ಹಲವು ಪದರುಗಳ ಕೆಳಗೆ, ಕಾಲಕಲ್ಪದ ಒಳಗೆ,
ಸೂರ್ಯೋದಯದ ಮುಂಜಾವು ಕಿರಣ ಹರಡಿತ್ತು;
ಬಾಲ್ಯದ ಮಬ್ಬು ಮಸಕು ಎಳೆಬಿಸಿಲಲಿ ಕರಗಿ,
ಹೊಸ ಹುರುಪು, ಹುಮ್ಮಸ್ಸು ಉದ್ದುದ್ದ ಚೆಲ್ಲಿತ್ತು;
ಯೌವನದ ಉಷಾಕಿರಣ, ಹೃದಯದಲಿ ಚಿಲಿಪಿಲಿ ರಾಗ,
ರಂಗುರಂಗಿನ ಆಕಾಶ ಹೊಸಲೋಕ ತೆರೆದಿತ್ತು;
ಎನೋ ಆಶೆ ಆಕಾಂಕ್ಷೆ, ತಿಳಿಯದ ಕನಸು ಭಾಷೆ,
ಭವಿಷ್ಯತ್ತು ಎದೆ ಬಿಚ್ಚಿ ಅವರೆದುರು ನಿಂತಿತ್ತು.
ಯೌವನದ ಹಕ್ಕಿಗಳು, ಕಣ್ಣಿನಲಿ ಮಿಂಚುಗಳು,
ಹೊಸ ಜೀವ, ಹೊಸ ಭಾವ, ಹೊಸ ರಾಗ ಎದುರಿತ್ತು;
ಯೌವನದ ಮೆರುಗಿನಲಿ ವಿದ್ಯುತ್ತಿನ ಬಳ್ಳಿಗಳು
ಎದ್ದೆದ್ದು ಪ್ರೇಮಿಗಳ ಸುತ್ತಿ ಸುತ್ತಿ ಹಿಡಿದಿತ್ತು;
ಬಿಡಿಸಲಾಗದ ಬಂಧ ಯೌವನದ ಹೃದಯದಿಂದ
ಒಬ್ಬರೊಬ್ಬರನು ಬಯಸಿ ಬೇರೆಲ್ಲ ಮರೆಸಿತ್ತು;
ಒಂದೆ ದಿಕ್ಕು, ಒಂದೆ ಮೊರೆತ, ಎರಡು ಧ್ರುವ ಸಂಧಿಸುವ
ಹಂಬಲದ ಹೊಸ ಲೋಕ ಕಟ್ಟಿದ್ದರು ಸುತ್ತಮುತ್ತ.
ಬಯಕೆ ಕಣ್ಣು ಕವಿದು ಬಂತು, ಪ್ರೀತಿ ಹೃದಯ ತಡೆದು ನಿಂತು,
ನಲ್ಲನಲ್ಲೆಯರ ನಡುವೆ ಮುಳ್ಳುಬೇಲಿ ಎದ್ದುಬಂತು;
ಬೇಲಿ ಹಾರುವ ಹುಮ್ಮಸ್ಸನ್ನು ರಕ್ತಛಾಯೆ ಆವರಿಸಿ ನಿಂತು,
ಚಿನ್ನ ಹೊಳಪು ಲೋಕದಲ್ಲಿ ನೋವು ಗ್ರಹಣ ಹಬ್ಬಿ ಬಂತು;
ಒಂದಕ್ಕೊಂದು ಬೆಸೆದ ಹೃದಯ, ಮುಳ್ಳು ಬೇಲಿ ಆಚೆ ಈಚೆ
ಸಂಗಾತದಾಶೆ ಮೇಳಕ್ಕೆ ಹಾತೊರೆದುವು ಘಳಿಗೆ ಘಳಿಗೆ
ಹೇಗೆ ಬೇಲಿ ಕೊಡವಿ ಹಾಕಿ, ಹೇಗೆ ಮುಳ್ಳು ಹಾರಿ, ಸೇರಿ
ಮತ್ತೆ ತಮ್ಮ ಪ್ರೀತಿ ಲೋಕ ನವನವೀನ ನಿರ್ಮಿಸಲಿಯೆಂದು.
ಅತ್ತ ಅವಳು, ಇತ್ತ ಇವನು, ಹೃದಯ ಭಾಷೆ ಸಂಜ್ಞೆುಂದ,
ಕೊಟ್ಟು ಪಡೆದು, ಕುಡಿಸಿ ಕುಡಿಸಿ, ಸ್ವಂತದೊಂದು ಕೋಟೆಕಟ್ಟಿ,
ಎಲ್ಲ ಮರೆತು, ಬೇಲಿ ಮರೆತು, ತಮ್ಮ ಲೋಕದಲ್ಲಿ ಬೆರೆತು,
ಒಬ್ಬರೊಬ್ಬರೊಳಗೆ ಅವರು ಪ್ರೀತಿಸುತ್ತ ಬೆಸೆದರು;
ಎಲ್ಲೆ ಇರಲಿ ಗಮನವೆಲ್ಲ ಹೃದಯ ಬೆಸೆದ ಪ್ರೇಮಿಯತ್ತ,
ಒಂದು ನೋಟ, ಒಂದು ಮಾತಿಗಾಗಿ ಅವರ ಹಂಬಲ;
ಏನೋ ಆಶೆ, ಏನೋ ಕನಸು, ತಿಳಿಯದಂತ ಭೀತಿ ನೋಟ,
ನಲ್ಲ ನಲ್ಲೆ ಭಾವೋದ್ವೇಗದಲ್ಲಿ ಸಿಕ್ಕಿ ಕೂಡಿ ನಿಂತರು.
ಕಾಲಚಕ್ರ ತಿರುಗಿನಂತೆ, ಅವನು ದೂರ ಹೊರಟು ನಿಂತ,
ಕಣ್ಣು ತುಂಬಿ, ತಲೆಯ ತಗ್ಗಿ, ತನ್ನ ನೋವು ತೋಡಿಕೊಂಡೆ;
ಕಣ್ಣನೆತ್ತಿ ನೋಡಿ ಅವಳು, ಕಣ್ಣು ತುದಿಯ ನೀರು ಒರೆಸಿ,
ಹಲವು ವರ್ಷ ನೀರನೆರೆದ ಗಿಡವು ಫಲವ ಬಿಡುವ ಸಮಯ
ದೂರವಾುತೆಂದು ಕೊಂಡು, ತಾನಿದನು ಕಂಡು ಬದುಕೆನೆಂದು
ಭಾರ ಹೃದಯದಿಂದ ಬಗ್ಗಿ ಬಸಳೆಯಂತೆ ಕುಸಿದಳು;
ಅವಳನೆತ್ತಿ ಎದೆಗೆ ಹಿಡಿದು, ನಿನ್ನ ಬಿಟ್ಟು ಇರಲಾರೆನೆಂದು,
ಕುಸಿವ ಹೃದಯ ಗಟ್ಟಿ ಹಿಡಿದು, ಅವಳ ಬಿಗಿದು ಹಿಡಿದನು.
ಅವನು ದೂರ ಹೊರಡಬೇಕು, ಅವಳು ಇಲ್ಲಿ ಇರಲೆ ಬೇಕು,
ಪ್ರೀತಿ ಜೀವ ಬೆಸುಗೆ ಬಿಟ್ಟು ದೂರ ನಿಂತು ಬದುಕದು;
ವಿಧಿಯು ಕಡೆಗೋಲು ಸುತ್ತಿ, ಅವರ ಪ್ರೀತಿ ಮೊಸರಿನಿಂದ
ಜೀವ ಕೊರೆವ ನೋವು ರಾಶಿ ಕಡೆದು ಮೇಲೆ ಚೆಲ್ಲಿತು;
ನೋವು ಭಾರ ತಡೆಯದಂತ ಎಳೆಯ ತುಂಬು ಪ್ರೀತಿ ಹೃದಯ
ನೋವು ಮೀರಿ, ಮೇಲೆ ಏರಿ, ಒಬ್ಬರೊಬ್ಬರೊಳಗೆ ಸೇರಿ,
ತೋಳುಬಂಧದಲ್ಲಿ ತಮ್ಮ ಪ್ರೀತಿ ಬಯಕೆ ತೃಪ್ತಿಗೊಳಿಸಿ
ಜೊತೆಯ ಬಿಡದ ಬೆಸುಗೆಯಾಗಿ ದಿಗಂತದತ್ತ ಹೋದುವು.
ಗೋಡೆ, ಬೇಲಿ, ಗೊಡವೆ ಇಲ್ಲ, ಪ್ರೀತಿಯೊಂದೆ ಒಡವೆ ಅಲ್ಲಿ,
ನಲ್ಲ ನಲ್ಲೆ ರೆಕ್ಕೆ ರೆಕ್ಕೆ ಟೆಕ್ಕೆುಟ್ಟು ನಲಿದರು;
ಚಿನ್ನದಂಚಿನ, ಬೆಳ್ಳಿ ಹೊಳಪಿನ ಉಣ್ಣೆಗದ್ದಿಗೆ ಮೇಘದಾಟಿ
ಅಂತರಿಕ್ಷ ಛಾವಣಿಯನೇರಿ, ದಿಕ್ಕುದಿಕ್ಕಿನಲ್ಲಿ ಹಾರಿ
ಪ್ರೇಮ ಲಾಂಛನವಾಗಿ ಅವರು, ಹೃದಯ ತುಂಬಿ ಮೆರೆದರು;
ಚುಂಚಚುಂಚಿಗಿಟ್ಟು ಅವರು, ಪ್ರೀತಿಗೊಂದು ಅಭಿವ್ಯಕ್ತಿಯಾಗಿ
ಹೃದಯ ಕೂಡಿ ಹಾಡುವಾಗ, ಪ್ರೀತಿ ಬಂಧ ಬೆಸೆಯುವಾಗ,
ನೇರ ಬೆಳಕು ಲೋಕದತ್ತ ಕೂಡಿ ಹಾರಿ ಹೋದರು.
This poem has not been translated into any other language yet.
I would like to translate this poem