ಗಾಂಧಿ Poem by Praveen Kumar in Bhavana

ಗಾಂಧಿ

ಗಾಂಧಿ,
ನೀನಿಂದು, ಹೃಸ್ವ ದೃಷ್ಠಿಗಳ ಬಂಧಿ;
ಬರ್ನಾರ್ಡ್ ಶಾ ರಿಂದ,
ಟಾಗೋರ್ ನೆಹರೂವರೆಗೆ,
ಭಲೆ, ಭಾಪುರೆ, ಎನಿಸಿದ ಮಹಾತ್ಮ;
ಭಾರತದ ಸ್ವಾತಂತ್ರ್ಯ ಹೋರಾಟದ ಆತ್ಮ,
ದೇಶ ಪುನರುತ್ಥಾನದ ಪ್ರವಾದಿ,
ಅವಾಸ್ತವಿಕವಾದಿಯೆಂದು ಇಂದು,
ಜನ ಹಿಂದೆ ಹಿಂದೆ ತಳ್ಳುತ್ತಾರೆ,
ನಿಜ ಜೀವನದ ದೃಷ್ಠಿಪಟಲದಿಂದ,
ನಿಷ್ಸರುಣೆ, ನಿರ್ದಯತೆಯಿಂದ.

ಅಡ್ಡಪಂಚೆಯನ್ನುಟ್ಟು, ಹೊರಾಡಿದ ಅರೆನಗ್ನ ಫಕೀರ,
ಬೊಚ್ಚು ಬಾಯಿ ಅಜ್ಜ;
ತನ್ನ ಊರುಗೋಲಿನ ಬಲದಿಂದ,
ಹೊತ್ತು ಮುಳುಗದ, ವಿಶ್ವಸಾಮ್ರಾಜ್ಯದಿಂದ,
ದೇಶಕ್ಕೇ ಸ್ವಾತಂತ್ರ್ಯ ಸೆಳೆದುಕೊಟ್ಟ;
ಗುಂಡು, ತುಫಾಕಿಗಳ ಆರ್ಭಟವಿಲ್ಲ,
ಸೇನೆ, ಕವಾಯತ್ತುಗಳ ಜಂಜಾಟವಿಲ್ಲ,
ಸತ್ಯಸತ್ಯವೆಂದು, ಸ್ವಾತಂತ್ರ್ಯ ಸತ್ಯ ಮಾಡಿಬಿಟ್ಟ;
ಆ ಚಿತ್ರವಿಚಿತ್ರ ಬಡಕಲು ಅಜ್ಜ,
ನಮಗೀಗ ಅಪ್ರಯೋಜಕ,
ಎಲ್ಲೋ, ಎಂದೋ, ನಡೆದಿದ್ದ ಕಣ್ಣುಕಟ್ಟಿನ ಮೋಡಿಗಾರ.

ಬಡವರ ಕಂಡು,
ತಾನೂ ಬಟ್ಟೆಬರೆ ಬಿಟ್ಟನೆಂದು,
ದಲಿತರ ಕಂಡು,
ತಾನೂ ಕಕ್ಕಸು ಪಾಯಖಾನೆ ತೊಳೆದನೆಂದು,
ಮೂಢರು ಹಾಸ್ಯ ಮಾಡಬಹುದು,
ಆಕಾಶಕ್ಕೆ ಕೆಕ್ಕರಿಸು ಗುಳಬಹುದು;
ಗಾಂಧಿ,
ಆತ್ಮವೇನೆಂದೇ ತಿಳಿಯದ ಕುರುಡುಜನಕೆ,
ಮಹಾತ್ಮನೇನೆಂಬ ಅರಿವು ಬರುವುದಾದರು ಹೇಗೆ?
ಯಂತ್ರ, ತಂತ್ರಗಳ ಮಧ್ಯೆ, ಹೃದಯಕಳೆದವರಲ್ಲಿ,
ಮಾನವತೆಯಮೃತದ ರುಚಿ, ಹಿಡಿಸುವುದಾದರೂ ಹೇಗೆ?

ಎಲ್ಲರ ಹಾಗೆ, ಮಕ್ಕಳು ಮೊಮ್ಮಕ್ಕಳಿಗಾಗಿ,
ದೇಶ, ಜನ, ನೀನು ಕಡೆಗಣಿಸಿದವನಲ್ಲ;
ಎಲ್ಲರ ಹಾಗೆ, ಸುಖ, ಸಂಪತ್ತು, ಪದವಿಯೆಂದು,
ಭೋಗದೆಡೆ ಕಣ್ಣೆತ್ತಿ ನೋಡಿದವನೆ ಅಲ್ಲ;

ನೀನು, ಒಳಗೊಳಗೆ ನುಗ್ಗಿ, ಹೊರಗೆ ಚಿಮ್ಮಿದವನು,
ಸ್ವಾಭಿಮಾನದಿ, ಸತ್ಯಾಭಿಮಾನ ಬೆಳೆಸಿದವನು;
ತನ್ನನ್ನೆ ಸುಟ್ಟು, ದೇಶ, ವಿಶ್ವ, ಬೆಳಗಿದವನು;
ವಿಶ್ವನಂದಾದೀಪವಾಗಿ, ಮಹಾತ್ಮಪದ ಗಳಿಸಿದವನು.

ಗಾಂಧಿ,
ಸ್ವಯಂ ಬೆಳಕು ನೀನು, ದೇಶಕ್ಕೆ ಹಗಲು ತಂದವನು,
ಸಾವಿರ ನಕ್ಷತ್ರ, ಚಂದ್ರಗಳಿಗೆ, ಬೆಳಕು ಕೊಟ್ಟವನು;
ಅದಕ್ಕಾಗಿಯೆ ನಿನಗೆ, ಮಿಂಚುದೀಪಗಳು ಅವಶ್ಯವಿಲ್ಲ;
ನೀನದ್ದಲ್ಲಿ, ಜ್ಞಾನ ತಿಳುವಳಿಕೆ, ಸಂಕಲ್ಪ ಬೆಳಗಿ ಬಂತು,
ನೀನಿದ್ದಲ್ಲಿ, ಶಕ್ತಿ, ಬಲ ಚಟುವಟಿಕೆ ಹುಡುಕಿ ಬಂತು;
ಇದಲ್ಲವೆ, ಮಹಾತ್ಮತೆಯ ಸಾರ್ಥಕತೆಯ ಹೆಗ್ಗುರುತು?
ಇದಲ್ಲವೆ, ಮಾನವತೆಯ ಉತ್ತುಂಗತೆಯ ಏಕೈಕ ಗುರುತು?

ಬುದ್ಧ, ಏಸುಕ್ರಿಸ್ತರ ಸಮಸಮ ಚೇತನ ನೀನು;
ಮಾನವ-ಮಾನವರ ಮಧ್ಯೆ ಮತದ ಗೋಡೆ ಕಟ್ಟದ ನೀನು,
ಬುದ್ಧ ಕ್ರಿಸ್ತರ ಮೀರಿ, ಜನಮನ ಬೆಳಗಿದವನು;
ಬದುಕಿದ್ದಾಗಲೆ, ಶಾಂತಿಯ ಪವಾಡ ತೋರಿದವನು;
ನಿನ್ನೆತ್ತರ, ಗಾತ್ರದ, ದೃಶ್ಯ ಸರ್ವವೇದ್ಯವಲ್ಲ,
ಎತ್ತರವೇರಿದವ ಮಾತ್ರ, ನಿನ್ನೆತ್ತರ ಕಣ್ಣು ಹರಿಸಬಲ್ಲ;
ಲೌಕಿಕ ಗಾತ್ರ ಹರಿದು ಹಬ್ಬಿದವ, ನಿನ್ನ ಮಹಿಮೆ ತಿಳಿಯಬಲ್ಲ;
ಗಾಂಧಿ,
ನಿನ್ನ ಚೇತನದ ಗಂಧ,
ಇಂದು ನಿನ್ನೆಗೆ ಸೀಮಿತವಲ್ಲ,
ಅಚಂದ್ರಾರ್ಕ ಚರಿತ್ರೆಯಲಿ, ಜನಮನ ತೀಡುವ ಗಂಧ,
ಭಾರತದ ಹಿರಿಚೇತನದ ಗುರುತು ನೀಡುವ ಶ್ರೇಷ್ಠ ಸೌಗಂಧ.

Friday, April 29, 2016
Topic(s) of this poem: personality
COMMENTS OF THE POEM
READ THIS POEM IN OTHER LANGUAGES
Close
Error Success