ಗಾಜುಮಣಿಗಳ ನಡುವೆ ಅಡಗಿರುವ ಬಜ್ಜರವು ನೀನು,
ತರ್ಕಕಾರಣ ಮಧ್ಯೆ ನೀನು ಪ್ರತಿಭೆಯ ಸತತ ಸೆಲೆ,
ಭಾವಾನುಭಾವದಲಿ ಪ್ರೇಮ ಸಮರ್ಪಣೆಯ ರೂಪ,
ಅನುಭೂತಿಯಲಿ ನೀನು ಅನುನಯದ ವಿದ್ಯೆ.
ಮೇಲೇರಿ ಮೈತೋರೆ ರೆಕ್ಕೆಗಳು ನಿನಗಿಲ್ಲ,
ನವುರು ಗಾಂಭೀರ್ಯದ ಭಾರದಲಿ ನೆಲದಲ್ಲಿ
ಶುಭ್ರ ಸ್ಫಟಿಕದ ಶುದ್ಧ ಬೆಳಕಲ್ಲಿ ಮೈತೊಯ್ದು,
ನೀನು ಇದ್ದಲ್ಲೆ ಎಲ್ಲಕಡೆ ಪ್ರತಿಫಲಿಸಿ ನಗುವೆ.
ಪ್ರಕೃತಿಯ ಸರಸ ನಡೆ, ನಿನ್ನ ನಡೆಯಲಿ ಬೆಸೆದು
ನಿನ್ನ ಕಂಡಕ್ಷಣ ಮನ ಮುಗ್ಧವಾಗುವುದು;
ನಿನ್ನ ರೂಪದ ಹಾಲಿನಲಿ ಮನಸ್ಸನ್ನು ತೊಳೆದಾಗ
ಕೋಪ, ತಾಪ, ಚಿಂತೆ, ದ್ವೇಶ ದಗ್ಧವಾಗುವುದು.
ನಿನ್ನ ಮುಟ್ಟಿದ ಗಾಳಿ ನನ್ನ ಮೈ ಸೋಕಿದರೆ,
ನಿನ್ನ ಮನಸಲಿ ನಾನು ನೆನಪಾಗಿ ಮೂಡಿದರೆ,
ಸುಖ ಸಂವೇದದ ಸುಳಿಗಾಳಿಯಲಿ ನಾನು
ನೆಲಜಾರಿ ಕಲ್ಪನೆಗೆ ಗಾಳಿಯಲ್ಲೇರುವೆನು.
ನೀನಿರುವ ಪರಿಸರದಲ್ಲಿ ಸಂಗೀತ ಹುಟ್ಟುವುವು,
ಬೆಳಕಿನ ಬೇರುಗಳು ಕತ್ತಲಲಿ ಎದ್ದೇಳುವುವು,
ನಿರಾಶೆ ನಂಜು ನಿಚಿತ ನಿಶ್ಯಕ್ತ ಹೃದಯದಲಿ
ಹೊಸದಾಶೆ ಭಾವಗಳ ಬುಗ್ಗೆಗಳು ಹುಟ್ಟುವುವು.
ನೂರರಲಿ ಒಂದಾಗಿರುವ ವಿಭಿನ್ನ ರತ್ನಪ್ರಾಯೆ ನೀನು,
ಪ್ರಶಾಂತ ಗಂಗೆಯ ಪುಣ್ಯ ಧೀರ್ಘ ಧಾರೆಯಂತೆ,
ಗಗನ ಪಥದಲಿ ನಡೆವ ಸೂರ್ಯ ಚಂದಿರರಂತೆ
ನನ್ನಾತ್ಮಕ್ಕೆ ನಿನ್ನಿರವು ದಿವ್ಯ, ಅತ್ಯಗತ್ಯ ಸತ್ಯ.
This poem has not been translated into any other language yet.
I would like to translate this poem