ಪ್ರೀತಿಯ ಚಿನ್ನದ ಪಂಜರದೊಳಗೆ,
ಪ್ರೀತಿಯ ಸ್ವಾದದ ಹಂದರದೊಳಗೆ
ಚಿಲಿಪಿಲಿಯಾಡುವ ಗಿಣಿಮರಿ ನಾನು;
ನೀನಿಟ್ಟದೆ ಊಟ, ನೀ ಕಲಿಸಿದೆ ಪಾಠ,
ನೀನಾಡಿಸೆದಂತೆ ನಾನಾಡುವೆ ಆಟ.
ಪುಕ್ಕಗಳೆರಡನು ಬಿಚ್ಚದೆ ನಾನು,
ನನ್ನೀ ಅರಮನೆ ಹೊಸ್ತಿಲು ದಾಟದೆ,
ಪಂಜರದೊಳಗಿರೆ ಬಯಸುವೆ ದಿನವಿಡಿ;
ನಿನ್ನ ಕಣ್ಣಿನ ಪಹರೆ ನನಗುತ್ಸಾಹ,
ನಿನ್ನುಸಿರಿನ ಬಿಸೆಯೆ ನನಗುಲ್ಲಾಸ;
ಪ್ರೀತಿಯ ಬಂಧನ ಸ್ವಾತಂತ್ರ್ಯದ ಸ್ಪಂದನ;
ಯಾರಿಗೆ ಬೇಕು ಲೋಕದ ಗೊಡವೆ,
ನಿನ್ನ ಸಾನ್ನಿಧ್ಯದ ನವಿರು ನನ್ನೊಡನಿರುವಾಗ?
ಬಾಗಿಲು ತೆರೆಯದೆ, ಹೊರಗಡೆ ನೂಕದೆ
ಪಂಜರದಲ್ಲಿ ನೀ ನನ್ನನ್ನಿರಗೊಡು;
ನಿನ್ನನು ನೋಡುತ, ಮಾತನು ಕೇಳುತ,
ನಿನ್ನಯ ನಗುವಲಿ ನನ್ನನು ಬೆರೆಯುತ
ಪ್ರೀತಿಯ ಎಸಳಿನ ಮೃದು ಮೆತ್ತೆಯಲಿ
ಕಲ್ಪನೆ ಕನಸಿನ ಜೋಕಾಲಿಯ ಕಟ್ಟಿ
ನನ್ನನೆ ಮರೆತು ನಾ ಚಿಲಿಪಿಲಿ ಹಾಡಿ
ತುಂಬವೆ ಗೂಡಲಿ ಭಾವ ಸಂಗೀತ.
ನೀನೋಡಿಸಿದಾಗ ಪುಕ್ಕವ ಬಿಚ್ಚದೆ,
ಹಾರದೆ ನಾನು ನಿನ್ನೆದುರಲೆ ನಿಲುವೆ;
ಪ್ರೀತಿಯ ಸುಳಿಯಲಿ ಪುಕ್ಕವು ತೊಡರಿದೆ,
ಹಾರಲಿ ಹೇಗೆ ನಾ ದೂರ ನಿನ್ನಿಂದ?
ಕೈಯಲಿ ಎತ್ತಿ ನೀ ಮೈಯನು ತಡವಿ
ಮುದ್ದಿಸು ಎಚಿದೆ ಪಂಜರದಲ್ಲಿರುವೆ.
ಕಾಳನೆ ಇಕ್ಕು, ನೀ ಹಣ್ಣನೆ ಇಕ್ಕು,
ನೀರನೆ ಇಕ್ಕು, ನೀ ಹಾಲನೆ ಇಕ್ಕು,
ಹಸಿವು ಬಾಯಾರಿಕೆ ಗಣಿಸದೆ ನನ್ನ
ನಿಶ್ಶಕ್ತಿಯ ಪಾಡಿಗೆ ಬಿಟ್ಟರು ಚೆನ್ನ;
ನೀ ಮರೆಯದೆ ದಿನ ದಿನ ಎದುರಲಿ ಬಂದು
ತಿಳಿನಗು, ಮಾತು, ಪ್ರೀತಿಯನಿಟ್ಟು
ಹೃದಯದ ಭಾವವ ಕಣ್ಣಲಿ ತಂದು
ನನ್ನಾತ್ಮದ ಬಡತನ ನೀಗಿಸು ದಿನ ದಿನ;
ಪಂಜರ ಹಂದರ ಸುತ್ತಲು ಕಟ್ಟಿ,
ನಿನ್ನಲೆ ನನ್ನನು ಸದಾ ತಬ್ಬಿಟ್ಟು
ಬಂಧನ ಸುಖದ ಅನನ್ಯತೆಯಲ್ಲಿ
ಇನ್ನೆಲ್ಲೂ ಕಾಣದ ವಿಶಿಷ್ಠತೆ ನೀಡು.
ನಿನ್ನ ಪಂಜರವೆಂದರೆ ಅಂಜಿಕೆ ಬರದು,
ನಿನ್ನ ಹಂದರವೆಂದರೆ ಬಂಧನ ಇರದು,
ಇದು ಸುಖಸ್ವಾತಂತ್ರ್ಯದ ಅಲೌಕಿಕ ಅರಮನೆ,
ಸುರ ಯಕ್ಷಣಿ ರಮಿಸುವ ನಾಟ್ಯ ಶಾಲೆ,
ಇದು ಋ ದೇವತೆಗಳ ತಪಸ್ಸಿನ ಶಾಲೆ;
ಯಾವ ತಪಸ್ಸಿನ ಫಲವೋ ನೀ ಬಾಗಿಲು ತೆರೆದು
ಪಂಜರದೊಳಗೆ ನನ್ನ ಕೂಡಿಟ್ಟೆ,
ಪ್ರೀತಿ ಅನುರಾಗದಿ ಕಟ್ಟಿ, ಮಾತಿನ ಮುತ್ತು ರಾಶಿಯನಿಕ್ಕಿ
ಪಂಜರದಲ್ಲೆನಗೆ ವಿಶ್ವವನಿಟ್ಟೆ,
ಗಿಣಿಮರಿ ಕಾಣದ ಸಿರಿ ನೀ ಕೊಟ್ಟೆ.
This poem has not been translated into any other language yet.
I would like to translate this poem