಗ
ಕಾಲದ ಭರವಸೆಯಿಂದ ಮಲಗಿರುವೆ ನಾನು.
This poem has not been translated into any other language yet.
I would like to translate this poem